ಸಾಹಿತ್ಯ ಪರಿಷತ್ ಪ್ರೇಮಕ್ಕೆ ಕೈಗನ್ನಡಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ದೊಡ್ಡ ಧ್ವನಿಯವರೂ ಆಗಿರುವ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ಮತ್ತು ಪದಾಧಿಕಾರಿಗಳು ಅಂತೂ ಇಂತೂ ಎರಡು ದಿನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮುಗಿಸಿದ್ದು, ನುಡಿ ಜಾತ್ರೆ ಯಶಸ್ವಿಯಾಯಿತು ಎಂದು ಪರಿಷತ್ನವರೇ ತಮ್ಮ ಬೆನ್ನು ತಾವು ಚಪ್ಪರಿಸಿಕೊಳ್ಳಬೇಕಷ್ಟೆ.
ಸಮ್ಮೇಳನ ನಿರೀಕ್ಷಿತ ಮಟ್ಟದಲ್ಲಿ ನಡೆಯಲಿಲ್ಲ. ಹಿರಿಯ ಸಾಹಿತಿಗಳಿಗೆ ಸಿಗಬೇಕಾದ ಗೌರವ ಸಿಗಲಿಲ್ಲ ಎಂಬ ಅಸಮಾಧಾನದ ಮಾತುಗಳು ಕೇಳಿ ಬಂದಿವೆ.
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸಮ್ಮೇಳನ ದಿನವೇ ಸೇಡಂದಲ್ಲಿ ಸರ್ಕಾರದ ಇನ್ನೊಂದು ಮಹತ್ವದ ಕಾರ್ಯಕ್ರಮ ಇತ್ತು. ಸಮ್ಮೇಳನ ಉದ್ಘಾಟನೆಗೆ ಹಿರಿಯ ಸಾಹಿತಿಯನ್ನು ಕರೆದು ಉದ್ಘಾಟಿಸಿದ್ದರೆ ಖರ್ಗೆಯವರಿಗೂ ತಮ್ಮ ಪೂರ್ವನಿಯೋಜಿತ ಕಾರ್ಯಕ್ರಮಕ್ಕೆ ಹೋಗಲು ಅನುಕೂಲವಾಗುತ್ತಿತ್ತು. ಆದರೆ ಪರಿಷತ್ನವರು ಸಮ್ಮೇಳನ ಉದ್ಘಾಟನೆ ಜವಾಬ್ದಾರಿಯನ್ನು ಖರ್ಗೆ ಹೆಗಲಿಗೆ ಹಾಕಿ ಒಂದು ರೀತಿ ಇರಿಸು-ಮುರುಸು ಉಂಟು ಮಾಡಿದರು. ಅಂತೂ ಇಂತೂ ಕೆಲ ಸಮಯವನ್ನು ಇಲ್ಲಿ ಕಳೆದ ಖರ್ಗೆ ಅವರು ಬಳಿಕ ಸೇಡಂಗೆ ತೆರಳಿ ಪೂರ್ವನಿಯೋಜಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಹೀಗಿರುವಾಗ ಬಾಪುಗೌಡ ದರ್ಶನಾಪುರ ರಂಗಮಂದಿರದಲ್ಲಿ ಸಮ್ಮೇಳನ ಉದ್ಘಾಟಿಸುವವರು ಯಾರು ಎಂಬ ಪ್ರಶ್ನೆ ಸಾಹಿತಿಗಳನ್ನು ಕಾಡಲಾರಂಭಿಸಿತು. ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಪ್ರೀತಿ ಮತ್ತು ವಿಶ್ವಾಸ ಇರಿಸಿಕೊಂಡಿರುವ ಮತ್ತು ಕನ್ನಡ ಸಾಹಿತ್ಯ ಇನ್ನಷ್ಟು ಮುಗಿಲೆತ್ತರಕ್ಕೆ ಏರಬೇಕೆಂಬ ಬಯಕೆಯ ಹಿರಿಯ ಸಾಹಿತಿ ಡಾ.ಗೀತಾ ನಾಗಭೂಷಣ ಅವರಿಂದ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು. ಅವರು ಸಹ ಸಮ್ಮೇಳನ ಉದ್ಘಾಟಿಸಿ ತಮ್ಮ ಉದಾರತೆ ತೋರಿಸಿಕೊಟ್ಟರು.
