ಐಪಿಎಲ್​ನಲ್ಲಿ ಕನ್ನಡಿಗರ ಮಿಶ್ರ ಸಾಧನೆ

ಕಳೆದ 8 ವಾರಗಳಿಂದ ನಡೆದ 11ನೇ ಆವೃತ್ತಿಯ ಐಪಿಎಲ್ ಹಬ್ಬಕ್ಕೆ ಭಾನುವಾರ ತೆರೆಬಿದ್ದಿದೆ. ವಿಶ್ವ ಶ್ರೇಷ್ಠ ಆಟಗಾರರು ಪಾಲ್ಗೊಳ್ಳುವ ಈ ಮಹಾಸಮರ, ಸ್ಥಳೀಯ ಪ್ರತಿಭೆಗಳಿಗೂ ತಮ್ಮ ಪ್ರತಿಭೆ ಹೊರಹಾಕಲು ಉತ್ತಮ ವೇದಿಕೆ. ರಾಷ್ಟ್ರೀಯ ಕ್ರಿಕೆಟ್​ಗೆ ಶ್ರೇಷ್ಠ ಆಟಗಾರರನ್ನು ಕೊಟ್ಟ ಹೆಗ್ಗಳಿಕೆ ಹೊಂದಿರುವ ಕರ್ನಾಟಕ, ಇದೀಗ ಐಪಿಎಲ್​ಗೂ ತನ್ನದೇ ಕೊಡುಗೆಗಳನ್ನು ನೀಡುತ್ತ ಬಂದಿದೆ. ಈ ಬಾರಿ ಐಪಿಎಲ್​ನಲ್ಲಿ ಕಾಣಿಸಿಕೊಂಡ ರಾಜ್ಯದ 12 ಆಟಗಾರರು ನೀಡಿದ ಪ್ರದರ್ಶನದ ಮೆಲುಕು ಇಲ್ಲಿದೆ…

ಸ್ಟಾರ್​ಗಿರಿಗೆ ತಕ್ಕಂತೆ ಮಿಂಚಿದ ಕೆಎಲ್ ರಾಹುಲ್

ಕ್ರಿಕೆಟ್​ನ ಮೂರು ಮಾದರಿಗಳಿಗೂ ಸೈ ಎನ್ನುವ ಆಟಗಾರ ಕೆ.ಎಲ್. ರಾಹುಲ್. 11 ಕೋಟಿ ರೂ.ಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪಾಲಾದಾಗ ಎಲ್ಲರ ಹುಬ್ಬೇರಿದರೂ, ಟೂರ್ನಿಯಲ್ಲಿ ವಿಕೆಟ್ ಕೀಪಿಂಗ್ ಜತೆಗೆ ಸ್ಪೋಟಕ ಆರಂಭಿಕನಾಗಿಯೂ ಗಮನಸೆಳೆದರು. ಮೊದಲ ಪಂದ್ಯದಲ್ಲೇ ಐಪಿಎಲ್ ಇತಿಹಾಸದ ಅತಿವೇಗದ ಅರ್ಧಶತಕದ ದಾಖಲೆ ಬರೆದರು. ತಂಡದ ವೈಫಲ್ಯತೆ ನಡುವೆಯೂ ರನ್ ಹೊಳೆ ಹರಿಸಿದ ರಾಹುಲ್, ಎದುರಾಳಿ ತಂಡಗಳಿಗೆ ಕಂಟಕರಾಗಿ ಕಾಡಿದ್ದಂತು ಸುಳ್ಳಲ್ಲ. ರಾಹುಲ್ ಆರಂಭದಲ್ಲೇ ರನ್​ಗಳಿಸುತ್ತಿದ್ದರೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ಗಳಿಂದ ಅವರ ಆಟಕ್ಕೆ ತಕ್ಕ ಸಾಥ್ ದಕ್ಕಲಿಲ್ಲ.

