ಸಾಗರದಾಚೆಗಿನ ಅಮೇರಿಕಾದಲ್ಲೊಂದು ಕನ್ನಡಿಗರ “ಯುಗಾದಿ” ಸಂಭ್ರಮ

ಕನೆಕ್ಟಿಕಟ್​: ಆಕಾಶದಲ್ಲಿ ಸ್ವಚ್ಛಂದವಾಗಿ ಹಾರುವ ಹಕ್ಕಿಗೆ ಅದೆಷ್ಟೇ ಹೊಸ ದಾರಿಗಳು, ಕನಸುಗಳು ಬರಸೆಳೆದರೂ, ಮತ್ತದೇ ತನ್ನ ಗೊಡಿಗೆ ಮರಳುವ ಅದು, ತನ್ನ ಹುಟ್ಟಿನ ಬೇರನ್ನು ಎಂದಿಗೂ ಮರೆಯುವುದಿಲ್ಲ. ಹಾಗೆಯೇ ತಾಯ್ನೆಲದಿಂದ ಅದೆಷ್ಟೇ ದೂರವಿದ್ದರೂ ವಿದೇಶದಲ್ಲಿರುವ ಹಲವು ಕನ್ನಡಿಗರು ಹಾಗೂ ಕನ್ನಡ ಕೂಟಗಳು ತಮ್ಮ ನಾಡು-ನುಡಿ, ಸಂಸ್ಕೃತಿ, ಆಚರಣೆಗಳನ್ನು ಮರೆಯದೆ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಆಚರಿಸಿ ಸಂಭ್ರಮಿಸುತ್ತಾರೆ. ಅದರಲ್ಲಿ ಅಮೇರಿಕಾದ ಕನೆಕ್ಟಿಕಟ್​ನ ಹೊಯ್ಸಳ ಕನ್ನಡ ಕೂಟ ಏಪ್ರಿಲ್​ 27ರಂದು ಆಯೋಜಿಸಿದ್ದ ಯುಗಾದಿ ಸಂಭ್ರಮಾಚರಣೆ ವಿಶಿಷ್ಟವಾಗಿತ್ತು.

ಹಳೆಯ ಬೇರುಗಳೊಂದಿಗೆ ಹೊಸ ಚಿಗುರುಗಳು ಸೇರಿ ಕಾರ್ಯಕ್ರಮ ಸೊಬಗನ್ನು ಇಮ್ಮಡಿಗೊಳಿಸಿದ್ದು ಅದ್ಭುತವಾಗಿತ್ತು. ಕನ್ನಡ ಹಾಗೂ ಯುಗಾದಿಗೆ ಸಂಬಂಧಿಸಿದ ಪ್ರತಿಭಾ ಸ್ಪರ್ಧೆಗಳಲ್ಲಿ ಮಕ್ಕಳು ಹಾಗೂ ವಯಸ್ಕರು ಅತೀ ಉತ್ಸುಕತೆಯಿಂದ ಭಾಗವಹಿಸಿದ್ದರು. ಮಕ್ಕಳ ಇಂಪಾದ ಕಂಠದಿಂದ ಮೂಡಿ ಬಂದ ಭಾರತಮಾತೆಯ ಮಗಳಾದ ಕನ್ನಡಾಂಬೆಗೆ ಜಯಭೇರಿ ಬಾರಿಸುವ ನಾಡಗೀತೆಯೊಂದಿಗೆ ಕಾರ್ಯಕ್ರಮದ ಪ್ರಾರಂಭವು ಕೇಳುಗರ ಮನಸೂರೆಗೊಂಡಿತ್ತು.

