<ಕಾಪು ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆಗೆ ಚಾಲನೆ ನೀಡಿ ನಟಿ ಶ್ರುತಿ ಅಭಿಪ್ರಾಯ>
ಕಾಪು: ರಾಜ್ಯದಲ್ಲಿರುವ ಮೈತ್ರಿ ಸರ್ಕಾರದಂತೆ ಅತಂತ್ರ ಸ್ಥಿತಿ ದೇಶಕ್ಕೆ ಬೇಡ. ಸಮ್ಮಿಶ್ರ ಸರ್ಕಾರದಲ್ಲಿ ಕೆಲವರು ಪರಸ್ಪರ ಬಾಟಲಿ, ಕುರ್ಚಿಯಿಂದ ಹೊಡೆದಾಡಿಕೊಂಡು ದಿನಕಳೆಯುತ್ತಿದ್ದಾರೆ. ಅವರಿಗೆ ಅಭಿವೃದ್ಧಿ ಬೇಡವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಭ್ರಷ್ಟಾಚಾರ ನಡೆಸದೆ, ಅಭಿವೃದ್ಧಿಯನ್ನೇ ಮೂಲ ಮಂತ್ರವನ್ನಾಗಿಸಿಕೊಂಡಿದೆ ಎಂದು ಚಿತ್ರನಟಿ ಶ್ರುತಿ ಅಭಿಪ್ರಾಯಪಟ್ಟರು.
ಕಾಪುವಿನಲ್ಲಿ ಗುರುವಾರ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರ ಚುನಾವಣಾ ಪ್ರಚಾರದ ವಿಜಯ ಸಂಕಲ್ಪ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ನಮಗೆ ಭಾರತೀಯರೆನ್ನಲು ಇರುವಷ್ಟೇ ಹೆಮ್ಮೆ, ಬಿಜೆಪಿ ಎನ್ನಲೂ ಇದೆ. ಮೋದಿಯವರು ದೇಶದ ಜನರ ನಂಬಿಕೆ ಉಳಿಸಿದ್ದಾರೆ. ರಾಹುಲ್ ಗಾಂಧಿಯವರನ್ನು ಯಾರಾದರೂ ಪ್ರಧಾನಿಯಾಗಿ ಊಹಿಸಲು ಸಾಧ್ಯವೇ? ದೇಶದ ಪರ ಯಾರಿದ್ದಾರೆ ಎಂದು ನೋಡಿ ಮತ ಚಲಾಯಿಸಬೇಕಿದೆ ಎಂದರು.
ಕಾಪು ಕ್ಷೇತ್ರದ ಶಾಸಕ ಲಾಲಾಜಿ ಆರ್. ಮೆಂಡನ್, ಬಿಜೆಪಿ ನಾಯಕ ಸುರೇಶ್ ಶೆಟ್ಟಿ ಗುರ್ಮೆ, ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಮತ್ತಿತರರಿದ್ದರು.