ಲಕ್ಕಿಬಾಯ್ ಪ್ರಸಿದ್ಧಕೃಷ್ಣ

ಐಪಿಎಲ್ ಮಧ್ಯಭಾಗದಲ್ಲಿ ಕೆಕೆಆರ್ ತಂಡ ಕೂಡಿಕೊಂಡ ಯುವ ವೇಗಿ ಪ್ರಸಿದ್ಧ ಕೃಷ್ಣ ಸಿಕ್ಕ ಕಡಿಮೆ ಅವಕಾಶದಲ್ಲಿ ಮಿಂಚಿದರು. ಚೊಚ್ಚಲ ಐಪಿಎಲ್ ಆಡಿದ ಪ್ರಸಿದ್ಧ ಕೃಷ್ಣ ಪ್ರಮುಖ ವೇಗಿಯಾಗಿ ಗುರುತಿಸಿಕೊಂಡರು. 2018ರ 19 ವಯೋಮಿತಿ ವಿಶ್ವಕಪ್ ವಿಜೇತೆ ಭಾರತ ತಂಡದಲ್ಲಿ ಬೌಲರ್ ಆಗಿದ್ದ ಕಮಲೇಶ್ ನಾಗರಕೋಟಿ ಬದಲಿಗೆ ಪ್ರಸಿದ್ಧ ಕೃಷ್ಣ ಕೆಕೆಆರ್ ಸೇರ್ಪಡೆಗೊಂಡಿದ್ದರು. ಸನ್​ರೈಸರ್ಸ್ ವಿರುದ್ಧ 4 ವಿಕೆಟ್ ಕಬಳಿಸಿ ಮಿಂಚಿದ್ದರು. ಬೆನ್ನಲ್ಲೇ ಮಾಜಿ ನಾಯಕ ಧೋನಿ ಅವರಿಂದಲೂ ಮೆಚ್ಚುಗೆಗೆ ಪಾತ್ರರಾಗಿದ್ದು ವಿಶೇಷ.

ಮೊದಲಿಗೆ ಕೆಕೆಆರ್ ತಂಡಕ್ಕೆ ಆಭಾರಿಯಾಗಿರುತ್ತೇನೆ. ಈ ಬಾರಿಯ ಹರಾಜಿನಲ್ಲಿ ಯಾವ ತಂಡಕ್ಕೂ ನಾನು ಮಾರಾಟವಾಗಿರಲಿಲ್ಲ. ಕೋಚ್ ಜಾಕ್ಸ್ ಕಾಲಿಸ್, ನಾಯಕ ದಿನೇಶ್ ಕಾರ್ತಿಕ್ ತುಂಬಾ ಚೆನ್ನಾಗಿ ಪ್ರೋತ್ಸಾಹ ನೀಡಿದರು. ಜತೆಗೆ ನಮ್ಮ ರಾಜ್ಯದವರೇ ಆದ ರಾಬಿನ್ ಉತ್ತಪ್ಪ ಹಾಗೂ ವಿನಯ್ಕುಮಾರ್ ಕೂಡ ಉತ್ತಮ ಸಲಹೆ ನೀಡಿದರು. ಈ ಬಾರಿಯ ಐಪಿಎಲ್ ನನ್ನ ಪಾಲಿಗೆ ಅವಿಸ್ಮರಣೀಯವಾಗಿತ್ತು.

| ಪ್ರಸಿದ್ಧಕೃಷ್ಣ ಕೆಕೆಆರ್ ತಂಡದ ಆಟಗಾರ

ನಿರಾಸೆ ಮೂಡಿಸಿದ ಮಯಾಂಕ್

2017-18ನೇ ಸಾಲಿನ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಎಲ್ಲ ಮೂರು ಮಾದರಿಯಿಂದ 2 ಸಾವಿರಕ್ಕೂ ಅಧಿಕ ರನ್ ಪೇರಿಸಿ ಗಮನಸೆಳೆದಿದ್ದ ಮಯಾಂಕ್ ಅಗರ್ವಾಲ್ ಈ ಸಲದ ಐಪಿಎಲ್​ನಲ್ಲಿ ಪಂಜಾಬ್ ಪರ ನಿರಾಸೆ ಮೂಡಿಸಿದರು. ಸ್ಪೋಟಕ ಬ್ಯಾಟಿಂಗ್​ಗೆ ಹೆಸರಾಗಿರುವ ಮಯಾಂಕ್ ಐಪಿಎಲ್​ನಲ್ಲಿ ಒಂದೂ ಅರ್ಧಶತಕ ದಾಖಲಿಸಲಿಲ್ಲ. ಆರಂಭಿಕ ಪಂದ್ಯಗಳಲ್ಲಿ ಸಿಡಿದರೂ ಮಯಾಂಕ್ ಆಟ ಈ ಬಾರಿ ನಡೆಯಲಿಲ್ಲ.