ಸಮ್ಮೇಳನಾಧ್ಯಕ್ಷರ ಮೆರವಣಿಗೆಯಿಂದ ಹಿಡಿದು ಉದ್ಘಾಟನೆವರೆಗೂ ಆಮಂತ್ರಣ ಪತ್ರಿಕೆಯನ್ನೊಮ್ಮೆ ನೋಡಿದರೆ ಬರೀ ರಾಜಕಾರಣಿಗಳೇ ಕಾಣಿಸುತ್ತಾರೆ ಹೊರತು, ಸಾಹಿತಿಗಳು ಕಾಣಿಸೋದೇ ಇಲ್ಲ. ಜನಪ್ರತಿನಿಧಿಗಳು ಸಮ್ಮೇಳನಕ್ಕೆ ಬೇಕು ಎಂದರೆ ಆಮಂತ್ರಣ ಪತ್ರಿಕೆಯಲ್ಲಿ ಹಾಕಿಕೊಂಡರೆ ಯಾರೂ ವಿರೋಧಿಸುವುದಿಲ್ಲ. ಆದರೆ ಸಾಹಿತಿಗಳ ನೆನಪೇ ಆಗದಿದ್ದರೆ ಹೇಗೆ? ಇದಕ್ಕೆ ಪರಿಷತ್ನವರೇ ಉತ್ತರಿಸಬೇಕು.
ಪರಿಷತ್ನವರಿಗೆ ಮಾಧ್ಯಮಗಳಲ್ಲಿ ಪುಟಗಟ್ಟಲೇ ಪ್ರಚಾರ ಬೇಕು. ಅದರಲ್ಲಿ ಏನಾದರೂ ವ್ಯತ್ಯಾಸವಾದರೆ ಕಣ್ಣು ಕೆಂಪಗಾಗಿ ಬಿಡುತ್ತದೆ. ಆದರೆ ಉದ್ಘಾಟನೆಯಿಂದ ಹಿಡಿದು ಸಮಾರೋಪವರೆಗೆ ನಡೆಯುವ ಗೋಷ್ಠಿಗಳಲ್ಲಿ ಉಪನ್ಯಾಸಕ್ಕೋ, ಕವನ ಓದಲೆಂದೋ ಅಥವಾ ಇನ್ನಾವುದೇ ಕಾರ್ಯಕ್ರಮಕ್ಕೆ ಮಾಧ್ಯಮದವರ ನೆನಪೇ ಆಗದಿರುವುದು ದುರ್ದೈವ ಸಂಗತಿ. ಎರಡು ದಿನದ ಎಲ್ಲ ಕಾರ್ಯ ಕ್ರಮಗಳಲ್ಲಿ ಒಬ್ಬರೇ ಒಬ್ಬ ಪತ್ರಕರ್ತ ಕಾಣಲಿಲ್ಲ. ಮಾಧ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವವರಲ್ಲಿ ಅನೇಕರು ಸಾಹಿತಿ-ಕವಿಗಳೂ ಆಗಿದ್ದಾರೆ ಎಂಬುದನ್ನು ಪರಿಷತ್ನವರು ಅರ್ಥೈಸಿಕೊಳ್ಳಬೇಕಿತ್ತು.
