
ಹೊಸಕೋಟೆ: ಹೆಸರಾಂತ ಸಂಗೀತ ನಿರ್ದೇಶಕ, ರಂಗಭೂಮಿ, ಸಿನಿಮಾ ಹಾಗೂ ಸುಗಮ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ವಿಶಿಷ್ಟ ಶೈಲಿಯಿಂದ ಜನಪ್ರಿಯರಾಗಿದ್ದ ಡಾ.ಸಿ.ಅಶ್ವತ್ಥ್ ಅವರ 80ನೇ ಜನ್ಮದಿನದ ಅಂಗವಾಗಿ ಭಾನುವಾರ ಹೊಸಕೋಟೆಯಲ್ಲಿ ಆಯೋಜಿಸಿದ್ದ ‘ಕನ್ನಡವೇ ಸತ್ಯ’ ಕಾರ್ಯಕ್ರಮ ಗಾಯಕರ ಹಾಡುಗಳ ಮೂಲಕ ಸ್ಮರಣೀಯವೆನಿಸಿತು.
ಅಶ್ವಥ್ ಅವರ ಪರಂಪರೆ ಮುಂದುವರಿಸುತ್ತಿರುವ ಸುಗಮ ಸಂಗೀತ ಕಲಾವಿದರ ಕಂಠದಲ್ಲಿ ಮೂಡಿಬಂದ ಹಾಡುಗಳನ್ನು ಸಿ.ಅಶ್ವತ್ಥ್ ಅಭಿಮಾನಿಗಳು ಆಸ್ವಾದಿಸಿದರು. ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಭಾವರೂಪಕ ಪ್ರತಿಷ್ಠಾನ ಟ್ರಸ್ಟ್ ಅಧ್ಯಕ್ಷ ಕೌಡ್ಲೆ ರವೀಂದ್ರನಾಥ್, ಕನ್ನಡ ಭಾವಗೀತೆಯ ಲೋಕಕ್ಕೆ ಹೊಸ ದಿಕ್ಕು ತೋರಿಸಿದ ಸುಗಮ ಸಂಗೀತ ಗಾಯಕ ಸಿ.ಅಶ್ವತ್ಥ್ ಎಲ್ಲರ ಮನದಲ್ಲಿ ಇಂದಿಗೂ ಜೀವಂತ ಎಂದು ಹೇಳಿದರು.
ಜಾನಪದ, ತತ್ವಪದ, ಭಾವಗೀತೆಗಳ ಗಾಯನವನ್ನೇ ಉಸಿರಾಗಿಸಿಕೊಂಡಿದ್ದ ಸಿ.ಅಶ್ವತ್ಥ್ ಅವರು ಸಾವಿರಾರು ಗಾಯಕರನ್ನು ಒಗ್ಗೂಡಿಸಿ ಭಾವಗೀತೆ, ಜಾನಪದ ಗೀತೆಗಳ ಶಕ್ತಿ ಪ್ರದರ್ಶನ ಮಾಡಿದ್ದರು. ಅವರು ಮತ್ತೆ ಹುಟ್ಟಿಬರುವಂತಾಗಲಿ ಎಂದು ಆಶಿಸಿದರು.