ಹಲವು ಪುಟ್ಟ ಪ್ರತಿಭೆಗಳ ಮೊದಲ ವೇದಿಕೆಯಾದ ವಿವಿಧ ವೇಷಭೂಷಣ ಕಾರ್ಯಕ್ರಮವು ಸೃಜನಶೀಲತೆ ಹಾಗೂ ಕ್ರಿಯಾಶೀಲತೆಯ ಕೈಗನ್ನಡಿಯಂತೆ ಪ್ರತಿಫಲಿಸಿತು. ಹಲವು ಮಕ್ಕಳ ರಂಗುರಂಗಿನ ತರಂಗಗಳು ನೃತ್ಯದ ಮೂಲಕ ಅನಾವರಣಗೊಂಡಿದ್ದಲ್ಲದೇ, ವೀರಗಾಸೆ, ಕಂಸಾಳೆ, ಕೋಲಾಟ…ಹೀಗೆ ಜನಪದ ಸಂಸ್ಕೃತಿಯ ಹಲವು ಮುಖಗಳು ನೋಡುಗರಿಗೆ ನಾಡಹಬ್ಬದ ನೆನಪನ್ನು ತಂದುಕೊಟ್ಟಿತು. ಇಷ್ಟಲ್ಲದೆ, ವಿವಿಧ ವಿನೋದಾವಳಿ ಕಾರ್ಯಕ್ರಮವು ನೋಡುಗರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.

ಕೇಳುಗರ ಭಾವಕೋಶ ಸ್ಪರ್ಶಿಸಿದ ಖ್ಯಾತ ಕೊಳಲುವಾದಕ ಪ್ರವೀಣ್​ ಗೋಡ್ಕಿಂಡಿ ಹಾಗೂ ತಂಡದವರ ಕೊಳಲುವಾದನವು ಕಾರ್ಯಕ್ರಮದ ಕಳಸಪ್ರಾಯವಾಗಿತ್ತು. ಕೇಳುಗರನ್ನು ಭಾವನಾಲೋಕದಲ್ಲಿ ವಿಹರಿಸುವಂತೆ ಮಾಡಿದ ಈ ಕಾರ್ಯಕ್ರಮ ನಿಜವಾಗಲೂ ಮರೆಯಲಾಗದ ಅನುಭವ.
ಸಂಜೆಯ ಲಘು ಉಪಹಾರ ಹಾಗೂ ರಾತ್ರಿಯ ಹಬ್ಬದ ಭೋಜನವು ಕೇವಲ ಹಸಿವನ್ನು ತಣಿಸಿದ್ದಲ್ಲದೇ ಕರ್ನಾಟಕದ ಹಲವು ವಿಶಿಷ್ಟ ಖಾದ್ಯಗಳು ಹಲವರ ಬಾಯಿರುಚಿಯನ್ನು ಮತ್ತಷ್ಟೂ ಹೆಚ್ಚಿಸುವಂತೆ ಮಾಡಿದವು.

ಪ್ರತಿ ಬಾರಿಯೂ ಹಲವು ದಿನ ಮನದಾಳದಲ್ಲಿ ಉಳಿಯುವಂತಹ ಯಶಸ್ವೀ ಕಾರ್ಯಕ್ರಮಗಳನ್ನು ನೀಡುತ್ತಿರುವ, ಹೊಯ್ಸಳ ಕನ್ನಡ ಕೂಟದ ರಾಯಭಾರಿ ಸಮಿತಿಯ ಸದಸ್ಯರುಗಳು ಹಲವಾರು ವಾರಗಳ ಪರಿಶ್ರಮಕ್ಕೆ ಫಲವೆಂಬಂತೆ, ಭಾರಿ ಸಂಖ್ಯೆಯಲ್ಲಿ ಸೇರಿದ 500ಕ್ಕೂ ಹೆಚ್ಚಿನ ಕನ್ನಡಿಗರ ಕಾರ್ಯಕ್ರಮದ ಬಗೆಗಿನ ಅನಿಸಿಕೆಗಳು ಸಮಾರಂಭದ ಯಶಸ್ಸಿಗೆ ಕೈಗನ್ನಡಿಯಾಗಿದೆ.