ಧೋನಿ ಬ್ಯಾಟಿಂಗ್​ ಆಸ್ವಾದಿಸಲು ಸಭೆ, ಸಮಾರಂಭಗಳನ್ನೇ ಮುಂದೂಡುತ್ತಿದ್ದರಂತೆ ಕರುಣಾನಿಧಿ

ಚೆನ್ನೈ: ಮಂಗಳವಾರ ನಿಧನರಾದ ತಮಿಳುನಾಡಿನ ಮುಖ್ಯಮಂತ್ರಿ, ಡಿಎಂಕೆ ಮುಖ್ಯಸ್ಥ ಕಲೈಗ್ನರ್​ ಎಂ. ಕರುಣಾನಿಧಿ ಅವರು ಒಂದರ್ಥದಲ್ಲಿ 24 ಗಂಟೆಗಳ ರಾಜಕಾರಣಿಯಾದರೂ, ಅವರೊಳಗೆ ಬರಹಗಾರ, ಕವಿ ಅಡಗಿದ್ದ ಎಂಬ ಸಂಗತಿ ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಅವರೊಳಗೆ ಉತ್ಕಟ ಕ್ರಿಕೆಟ್​ ಪ್ರೇಮಿಯೂ ಇದ್ದ.

ಕರುಣಾನಿಧಿ ಅವರು ಕ್ರಿಕೆಟ್​ನ ಪಕ್ಕಾ ಅಭಿಮಾನಿಯಾಗಿದ್ದರು. ಅಷ್ಟೇ ಅಲ್ಲ, ಅವರು ಟೀಂ ಇಂಡಿಯಾದ ಮಾಜಿ ನಾಯಕ, ಚೆನ್ನೈ ಸೂಪರ್​ ಕಿಂಗ್ಸ್​ನ ಹಾಲಿ ನಾಯಕ ಎಂ.ಎಸ್​ ಧೋನಿಯ ಅಭಿಮಾನಿ ಕೂಡ.

ಕ್ರಿಕೆಟ್​ ಅನ್ನು ಅವರು ಎಷ್ಟು ಅಸ್ವಾದಿಸುತ್ತಿದ್ದರೆಂದರೆ, ಪಂದ್ಯ ವೀಕ್ಷಿಸಲು ಅದೆಷ್ಟೋ ಬಾರಿ ಅವರು ಸಭೆ, ಸಮಾರಂಭಗಳನ್ನೂ ಮುಂದೂಡಿದ್ದರಂತೆ.

2013ರಲ್ಲಿ ಟ್ವೀಟ್​ವೊಂದನ್ನು ಮಾಡಿದ್ದ ಕರುಣಾನಿಧಿ, ” 1983ರಲ್ಲಿ ಕ್ರಿಕೆಟ್​ ವಿಶ್ವಕಪ್​ ಗೆಲ್ಲಿಸಿಕೊಟ್ಟಿದ್ದ ತಂಡದ ನಾಯಕ ಕಪಿಲ್​ ದೇವ್​ಗೆ ನಾನು ಅಭಿಮಾನಿ. ಆದರೆ, ನನ್ನಿಷ್ಟದ ಆಟಗಾರ ಎಂ.ಎಸ್​ ಧೋನಿ,” ಎಂದು ಹೇಳಿಕೊಂಡಿದ್ದರು.

ರಾಜಕಾರಣವನ್ನೂ ಮೀರಿ ಕರುಣಾನಿಧಿ ಅವರು ಹಲವು ಅಭಿರುಚಿಗಳನ್ನು ಹೊಂದಿದ್ದರು. ಅದರೊಂದಿಗೆ ಅವರು ತಮ್ಮ ವೈಯಕ್ತಿಕ ಬದುಕನ್ನು ವರ್ಣಮಯವಾಗಿಟ್ಟುಕೊಂಡಿದ್ದರು. ಅದೇ ಕಾರಣಕ್ಕೇ ಅವರನ್ನು ತಮಿಳುನಾಡಿನ ಜನ ಕಲೈಗ್ನರ್​ ಎಂದು ಕರೆಯುತ್ತಾರೆ. ಅಂದರೆ, ಕಲಾವಿದ ಎಂದು.