ಕಾರಟಗಿ: ಪಟ್ಟಣ ವ್ಯಾಪ್ತಿಯ ವಸತಿ ರಹಿತರಿಗೆ ನಿವೇಶನ ನೀಡಲು ಸರ್ಕಾರಿ ಭೂಮಿ ಗುರುತಿಸುವಂತೆ ಒತ್ತಾಯಿಸಿ ನಿವೇಶನ ಹಾಗೂ ವಸತಿ ರಹಿತ ಹೋರಾಟ ಸಮಿತಿ ತಾಲೂಕು ಘಟಕದ ಪದಾಧಿಕಾರಿಗಳು ಗುರುವಾರ ಪುರಸಭೆ ಮುಂದೆ ಪ್ರತಿಭಟನೆ ನಡೆಸಿದರು.
ಪಟ್ಟಣ ವ್ಯಾಪ್ತಿಯ ಬಹುತೇಕ ಬಡವರು ಈವರೆಗೆ ನಿವೇಶನ ಹೊಂದಿಲ್ಲ. ಈವರೆಲ್ಲರೂ ಸೇರಿ ಈಗ ವಸತಿ ಮತ್ತು ನಿವೇಶನ ರಹಿತರ ಘಟಕ ನಿರ್ಮಾಣ ಮಾಡಿಕೊಂಡಿದ್ದೇವೆ. ಇನ್ನೂ ಸಾವಿರಾರು ಸಂಖ್ಯೆಯ ಬಡವರು ಈವರೆಗೆ ನಿವೇಶನ, ವಸತಿ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿಲ್ಲ. ಈಗಾಗಲೇ ಅರ್ಜಿ ಸಲ್ಲಿಸಿರುವವರನ್ನು ರಾಜೀವ್‌ಗಾಂಧಿ ವಸತಿ ನಿಗಮದ ನಿವೇಶನ ಮತ್ತು ವಸತಿ ರಹಿತ ಸಮೀಕ್ಷೆ ಪಟ್ಟಿಗೆ ಸೇರಿಸಿಲ್ಲ. ಕಳೆದ 20 ವರ್ಷಗಳಿಂದ ಬಾಡಿಗೆ ಮನೆಯಲ್ಲಿಯೇ ವಾಸ ಮಾಡುತ್ತಿದ್ದು, ಸಂಕಷ್ಟ ಅನುಭವಿಸುತ್ತಿದ್ದಾರೆ. ಕಾಲುವೆ ದಂಡೆಯ ಮೇಲೆ ಗುಡಿಸಲು ಹಾಕಿಕೊಂಡು ಅತಂತ್ರ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ.
ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ಸರ್ಕಾರಿ ಭೂಮಿ ಗುರುತಿಸಬೇಕು. ಭೂಮಿ ಲಭ್ಯವಿಲ್ಲದ ವೇಳೆ ಖಾಸಗಿ ಜಮೀನು ಖರೀದಿಸಿ ಜನರಿಗೆ ಹಂಚಿಕೆ ಮಾಡಬೇಕು. ಈ ಸಂಬಂಧ ಜಾಗೃತ ಸಭೆ ಶೀಘ್ರ ಆಯೋಜಿಸಿ ನಮ್ಮ ತಾಲೂಕು ಘಟಕದ ಪದಾಧಿಕಾರಿಗಳನ್ನು ಆಹ್ವಾನಿಸಬೇಕು ಎಂದು ಆಗ್ರಹಿಸಿದರು.
ರಾಜ್ಯಾಧ್ಯಕ್ಷರಾದ ಚಂದ್ರಶೇಖರ ಡೋಂಗ್ರಿ, ಕೆ.ಎಸ್. ಜನಾರ್ದನ, ಕಾರ್ಯದರ್ಶಿ ಮೋನಪ್ಪ ಮೋಡಿಗೇರ್, ಜಿಲ್ಲಾಧ್ಯಕ್ಷ ಹುಲಗಪ್ಪ, ಕಾರ್ಯದರ್ಶಿ ತಿಮ್ಮಣ್ಣ, ತಾಲೂಕಾಧ್ಯಕ್ಷ ಬದ್ರಿ ನಾಗರಾಜ, ಕಾರ್ಯದರ್ಶಿ ನಾಗರಾಜ, ಉಪಾಧ್ಯಕ್ಷ ಲಕ್ಷ್ಮಣ ನಾಯಕ, ಸದಸ್ಯೆ ಸುನಿತಾ, ಕಾಮಕ್ಷಿ ಸೇರಿ ಇತರರಿದ್ದರು.