ಟೇಕ್ ಆಫ್ ಆಗದ ಕರುಣ್

ಕಳೆದ ಬಾರಿ ಡೆಲ್ಲಿ ಡೇರ್​ಡೆವಿಲ್ಸ್ ಮುನ್ನಡೆಸಿದ್ದ ಕರುಣ್ ನಾಯರ್ ಕೂಡ ರನ್ ಗಳಿಕೆಯಲ್ಲಿ ಹಿಂದೆ ಬಿದ್ದರು. 5.60 ಕೋಟಿ ರೂಪಾಯಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಸೇರ್ಪಡೆಗೊಂಡಿದ್ದರು. ಟೂರ್ನಿಯಲ್ಲಿ ತಾವಾಡಿದ ಮೊದಲ ಹಾಗೂ ಕೊನೇ ಲೀಗ್ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದು ಬಿಟ್ಟರೆ, ಕರುಣ್ ಅವರಿಂದ ನಿರೀಕ್ಷಿತ ಪ್ರದರ್ಶನ ಕಂಡುಬರಲಿಲ್ಲ. ಸಿಕ್ಕ ಅವಕಾಶವನ್ನು ಸೂಕ್ತರೀತಿಯಲ್ಲಿ ಬಳಸಿಕೊಳ್ಳಲು ವಿಫಲರಾದರು.

ಈ ಸಲ ಕನ್ನಡಿಗರಿಗಿಲ್ಲ ಕಪ್!

ಈ ಸಲ ಕಪ್ ನಮ್ದೆ ಎಂಬ ಘೋಷವಾಕ್ಯದೊಂದಿಗೆ ಆರ್​ಸಿಬಿ 11ನೇ ಐಪಿಎಲ್​ನ ಅಭಿಯಾನ ಆರಂಭಿಸಿದರೂ ಕನಿಷ್ಠ ಪ್ಲೇಆಫ್ ಹಂತಕ್ಕೇರಲು ವಿಫಲವಾಯಿತು. ಪಂಜಾಬ್ ತಂಡದ ಕೆಎಲ್ ರಾಹುಲ್, ಕರುಣ್ ನಾಯರ್ ಕೂಡ ಕಪ್ ನಮ್ದೆ ಎಂದಿದ್ದರು. ಬಳಿಕ ಪ್ಲೇಆಫ್ ಹಂತಕ್ಕೇರಿದ ಬಳಿಕ ಪ್ರಸಿದ್ಧ ಕೃಷ್ಣ ಹಾಗೂ ರಾಬಿನ್ ಉತ್ತಪ್ಪ ಕೂಡ ಸ್ಟಾರ್ ಸ್ಪೋರ್ಟ್ಸ್ ನೇರಪ್ರಸಾರದ ಕಾರ್ಯಕ್ರಮದಲ್ಲಿಯೇ ಕಪ್ ನಮ್ದೆ ಎಂದಿದ್ದು ವೈರಲ್ ಆಗಿತ್ತು. ಕಡೆಗೆ ಕೆಕೆಆರ್ ಫೈನಲ್​ಗೇರಲಿಲ್ಲ. ಸನ್​ರೈಸರ್ಸ್ ಪರ ಮನೀಷ್ ಪಾಂಡೆ ಸ್ಥಾನ ಪಡೆಯಲು ವಿಫಲವಾದ್ದರಿಂದ ಫೈನಲ್ ಪಂದ್ಯದಲ್ಲಿ ಯಾವೊಬ್ಬ ಕನ್ನಡಿಗರು ಕಣಕ್ಕಿಳಿಯಲಿಲ್ಲ. ಚೆನ್ನೈ ತಂಡದಲ್ಲೂ ಕರ್ನಾಟಕದ ಯಾವೊಬ್ಬ ಆಟಗಾರನಿಲ್ಲದ ಕಾರಣ ಈ ಬಾರಿ ಕನ್ನಡಿಗರಿಗೆ ಕಪ್ ದಕ್ಕಲಿಲ್ಲ.

