ಬ್ರಹ್ಮಾವರ ಶ್ರೀಮಹಾಲಿಂಗೇಶ್ವರನಿಗೆ ಕನ್ಯಾ ಆರತಿ

ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ
ಎಲ್ಲ ದೇವಸ್ಥಾನಗಳಲ್ಲಿ ಶ್ರಾವಣ ಮಾಸದಲ್ಲಿ ನಡೆಯುವ ಸೋಣಾರತಿ ಸೇವೆಗಳು ಸಂಕ್ರಾಂತಿ ದಿನದಂದು ಮುಗಿದಿವೆ. ಆದರೆ ಅದರ ಮರುದಿನ ಕನ್ಯಾಮಾಸದ ಮೊದಲ ದಿನ ಕನ್ಯಾ ಆರತಿ ಎನ್ನುವ ವಿಶೇಷ ಪೂಜೆಯೊಂದು ಬ್ರಹ್ಮಾವರ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬುಧವಾರ ರಾತ್ರಿ ನಡೆದಿದೆ. ಪರಂಪರಾಗತವಾಗಿ ಈ ಪೂಜೆ ಇದ್ದು ಅನೇಕ ಭಾಗದಲ್ಲಿ ಇದು ಸದ್ಯಕ್ಕೆ ನೆರವೇರುತ್ತಿಲ್ಲ. ಇಲ್ಲಿನ ಶ್ರೀ ಮಹಾಲಿಂಗೇಶ್ವರ ಗೆಳೆಯರ ಬಳಗ ಈ ಸೇವೆಗೆ ಕಳೆದ ಕೆಲವು ವರ್ಷದಿಂದ ಚಾಲನೆ ನೀಡಿದೆ.
ಪೂಜೆ ವಿಶೇಷ.

ಅಂದು ದೇವರಿಗೆ ಸುಮಾರು 90 ಆರತಿಯನ್ನು ಬೆಳಗಲಾಗುತ್ತದೆ. ಏಕಾರತಿ, ಪಂಚಾರತಿ, 3ನೆಲೆ, 5ನೆಲೆ, 7 ನೆಲೆ, 11 ನೆಲೆ, ಮರದ ಹಲಗೆ ಆರತಿ, ಕೂರ್ಮಾರತಿ ಹೀಗೆ ಅನೇಕ ಆರತಿ ಬೆಳಗಲಾಗುತ್ತದೆ. ಈ ಸೇವೆಯ ಆರತಿಗಾಗಿ ಬತ್ತಿ ಹಾಕಿ ತಯಾರು ಮಾಡಲು ಇಲ್ಲಿ 4 ಕುಟುಂಬಗಳು ಇವೆ. ಹತ್ತಿಯನ್ನು ಖರೀದಿಸಿ ಸ್ವತಃ ಬತ್ತಿ ತಯಾರು ಮಾಡಿ ಆರತಿಗೆ ಬತ್ತಿ ಹಾಕಲು 7 ಜನರಿಗೆ 2 ಗಂಟೆ ಅವಧಿ ಹಾಗೂ ಲಕ್ಷಕ್ಕೂ ಅಧಿಕ ಬತ್ತಿಗಳು ಬೇಕಾಗುತ್ತವೆ. ಅರ್ಚಕರು ದೇವರಿಗೆ ಆರತಿ ಬೆಳಗಲು 45 ನಿಮಿಷ ತಗಲುತ್ತದೆ. ಬುಧವಾರ ರಾತ್ರಿ ನಡೆದ ಈ ಸೇವೆಯನ್ನು ನೋಡಲು ಪರಿಸರದ ಭಕ್ತರು ಆಗಮಿಸಿದ್ದರು.

ಪ್ರತೀದಿನ ಸೋಣಾರತಿಗೆ ಹೆಚ್ಚಾಗಿ 16 ಆರತಿ. ಆದರೆ ಕನ್ಯಾ ಆರತಿಯಲ್ಲಿ 90 ವಿಧದ ಆರತಿ ಬಳಸಲಾಗುತ್ತದೆ. ಇಂತಹ ಪೂಜೆ ಸದ್ಯ ಯಾವ ದೇವಸ್ಥಾನದಲ್ಲೂ ಆಚರಣೆಯಲ್ಲಿ ಇಲ್ಲ. ಹಲವಾರು ಜನರ ಅರ್ಪಣಾ ಮನೋಭಾವ ಇದ್ದರೆ ಮಾತ್ರ ಇಂತಹ ಕಾರ್ಯಕ್ರಮ ಮಾಡಲು ಸಾಧ್ಯ.
|ರಾಮಚಂದ್ರ ರಾವ್, ಆರತಿಗಳ ನೇತೃತ್ವ ವಹಿಸಿದವರು
 
ಧಾರ್ಮಿಕ ಕೇಂದ್ರಗಳಲ್ಲಿ ಇರುವ ಆಚರಣೆಗಳು ಮುಂದುವರಿಯಬೇಕು ಎನ್ನುವ ಉದ್ದೇಶದಿಂದ ನಮ್ಮ ಬಳಗ ಹಮ್ಮಿಕೊಳ್ಳುವ ಅನೇಕ ಕಾರ್ಯಕ್ರಮದಲ್ಲಿ ಇದು ಕೂಡ ಒಂದು.
| ಪ್ರವೀಣ ದೇವಾಡಿಗ, ಪ್ರಧಾನ ಕಾರ್ಯದರ್ಶಿ, ಶ್ರೀ ಮಹಾಲಿಂಗೇಶ್ವರ ಗೆಳೆಯರ ಬಳಗ

Leave a Reply

Your email address will not be published. Required fields are marked *