ಏಷ್ಯಾಡ್ ಹಾಕಿ ತಂಡದಲ್ಲಿ ಕನ್ನಡಿಗ ಸುನೀಲ್​ಗೆ ಸ್ಥಾನ

ನವದೆಹಲಿ: ಮುಂಬರುವ ಏಷ್ಯನ್ ಗೇಮ್ಸ್​ಗೆ ಭಾರತದ ಪುರುಷರ ಹಾಕಿ ತಂಡವನ್ನು ಪ್ರಕಟ ಮಾಡಲಾಗಿದ್ದು, ಫಾರ್ವರ್ಡ್ ಆಟಗಾರ ಎಸ್​ವಿ ಸುನೀಲ್ ತಂಡದಲ್ಲಿರುವ ಏಕೈಕ ಕನ್ನಡಿಗರಾಗಿದ್ದಾರೆ. ಡ್ರ್ಯಾಗ್ ಫ್ಲಿಕ್ ತಜ್ಞ ರೂಪಿಂದರ್ ಪಾಲ್ ಸಿಂಗ್ ಹಾಗೂ ಫಾರ್ವರ್ಡ್ ಆಟಗಾರ ಆಕಾಶ್​ದೀಪ್ ಸಿಂಗ್ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ನಿರೀಕ್ಷಿತ ಮಟ್ಟದ ನಿರ್ವಹಣೆ ತೋರದಿದ್ದರೂ ಮಾಜಿ ನಾಯಕ ಸರ್ದಾರ್ ಸಿಂಗ್​ರನ್ನು 18 ಆಟಗಾರರ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಚಾಂಪಿಯನ್ಸ್ ಟ್ರೋಫಿ ರನ್ನರ್​ಅಪ್ ಸ್ಥಾನ ಪಡೆದ ತಂಡದಿಂದ ಏಷ್ಯನ್ ಗೇಮ್ಸ್​ಗೆ ಕೇವಲ 2 ಬದಲಾವಣೆ ಮಾಡಲಾಗಿದೆ. ಜರ್ವನ್​ಪ್ರೀತ್ ಸಿಂಗ್ ಮತ್ತು ಗಾಯಗೊಂಡಿರುವ ರಮಣ್​ದೀಪ್ ಸಿಂಗ್ ಬದಲು ಕ್ರಮವಾಗಿ ರೂಪಿಂದರ್ ಮತ್ತು ಆಕಾಶ್​ದೀಪ್ ಸ್ಥಾನ ಪಡೆದಿದ್ದಾರೆ. ಆಗಸ್ಟ್ 18ರಿಂದ ಜಕಾರ್ತ ಹಾಗೂ ಪಲೆಂಬಾಂಗ್​ನಲ್ಲಿ ಏಷ್ಯನ್ ಗೇಮ್್ಸ ನಡೆಯಲಿದೆ.

ತಂಡ: ಪಿಆರ್ ಶ್ರೀಜೇಶ್(ನಾಯಕ), ಕೃಷ್ಣ ಬಿ ಪಾಠಕ್. ಡಿಫೆಂಡರ್ಸ್: ಹರ್ವನ್​ಪ್ರೀತ್ ಸಿಂಗ್, ವರುಣ್, ಬಿರೇಂದ್ರ ಲಾಕ್ರ, ಸುರೇಂದ್ರ ಕುಮಾರ್, ರೂಪಿಂದರ್, ಅಮಿತ್ ರೋಹಿದಾಸ್. ಮಿಡ್​ಫೀಲ್ಡರ್ಸ್: ಮನ್​ಪ್ರೀತ್, ಚಿಂಗ್ಲೆನ್ಸನಾ(ಉಪನಾಯಕ), ಸಿಮ್ರಾನ್​ಜೀತ್, ಸರ್ದಾರ್, ವಿವೇಕ್ ಸಾಗರ್. ಫಾರ್ವರ್ಡ್ಸ್: ಎಸ್​ವಿ ಸುನೀಲ್, ಮಂದೀಪ್, ಆಕಾಶ್​ದೀಪ್, ಲಲಿತ್ ಉಪಾಧ್ಯಾಯ್, ದಿಲ್​ಪ್ರೀತ್ ಸಿಂಗ್.