ನನಗೆ ಒಂದು ಉತ್ತಮ ಅವಕಾಶ ದಕ್ಕಿತು. ಸಿಕ್ಕ ಅವಕಾಶವನ್ನು ಸೂಕ್ತವಾಗಿ ಸದುಪಯೋಗಪಡಿಸಿಕೊಂಡೆ. ಮುಂಬೈ ವಿರುದ್ಧ ಜೈಪುರದಲ್ಲಿ ತೋರಿದ ಪ್ರದರ್ಶನ ಲೀಗ್​ನಲ್ಲಿ ನನಗೆ ಅತ್ಯಂತ ಸ್ಮರಣೀಯವಾಗಿತ್ತು. ತಂಡದ ಇತರ ಆಟಗಾರರು ಕೂಡ ಉತ್ತಮ ಪ್ರೋತ್ಸಾಹ ನೀಡಿದರು.

| ಕೆ.ಗೌತಮ್ ರಾಜಸ್ಥಾನ ರಾಯಲ್ಸ್ ಆಟಗಾರ

ರಾಬಿನ್ ಉತ್ತಪ್ಪ ಸಮಾಧಾನಕರ ಆಟ

2008ರಿಂದಲೂ ಐಪಿಎಲ್ ಆಡುತ್ತಿರುವ ರಾಬಿನ್ ಉತ್ತಪ್ಪ ಸಾಧಾರಣ ಪ್ರದರ್ಶನ ನೀಡಿದರೂ ಅವರ ಅನುಭವಕ್ಕೆ ತಕ್ಕಂಥ ಪ್ರದರ್ಶನ ಬರಲಿಲ್ಲ. ತಂಡದ ನಿರ್ಣಾಯಕ ಹಂತದ ವೇಳೆ ಕೈಕೊಡುತ್ತಿದ್ದರು. ಕೆಕೆಆರ್ ತಂಡಕ್ಕೆ 6.40 ಕೋಟಿ ರೂಪಾಯಿ ಬಿಕರಿಯಾಗಿದ್ದ ಉತ್ತಪ್ಪ ಗಮನಸೆಳೆಯಲು ವಿಫಲರಾದರು.

ಈ ಬಾರಿಯ ಐಪಿಎಲ್ ಜರ್ನಿ ತುಂಬಾ ಚೆನ್ನಾಗಿತ್ತು. ಎಲಿಮೀನೇಟರ್ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ. ಇದು ನನಗೆ ಬೇಸರ ತರಿಸಿತು. ರಾಯಲ್ಸ್ ಎರಡು ವರ್ಷಗಳ ಬಳಿಕ ವಾಪಸ್ ಬಂದ ತಂಡ. ನಾನು ಮತ್ತು ಗೌತಮ್ ರಣಜಿ ಟ್ರೋಫಿಯಲ್ಲಿ ಸ್ಪಿನ್ ಜೋಡಿ ಆಗಿದ್ದೇವೆ. ಇಬ್ಬರ ನಡುವಿನ ಸಂಯೋಜನೆ ಚೆನ್ನಾಗಿದೆ. ಒಬ್ಬರ ಆಟವನ್ನು ಒಬ್ಬರು ತುಂಬಾ ಚೆನ್ನಾಗಿ ಅರ್ಥಮಾಡಿಕೊಂಡಿದ್ದೇವೆ. ರಹಾನೆ ಹಾಗೂ ಬಟ್ಲರ್ ಪ್ರೋತ್ಸಾಹ ಚೆನ್ನಾಗಿತ್ತು.

| ಶ್ರೇಯಸ್ ಗೋಪಾಲ್ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ

ರಾಯಲ್ಸ್ ಸ್ಪಿನ್ ಜೋಡಿ

ಅಚ್ಚರಿಯ ಮೊತ್ತಕ್ಕೆ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸೇರ್ಪಡೆಗೊಂಡಿದ್ದ ಆಲ್ರೌಂಡರ್​ಗಳಾದ ಕೆ.ಗೌತಮ್ ಹಾಗೂ ಶ್ರೇಯಸ್ ಗೋಪಾಲ್ ನಿರೀಕ್ಷೆಗೂ ಮೀರಿ ಉತ್ತಮ ಪ್ರದರ್ಶನ ನೀಡಲು ಯಶಸ್ವಿಯಾದರು.

ಕಳೆದ ಬಾರಿ ಮುಂಬೈ ತಂಡದಲ್ಲಿದ್ದ ಈ ಜೋಡಿ, ಕನಿಷ್ಠ ಆಡುವ ಹನ್ನೊಂದರ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲಗೊಂಡಿತ್ತು. ಆದರೆ, ರಾಜಸ್ಥಾನ ಪರ ಪ್ರಮುಖ ಆಟಗಾರರಾಗಿ ಹೊರಹೊಮ್ಮಿ ದ್ದಲ್ಲದೆ, ತಲಾ 11 ವಿಕೆಟ್ ಕಬಳಿಸಿ ಮಿಂಚಿತು.