ನೀವೇ ಎಲ್ಲ ಎಂದು ಮಾಧ್ಯಮದವರನ್ನು ಒಂದೆಡೆ ರಮಿಸುತ್ತ, ಇನ್ನೊಂದೆಡೆ ಅವರನ್ನು ದೂರವಿಡುವ ಕೆಲಸ ಪರಿಷತ್ ವ್ಯವಸ್ಥಿತವಾಗಿ ಮಾಡಿದೆ ಎಂದೂ ವಿಶ್ಲೇಷಿಸಬಹುದಾಗಿದೆ. ಸಮ್ಮೇಳನವೆಂದರೆ ಕನ್ನಡ ನುಡಿ ಸೇವೆ ಎಂದು ಭಾವಿಸಿ ಮಾಧ್ಯಮದವರು ತಾವು ಮಾಡಬೇಕಾದ ಕೆಲಸವನ್ನು ಮಾಡಿದ್ದಾರೆ ಎಂಬುದನ್ನು ಸಿಂಪಿಯವರಾಗಲಿ, ಪರಿಷತ್ನ ಪದಾಧಿಕಾರಿಗಳಾಗಲಿ ಮರೆಯಬಾರದು.

ಇವರಿಗೆ ನೆಲವೇ ಎಲ್ಲ: ಮೊದಲೇ ಕನ್ನಡ ಸಾಹಿತ್ಯದ ಪುಸ್ತಕಗಳು ಮಾರಾಟವಾಗುತ್ತಿಲ್ಲ ಎಂಬ ಕೊರಗು ಸಾಹಿತಿಗಳನ್ನು ಕಾಡುತ್ತಿದೆ. ಇಂಥದರಲ್ಲಿ ಕೆಲವೇ ಕೆಲವು ಶೆಡ್ಗಳನ್ನು ಹೊರತುಪಡಿಸಿದರೆ ಇನ್ನುಳಿದ ಕೆಲ ಪುಸ್ತಕ ಮಾರಾಟಗಾರರು ನೆಲದಲ್ಲೇ ಕುಳಿತು ಪುಸ್ತಕಗಳನ್ನು ಮಾರಬೇಕಾಯಿತು. ಪುಸ್ತಕ ಮಾರಾಟಗಾರರಿಗೆ ಕನ್ನಡ ಭವನ ಆವರಣದಲ್ಲಿ ಇನ್ನಷ್ಟು ಶೆಡ್ಗಳನ್ನು ಹಾಕಿಸಿಕೊಟ್ಟಿದ್ದರೆ ಪರಿಷತ್ಗೆ ಕೀತರ್ಿ ಬರುತ್ತಿರಲಿಲ್ಲವೇ?ಬರೀ ಸಮ್ಮೇಳನ ಮಾಡಿದ ಕೀರ್ತಿ ಪಡೆದರೆ ಸಾಲದು, ಅದರ ಜತೆ ಅಚ್ಚುಕಟ್ಟುತನವೂ ಇರಬೇಕು. ಅಂದಾಗಲೇ ಕನ್ನಡಮ್ಮ ಸಂತಸಗೊಳ್ಳುತ್ತಾಳೆ.

ವಾದ, ವಾಜ್ಯ, ವ್ಯಾಮೋಹವಿಲ್ಲದ ಬದುಕು
ಕಲಬುರಗಿ: ಬದುಕು ಮತ್ತು ಬರಹದ ಜೀವನದಲ್ಲಿ ವಾದ, ಕೌಟುಂಬಿಕ ಜೀವನದಲ್ಲಿ ಯಾವುದೇ ವ್ಯಾಜ್ಯ ಮತ್ತು ಸಂಸಾರದ ಮೇಲೆ ವ್ಯಾಮೋಹ ಇಲ್ಲದೆ ಶಾಂತ, ಸೌಮ್ಯ ಮತ್ತು ಸಚ್ಛಾರಿತ್ರೃ ಸ್ವಭಾವವನ್ನು ಡಾ.ನಾಗಾಬಾಯಿ ಬುಳ್ಳಾ ಮೈಗೂಡಿಸಿಕೊಂಡಿದ್ದಾರೆ ಎಂದು ಹಿರಿಯ ಸಾಹಿತಿ ಪ್ರೊ.ನೀಲಾಂಬಿಕಾ ಪೊಲೀಸ್ ಪಾಟೀಲ್ ಕೊಂಡಾಡಿದರು.
