ಕಾರ್ಕಳ ಕೋರ್ಟ್ ನೂತನ ಕಟ್ಟಡಕ್ಕೆ ರೂಪುರೇಷೆ ಸಿದ್ಧ

ಆರ್.ಬಿ. ಜಗದೀಶ್ ಕಾರ್ಕಳ
ಕಾರ್ಕಳದಲ್ಲಿ ನ್ಯಾಯಾಲಯದ ನೂತನ ಕಟ್ಟಡಕ್ಕೆ ರೂಪುರೇಷೆ ಸಿದ್ಧಗೊಂಡಿದೆ. ನ್ಯಾಯಾಲಯ ಕಟ್ಟಡಗಳ ಯೋಜನೆಯಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ 15 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿವೆ.
3350 ಚದರ ಮೀಟರ್ ವಿಸ್ತಾರವುಳ್ಳ ಈ ಕಟ್ಟಡದಲ್ಲಿ ನೆಲ ಅಂತಸ್ತು ಹಾಗೂ ಮೊದಲ ಅಂತಸ್ತು ಇರಲಿದೆ. ನಾಲ್ಕು ನ್ಯಾಯಾಲಯಗಳು ಕಾರ್ಯನಿರ್ವಹಿಸುವಂತಹ ವ್ಯವಸ್ಥೆಯೊಂದಿಗೆ ಸುಸಜ್ಜಿತ ಕಟ್ಟಡ ನಿರ್ಮಾಣಗೊಳ್ಳಲಿದೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶ ಬೆಳ್ವಾಯಿ ನಜೀರ್ ಸಾಹೇಬ್ ಅವರ ಮುತುವರ್ಜಿಯಿಂದಾಗಿ ನೂತನ ಕಟ್ಟಡ ನಿರ್ಮಾಣವಾಗಲಿದೆ.

ವಿಸ್ತಾರ: ಸರ್ವೇ ನಂಬ್ರ 88/2, ಸರ್ವೇ ನಂಬ್ರ 84/17 ಬಿ 1ರಲ್ಲಿ ಒಟ್ಟು 2.41 ಎಕರೆ ಪ್ರದೇಶ ಕೋರ್ಟ್ ಇರುವ ಸ್ಥಳವಾಗಿದ್ದು, 1004.04 ಚದರ ಮೀಟರ್ ವಿಸ್ತಾರದಲ್ಲಿ ನ್ಯಾಯಾಲಯದ ಹಳೇ ಕಟ್ಟಡವಿದೆ. ಇನ್ನು ಕೆಲವೇ ತಿಂಗಳಲ್ಲಿ ಕಟ್ಟಡ ನೆಲಸಮಗೊಳ್ಳಲಿದೆ. ನೂತನ ಕಟ್ಟಡ 1.65 ಎಕರೆ ಪ್ರದೇಶ ವ್ಯಾಪ್ತಿಯೊಳಗೆ ನಿರ್ಮಾಣವಾಗಲಿದೆ.

ನೂತನ ಕಟ್ಟಡದಲ್ಲಿನ ವ್ಯವಸ್ಥೆಗಳೇನು?: ನಾಲ್ಕು ನ್ಯಾಯಾಲಯಗಳು, ಕಾರಾಗೃಹ, ಭದ್ರತಾ ಕೊಠಡಿ, ಸಹಾಯಕ ಸರ್ಕಾರಿ ಅಭಿಯೋಜಕರ ಕಚೇರಿ, ನ್ಯಾಯಾಧೀಶರ ಕಚೇರಿ, ತಾಯಿ-ಮಗುವಿನ ಕೊಠಡಿ, ಲಿಫ್ಟ್, ಜನರೇಟರ್, ಬೋರ್‌ವೆಲ್, ಶುದ್ಧ ಕುಡಿಯುವ ನೀರಿನ ಘಟಕ, ರೆಕಾರ್ಡ್ ರೂಂ, ಶೌಚಗೃಹ, ನ್ಯಾಯಾಲಯ ಹೊರಾಂಗಣದಲ್ಲಿ ಡಾಂಬರೀಕರಣ, ವಾಹನ ನಿಲುಗಡೆ ವ್ಯವಸ್ಥೆ, ಹೂದೋಟ, ವಿಶ್ರಾಂತಿ ಕೊಠಡಿ.

ಬದಲಿ ವ್ಯವಸ್ಥೆ ಏನು?: ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯ, ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯ, ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯ, ಸರ್ಕಾರಿ ಸಹಾಯಕ್ಕೆ ಅಭಿಯೋಜಕರ ಕಚೇರಿ ಇವೆಲ್ಲವೂ ತಾತ್ಕಾಲಿಕವಾಗಿ ನಗರ ಪೊಲೀಸ್ ಠಾಣೆ ಸಮೀಪದಲ್ಲಿರುವ 312 ಚದರ ಮೀಟರ್ ವಿಸ್ತಾರವುಳ್ಳ ಮೂವರು ನ್ಯಾಯಾಧೀಶರ ವಸತಿ ಗೃಹದಲ್ಲಿ ಕಾರ್ಯಾಚರಿಸಲಿದೆ. ನ್ಯಾಯಾಧೀಶರ ವಸತಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.

ಯಾವ ವರ್ಷಗಳಲ್ಲಿ ನಿರ್ಮಾಣ?
ಕೋರ್ಟ್ ಕಟ್ಟಡ (ಡಿಸ್ಟ್ರಿಕ್ಟ್ ಮುನ್ಸಿಫ್ ಆಫೀಸ್): 1898
ಮುದ್ದೆ ಮಾಲು ಕಟ್ಟಡ (ಸೇಲ್ಸ್ ಆ್ಯಂಡ್ ಕ್ರಾಶ್ ಹೌಸ್): 1898
ಎಪಿಪಿ ಕಚೇರಿ (ಟಿಫನ್ ರೂಂ): 1898
ಲ್ಯಾಟ್ರಿನ್ ಕಟ್ಟಡ (ಸಿಬ್ಬಂದಿಗಳಿಗೆ): 1898
ಜೆಎಂಎಫ್‌ಸಿ ಜಡ್ಜ್ ಕ್ವಾಟ್ರಸ್: 1978,
ಮುನ್ಸಿಫ್ ಕ್ವಾಟ್ರಸ್: 1978
ಶೌಚಗೃಹ ಕಟ್ಟಡ (ಸಾರ್ವಜನಿಕರಿಗೆ): 1994
ಇ-ಕೋರ್ಟ್ ಕಟ್ಟಡ: 2010