ಅವಕಾಶ ವಂಚಿತ ಆರ್​ಸಿಬಿ ಜೋಡಿ

ಐಪಿಎಲ್​ನಲ್ಲಿ ಈ ಬಾರಿ ಇದ್ದರೂ ಇಲ್ಲದಂತೆ ಇದ್ದವರು ಪವನ್ ದೇಶಪಾಂಡೆ ಹಾಗೂ ಅನಿರುದ್ಧ ಜೋಶಿ. ತವರು ಆರ್​ಸಿಬಿ ತಂಡಕ್ಕೆ ಮೂಲಬೆಲೆ ತಲಾ 20 ಲಕ್ಷ ರೂಪಾಯಿಗೆ ಬಿಕರಿಯಾಗಿದ್ದರೂ ಈ ಜೋಡಿ ಮಾತ್ರ ಕಣಕ್ಕಿಳಿಯಲೇ ಇಲ್ಲ. ಕನಿಷ್ಠ ತವರು ನೆಲದ ಪಂದ್ಯಗಳಲ್ಲಿ ಅವಕಾಶದ ನಿರೀಕ್ಷೆ ಇತ್ತಾದರೂ ಕಡೆಗೂ ಅವರ ಆಸೆ ಈಡೇರಲಿಲ್ಲ.

ದಶಕೋಟಿ ವೀರ ಮನೀಷ್ ಫ್ಲಾಪ್

ಐಪಿಎಲ್​ನಲ್ಲಿ ಚೊಚ್ಚಲ ಶತಕ ಬಾರಿಸಿದ ಭಾರತೀಯರೆಂಬ ಹಿರಿಮೆ ಹೊಂದಿರುವ ಮನೀಷ್ ಪಾಂಡೆ ಸನ್​ರೈಸರ್ಸ್ ತಂಡಕ್ಕೆ -ಠಿ;11 ಕೋಟಿಗೆ ಸೇಲಾಗಿದ್ದರು. ಆ ಹಣಕ್ಕೆ ತಕ್ಕಂತೆ ಆಡದೆ ನಿರಾಸೆ ಮೂಡಿಸಿದರು. ಸತತ ವೈಫಲ್ಯದಿಂದಾಗಿ ಅಂತಿಮ 2 ಪಂದ್ಯಕ್ಕೆ ತಂಡದಿಂದಲೇ ಹೊರಬಿದ್ದರು.

ವಿನಯ್ಕುಮಾರ್: ಪಂದ್ಯ: 2, ವಿಕೆಟ್: 2

ಸ್ಟುವರ್ಟ್ ಬಿನ್ನಿ: ಪಂದ್ಯ: 7, ರನ್: 44, ವಿಕೆಟ್: 0

ವಿನಯ್ ಕುಮಾರ್ ಹಾಗೂ ಸ್ಟುವರ್ಟ್ ಬಿನ್ನಿ ಅವರಿಂದ ಅನುಭವಕ್ಕೆ ತಕ್ಕ ಪ್ರದರ್ಶನ ಕಂಡು ಬರಲಿಲ್ಲ. ಕೆಕೆಆರ್ ತಂಡದಲ್ಲಿದ್ದ ವಿನಯ್ ಚೆನ್ನೈನಲ್ಲಿ ನಡೆದ ಸಿಎಸ್​ಕೆ ವಿರುದ್ಧ ಪಂದ್ಯದ ಕೊನೇ ಓವರ್​ನಲ್ಲಿ 17 ರನ್ ರಕ್ಷಿಸಿಕೊಳ್ಳಲು ವಿಫಲರಾಗಿ ಟೂರ್ನಿಯ ಜರ್ನಿ ಮುಗಿಸಿದರು. ರಾಜಸ್ಥಾನ ರಾಯಲ್ಸ್ ಪರ ಆಡಿದ ಆಲ್ರೌಂಡರ್ ಸ್ಟುವರ್ಟ್ ಬಿನ್ನಿ ಬ್ಯಾಟಿಂಗ್-ಬೌಲಿಂಗ್​ನಲ್ಲಿ ದಯನೀಯ ವೈಫಲ್ಯ ಕಂಡರು.

Leave a Reply

Your email address will not be published. Required fields are marked *