ಇಮ್ರಾನ್​ ಖಾನ್​ಗೆ ಕಪಿಲ್ ಶುಭಾಶಯ; ಭಾರತ-ಪಾಕ್ ಸಮಸ್ಯೆ ಪರಿಹಾರಕ್ಕೆ ಸಲಹೆ

ನವದೆಹಲಿ: ಪಾಕಿಸ್ತಾನದ ನೂತನ ಪ್ರಧಾನಿಯಾಗಲು ವಿಜಯದ ಹೊಸ್ತಿಲಲ್ಲಿರುವ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರಿಗೆ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಶುಭಾಶಯ ಕೋರಿದ್ದು, ಅಧಿಕಾರಕ್ಕೆ ಬಂದ ಕೂಡಲೇ ಭಾರತ-ಪಾಕಿಸ್ತಾನದ ರಾಜತಾಂತ್ರಿಕ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವಂತೆ ಸಲಹೆ ನೀಡಿದ್ದಾರೆ.

ಮಾಧ್ಯಮದ ಸಂದರ್ಶನವೊಂದರಲ್ಲಿ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆಯಲ್ಲಿ ವಿಜಯದತ್ತ ದಾಪುಗಾಲಿಟ್ಟಿರುವ ಪಿಟಿಐ ಪಕ್ಷದ ಇಮ್ರಾನ್​ ಖಾನ್​ ಕುರಿತು ಮಾತನಾಡಿ, ಇದು ಬಹು ದೊಡ್ಡ ಸಾಧನೆ. ಇಮ್ರಾನ್​ ಈ ಸ್ಥಾನ ತಲುಪಲು 25 ವರ್ಷ ತೆಗೆದುಕೊಂಡಿದ್ದಾರೆ. ಅವರ ಈ ಯಶಸ್ಸು ದೇಶದ ಸುಧಾರಣೆಗೆ ಬಳಕೆಯಾಗಬೇಕು ಎಂದಿದ್ದಾರೆ.

ಎರಡೂ ದೇಶದ ಮಧ್ಯೆ ಇರುವ ರಾಜತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ಅವರು ಮೊದಲು ಪ್ರಯತ್ನಿಸಬೇಕು. ಈ ರಾಜತಾಂತ್ರಿಕ ಸಮಸ್ಯೆ ಬಗೆಹರಿಸಲು ಕ್ರಿಕೆಟ್​ ಸಹಾಯ ಪಡೆದರೆ ಎಲ್ಲ ಆಟಗಾರರೂ ಬಹಳ ಖುಷಿ ಪಡುತ್ತಾರೆ ಎಂದರು.

ಕ್ರಿಕೆಟ್​ ತಂಡವನ್ನು ಪ್ರತಿನಿಧಿಸಿದ ನಂತರ ದೇಶದ ನಾಯಕನಾಗುವುದು ಉತ್ತಮ ಅನುಭವ. ಹಲವಾರು ಆಟಗಾರರು ರಾಜಕೀಯಕ್ಕೆ ಪದಾರ್ಪಣೆ ಮಾಡಿ ಇಂದು ಹಲವು ಸ್ಥಾನಗಳಲ್ಲಿದ್ದಾರೆ. ಆದರೆ, ಇಷ್ಟು ದೊಡ್ಡ ಸ್ಥಾನಕ್ಕೆ ಯಾರೂ ಏರಿಲ್ಲ ಎಂದು ಶ್ಲಾಘಿಸಿದ್ದಾರೆ.

ಇಮ್ರಾನ್​ ಖಾನ್​ ಪ್ರಧಾನಿಯಾದ ನಂತರ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್​ ಗೊಂದಲಗಳು ಎತ್ತಕಡೆ ಸಾಗಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇಮ್ರಾನ್​ ಕೂಡ ಕ್ರಿಕೆಟ್​ ಆಟಗಾರ ಆಗಿರುವುದರಿಂದ ಸದ್ಯದ ಪರಿಸ್ಥಿತಿಯನ್ನು ಸುಧಾರಿಸುತ್ತಾರೆ ಎನ್ನುವ ಭರವಸೆಯಿದೆ. ಇಮ್ರಾನ್​ ಹಲವು ಬಾರಿ ಭಾರತಕ್ಕೆ ಭೇಟಿ ನೀಡಿದ್ದಾರೆ. ಅವರಿಗೆ ನಮ್ಮ ಕ್ರಿಕೆಟ್ ಪ್ರೀತಿಯ ಬಗ್ಗೆ ಅರಿವಿದೆ ಎಂದರು.

1992ರಲ್ಲಿ ಇಮ್ರಾನ್​ ಖಾನ್​ ಪಾಕಿಸ್ತಾನಕ್ಕೆ ವಿಶ್ವಕಪ್​ ತಂದು ಕೊಟ್ಟಿದ್ದು, ಪಾಕಿಸ್ತಾನದ 19ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಹೊಸ್ತಿಲಲ್ಲಿದ್ದಾರೆ. (ಏಜೆನ್ಸೀಸ್​)