ಕನ್ನಡವೇ ಸತ್ಯ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಎಚ್.ಎಂ. ಸುಬ್ಬರಾಜ್ ಮಾತನಾಡಿ, ಕನ್ನಡ ಜಾನಪದ ಶ್ರೀಮಂತವಾಗಿದ್ದು, ವಜ್ರ-ಮುತ್ತುಗಳ ಸಂಗಮವಾಗಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಹತ್ವ ಉಳಿಸಿಕೊಂಡಿದ್ದು, ಮುಂದೆಯೂ ಉಳಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ಹಾಸ್ಯ ನಟ ಹಾಗೂ ಸಂಗೀತ ನಿರ್ದೇಶಕ ಸಾಧು ಕೋಕಿಲ ಹಾಗೂ ಸಂಗೀತ ನಿರ್ದೇಶಕ ವೇಣುಗೋಪಾಲ್ ರಾಜು ಅವರಿಗೆ ಡಾ.ಸಿ.ಅಶ್ವತ್ಥ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಖ್ಯಾತ ಗಾಯಕರಾದ ಬಿ.ಕೆ.ಸುಮಿತ್ರಾ, ರಮೇಶ್‌ಚಂದ್ರ, ಪಂಚಮ್ ಹಳಿಬಂಡಿ, ಕೆ.ಎಸ್.ಸುರೇಖಾ, ಜೋಗಿ ಸುನೀತಾ, ಕಲಾವತಿ ದಯಾನಂದ್ ಅವರು ಅಶ್ವತ್ಥ್ ಅವರ ಹಾಡುಗಳನ್ನು ಹಾಡಿದರು. ಭರತನಾಟ್ಯವನ್ನು ಮಹೇಶ್ ಮತ್ತು ತಂಡ ಹಾಗೂ ವಿನ್ಸೆಂಟ್ ಪಾಲ್ ನಡೆಸಿಕೊಟ್ಟರು.
ಮುಖಂಡರಾದ ಬಿ.ವಿ.ಬೈರೇಗೌಡ, ವಿಜಯ್ ಕುಮಾರ, ನಾಗರಾಜ್, ವೆಂಕಟರಮಣಪ್ಪ, ಕೃಷ್ಣಪ್ಪ, ವಿ.ನಾಗರಾಜ್, ಸೋಮ, ಮಂಜು, ಅಮರ್, ಶೇಖರ್, ಶಿವರಾಜ್, ವಿಜಯ್, ಉದಯ್, ಸುಬ್ಬರಾಜ್ ಮೊದಲಾದವರು ಹಾಜರಿದ್ದರು.
ನೂತನ ಕಲಾವಿದರನ್ನು ಪ್ರೋತ್ಸಾಹಿಸಿ ಹುರಿದುಂಬಿಸಿ ಸಮಾಜದ ಮುನ್ನೆಲೆಗೆ ತರುವಲ್ಲಿ ಡಾ.ಸಿ.ಅಶ್ವಥ್ ಮೊದಲಿಗರಾಗಿದ್ದು, ಅವರ ಗರಡಿಯಲ್ಲಿ ಬೆಳೆದ ನಾನೇ ಧನ್ಯ.
ಸಾಧುಕೋಕಿಲ, ಖ್ಯಾತ ಸಂಗೀತ ನಿರ್ದೇಶಕ ಹಾಗೂ ಹಾಸ್ಯನಟ.(ಡಾ.ಸಿ.ಅಶ್ವತ್ಥ್ ಪ್ರಶಸ್ತಿ ಪುರಸ್ಕೃತ)ಸಾಮಾನ್ಯ ಕಲಾವಿದರಲ್ಲಿನ ಪ್ರತಿಭೆ ಗುರುತಿಸಿ ಅವರನ್ನು ಪ್ರೋತ್ಸಾಹಿಸಿ ಹೆಚ್ಚಿನ ಸಾಧನೆ ಮಾಡುವಂತಹ ಛಲವನ್ನು ತುಂಬುವ ಜತೆಗೆ ಕಲಾವಿದರಿಗೆ ಉತ್ತಮ ಸ್ಥಾನಮಾನ ನೀಡುವಲ್ಲಿ ಮೊದಲಿಗರಾಗಿದ್ದರು. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಇಲ್ಲಿಯವರೆಗೆ ಬಂದಿದ್ದೇನೆ. ಅವರಿಗೆ ನಾನು ಸದಾ ಚಿರಋಣಿ.
ವೇಣುಗೋಪಾಲ್ ರಾಜು, ಖ್ಯಾತ ಸಂಗೀತ ನಿರ್ದೇಶಕ (ಡಾ.ಸಿ.ಅಶ್ವತ್ಥ್ ಪ್ರಶಸ್ತಿ ಪುರಸ್ಕೃತ)