ಶಿಕ್ಷಕಿ ಸಲಾಂ ಎಂದರೆ ಜೈ ಶ್ರೀರಾಮ್ ಎಂದು ಕೂಗುವ ಮಕ್ಕಳು

ನವದೆಹಲಿ: ಪಾಕಿಸ್ತಾನದ ಕರಾಚಿಯ ಶಾಂತಿ ಏರಿಯಾದಲ್ಲಿ ಹಿಂದು ದೇವಸ್ಥಾನದಲ್ಲಿ ಮುಸ್ಲಿಂ ಶಿಕ್ಷಕಿ ಹಿಂದೂ ಮಕ್ಕಳಿಗೆ ಪಾಠ ಮಾಡುತ್ತಾರೆ. ಆಕೆ ಮುಸ್ಲಿಮರ ಸಂಪ್ರದಾಯಬದ್ಧ ಉಡುಗೆ ತೊಟ್ಟು ದೇವಸ್ಥಾನಕ್ಕೆ ಆಗಮಿಸಿ ಮಕ್ಕಳಿಗೆ ಸಲಾಮ್ ಎಂದು ಹೇಳಿದರೆ, ಆ ಮಕ್ಕಳೆಲ್ಲ ಪ್ರತಿಯಾಗಿ ಜೈ ಶ್ರೀರಾಮ್ ಎಂದು ಕೂಗುತ್ತಾರೆ.

ಇಲ್ಲೊಂದು ಆಸಕ್ತಿದಾಯಕ ಕತೆಯಿದೆ. ಆಕೆ ಆನಮ್​ ಅಘಾ ಎಂಬ ಮುಸ್ಲಿಂ ಶಿಕ್ಷಕಿ. ದಕ್ಷಿಣ ಬಂದರು ಪ್ರದೇಶದ ಬಸ್ತಿ ಗುರು ಹಿಂದು ಕಾಲನಿಯ ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳುತ್ತಿದ್ದಾರೆ. ಆದರೆ, ಶಾಲೆ ಇರುವ ಪ್ರದೇಶದಲ್ಲಿ ಹೆಚ್ಚಿನ ಜನರು ಹಿಂದೂಗಳು. ಅವರಿಗೆ ಆ ಸ್ಥಳವನ್ನು ಖಾಲಿ ಮಾಡುವಂತೆ ಭೂ ಮಾಫಿಯಾದವರಿಂದ ಬೆದರಿಕೆಯೂ ಇದೆ.
ಅನಧಿಕೃತ ಹಿಂದು ಕಾಲನಿಯ ಮಕ್ಕಳಿಗೆ ಶಿಕ್ಷಣ ನೀಡುವುದಕ್ಕೋಸ್ಕರ ಮಾನವ ಅಭಿವೃದ್ಧಿ ಸಂಸ್ಥೆಯ ಮುಖ್ಯಸ್ಥ ಅರಿಫ್​ ಹಬೀಬ್​ ಎಂಬುವವರು ಆನಮ್​ ಅವರನ್ನು ನೇಮಕ ಮಾಡಿದ್ದಾರೆ.

ನಾನೊಬ್ಬ ಮುಸ್ಲಿಂ ಶಿಕ್ಷಕಿಯಾಗಿ ಹಿಂದು ಮಕ್ಕಳಿಗೆ ಶಿಕ್ಷಣ ನೀಡುವುದು ಸುಲಭವಲ್ಲ. ಹಲವು ಸವಾಲುಗಳು ನನ್ನ ಮುಂದಿವೆ. ನಾನು ಶಾಲೆಯಲ್ಲಿ ಯಾವತ್ತೂ ಧರ್ಮದ ವಿಚಾರ ಮಾತನಾಡುವುದಿಲ್ಲ. ಬೇರೆ ವಿಷಯಗಳನ್ನು ಕಲಿಸುತ್ತೇನೆ. ಆ ಮಕ್ಕಳ ಭಾವನೆಯನ್ನು ಗೌರವಿಸುತ್ತೇನೆ. ನಾವು ಎರಡೂ ಧರ್ಮಗಳ ಹಬ್ಬವನ್ನೂ ಒಂದಾಗಿ ಸಂಭ್ರಮದಿಂದ ಆಚರಿಸುತ್ತೇವೆ ಎಂದು ಆನಮ್ ಹೇಳಿಕೊಂಡಿದ್ದಾರೆ.

ಸುಮಾರು 80-90 ಮನೆಗಳಿರುವ ಈ ಕಾಲನಿಯ ಜನರನ್ನು ಒಕ್ಕಲೆಬ್ಬಿಸುವ ಸಲುವಾಗಿ ಸದಾ ಬೆದರಿಕೆ ಹಾಕುತ್ತಿದ್ದು ಒಂದು ಬಾರಿ ಗುಡಿಸಲುಗಳಿಗೆ ಬೆಂಕಿಯನ್ನೂ ಹಾಕಲಾಗಿದೆ. ಇಲ್ಲಿಂದ ಹೋಗಿ ಎಂದೂ ಒತ್ತಾಯಿಸಲಾಗುತ್ತಿದೆ ಎಂದು ಹಿಂದು ಮುಖಂಡ ಶಿವಾ ಧರಣಿ ಎಂಬುವರು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ಬಸ್ತಿಗೆ ವಿದ್ಯುತ್​, ನೀರಿನ ಸಂಪರ್ಕವನ್ನೂ ಸ್ಥಗಿತಗೊಳಿಸಲಾಗಿದೆ. ಇದೇ ಜಾಗದಲ್ಲಿ ಮಸೀದಿ ಕಟ್ಟಲು ಸ್ಥಳೀಯ ಮುಸ್ಲಿಂ ಮುಖಂಡರು ಒತ್ತಡ ತರುತ್ತಿದ್ದರಿಂದ ಅಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.

ಇದೆಲ್ಲ ಅಲ್ಪಸಂಖ್ಯಾತ ಹಿಂದುಗಳ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿತ್ತು. ನಾನು ಹಿಂದು ದೇವಾಲಯದಲ್ಲಿ ಹಿಂದು ಮಕ್ಕಳಿಗೆ ಶಾಲೆ ನಡೆಸುವುದು ಸ್ಥಳೀಯ ಮುಸ್ಲಿಮರಿಗೆ ಇಷ್ಟವಿಲ್ಲ. ಆದರೆ, ನಾನು ವಿದ್ಯೆ ಕಲಿಸುತ್ತೇನೆ. ಅವರಿಗೆ ಅವರ ಮೂಲ ಸೌಕರ್ಯಗಳ ಬಗ್ಗೆಯೂ ತಿಳಿವಳಿಕೆ ಇಲ್ಲ. ಇಲ್ಲಿನ ಕೆಲವು ಮಕ್ಕಳು ಬೇರೆ ಬೇರೆ ಶಾಲೆಗಳಿಗೆ ಹೋಗುತ್ತಿದ್ದರೂ ಅಲ್ಲಿ ಸಾಮಾಜಿಕ, ಧಾರ್ಮಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೆಣ್ಣುಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೇಟು ಹಾಕುತ್ತಿದ್ದ ಹಿಂದು ಮುಖಂಡರು ಈಗ ಸಂತೋಷದಿಂದ ನನ್ನ ಶಾಲೆಗೆ ಕಳಿಸುತ್ತಾರೆ ಎಂದು ಆನಮ್​ ಹೇಳಿದ್ದಾರೆ.