ಸಮ್ಮೇಳನದ 2ನೇ ದಿನದ ಮೊದಲ ಗೋಷ್ಠಿಯಲ್ಲಿ ಸಮ್ಮೇಳನಾಧ್ಯಕ್ಷೆ ಡಾ.ನಾಗಾಬಾಯಿ ಬುಳ್ಳಾ ಬದುಕು ಬರಹ ಕುರಿತು ಉಪನ್ಯಾಸ ನೀಡಿದ ಅವರು, ನಮ್ಮದೇ ಪ್ರಾಂತ್ಯದ ಸಾಹಿತಿಗಳ ಕುರಿತು ನಮಗೆ ದಿವ್ಯ ನಿರ್ಲಕ್ಷೃ. ಇಂತಹ ಸನ್ನಿವೇಶವಿರುವಾಗ ಡಾ.ನಾಗಾಬಾಯಿ ಬುಳ್ಳಾ ಅವರು ಸಿದ್ದಯ್ಯ ಪುರಾಣಿಕರ ಸಾಹಿತ್ಯ ಕುರಿತು ಸಂಶೋಧನೆ ಮಾಡಿ, ಅಂಬಿಗರ ಚೌಡಯ್ಯನವರ ಪ್ರಖರ ಚಿಂತನೆಗಳನ್ನು ವ್ಯಾಖ್ಯಾನಿಸಿ ಅಭಿನಂದನೀಯ ಕಾರ್ಯ ಮಾಡಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಚಿಂತಕಿ ಡಾ.ನೀಲಮ್ಮ ಕತ್ನಳ್ಳಿ ಶಹಾಬಾದ್ ಮಾತನಾಡಿದರು. ಪ್ರಮುಖರಾದ ಶರಣಬಸಪ್ಪ ಹೀರಾ, ದೇವೇಗೌಡ ತೆಲ್ಲೂರ, ಆರ್.ಭೀಮರಾಯ ನೆಲೋಗಿ, ಅಣವೀರ ಹಂಡಿ, ಬಿ.ಆರ್.ಪಾಟೀಲ್, ಸುರೇಶ ಪಾಟೀಲ್ ಜೋಗೂರ ಉಪಸ್ಥಿತರಿದ್ದರು. ಶಿವನಗೌಡ ಹಂಗರಗಿ ಸ್ವಾಗತಿಸಿದರು. ಆನಂದ ನಂದೂರಕರ್ ವಂದಿಸಿದರು. ಡಾ.ಭೀಮರಾಯ ಅರಕೇರಿ ನಿರೂಪಣೆ ಮಾಡಿದರು. ಶರಣಮ್ಮ ಎಂ.ಮಾದರ ಸುಂಬಡ ಅವರ ತಂಡ ಸಂಪ್ರದಾಯದ ಹಾಡುಗಳನ್ನು ಹಾಡಿತು.
ಆತಂಕದಲ್ಲಿದೆ ವಿಮರ್ಶಾ ಕ್ಷೇತ್ರ: ಯಾವುದೇ ಕ್ಷೇತ್ರದ ವಿಮರ್ಶೆ ಮಾಡುವುದೇ ಅಪಾಯ ಎಂಬ ಆತಂಕದ ಸನ್ನಿವೇಶ ಸೃಷ್ಟಿಯಾಗಿರುವ ಈ ದಿನಗಳಲ್ಲಿ ಮುಕ್ತವಾಗಿ ವಿಮರ್ಶೆ ಅಥವಾ ಟೀಕೆ ಸ್ವೀಕರಿಸುವ ಮನೋಭಾವ ನಿರ್ಮಾಣವಾಗಬೇಕಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ವಿಕ್ರಮ ವಿಸಾಜಿ ಅಭಿಪ್ರಾಯ ಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ 2ನೇ ದಿನದ 2ನೇ ಗೋಷ್ಠಿಯಲ್ಲಿ ವಿಮರ್ಶೆ ತತ್ವ-ಸತ್ವ ಕುರಿತು ಮಾತನಾಡಿದ ಅವರು, ವ್ಯಕ್ತಿಗತ ನಿಲುವು, ಧೋರಣೆ ಅಥವಾ ಸ್ವಯಂ ವೇದ್ಯ ಅರಿವಿನ ಪೂರ್ವಗ್ರಹ ಪೀಡಿತ ವಿಮರ್ಶೆಯಿಂದ ಕೃತಿಗೆ ಅನ್ಯಾಯವಾಗುತ್ತದೆ. ವಿಮರ್ಶೆ ಸುತ್ತಲಿನ ಸಂಗತಿಗಳ ಕುರಿತು ಹೇಳುವ ಬದಲಿಗೆ ಪಠ್ಯ ಕೇಂದ್ರಿತ ವಿಮರ್ಶೆ ಜತೆಗೆ ಕೃತಿಯ ಒಳನೋಟಗಳನ್ನು ಸಮಾಜಕ್ಕೆ, ಸಂಸ್ಕೃತಿಗೆ ಅನ್ವಯಿಸಿ ನೋಡುವ ಒಳಗಿನಲೋಕದ ಕುರಿತು, ವಸ್ತು, ಭಾಷೆ, ಶೈಲಿ ಇತರ ಓದುಗರಿಗೆ ಹೇಳುವ ವಿಧಾನವೇ ವಿಮರ್ಶೆ ಎನಿಸುತ್ತದೆ. ಮುಕ್ತ ವಾತಾವರಣದಲ್ಲಿ ಮಾತ್ರ ನಿಜವಾದ ವಿಮರ್ಶೆ ಬರೆಯಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಹುಭಾಷಾ ತಜ್ಞೆ ಪ್ರೊ.ಪರಿಮಳಾ ಅಂಬೇಕರ್ ಮಾತನಾಡಿದರು. ಭಾಷಾಂತರ ಕುರಿತು ಲೇಖಕಿ ಡಾ.ಚಂದ್ರಕಲಾ ಬಿದರಿ, ಭಾಷಾಂತರಕಾರರ ಕುರಿತು ಡಾ.ಶಾರದಾ ರಾಠೋಡ ಮಾತನಾಡಿದರು. ಸದಾಶಿವ ಮೇತ್ರೆ, ಗಂಗಾಧರ ಶ್ರೀಗಿರಿ, ಈರಣ್ಣ ಪಂಚಾಳ, ಬಾಲಚಂದ್ರ ಭೂಸನೂರ, ರವಿ ಪಾಟೀಲ್, ವಿವೇಕಾನಂದ ಹಿರೇಮಠ ಇದ್ದರು. ಜಿ.ಜಿ.ವಣಕ್ಯಾಳ ಸ್ವಾಗತಿಸಿದರು. ಅಂಬಾಜಿ ಕೌಲಗಿ ವಂದಿಸಿದರು. ಡಾ.ಸೂರ್ಯಕಾಂತ ಪಾಟೀಲ್ ನಿರೂಪಣೆ ಮಾಡಿದರು.
ಶುಭ ಕೋರಿದ ಬಿ.ಜಿ.ಪಾಟೀಲ: ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಸಮ್ಮೇಳನಕ್ಕೆ ಆಗಮಿಸಿ ಸರ್ವಾಧ್ಯಕ್ಷೆ ಡಾ.ನಾಗಾಬಾಯಿ ಬುಳ್ಳಾ ಅವರಿಗೆ ಅಭಿನಂದಿಸಿದರು. ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಆತ್ಮೀಯರು, ಅಭಿಮಾನಿಗಳು, ಬಂಧು ಬಾಂಧವರು ಡಾ.ಬುಳ್ಳಾ ಅವರಿಗೆ ಸನ್ಮಾನಿಸಿ ಶುಭಾಶಯ ಹೇಳಿದರು.

  • 6 ನಿರ್ಣಯಗಳಿಗೆ ಸಮ್ಮೇಳನ ಅಸ್ತು
  • ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನುದಾನ ಕಂದಾಯ ವಿಭಾಗವಾರು ವಿಂಗಡಿಸಿ ಹಂಚಬೇಕು.
  • ರೈತ ಸಾಲ ಮನ್ನಾ ಯೋಜನೆಗಿಂತ ಶಾಶ್ವತ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ಕ್ರಮ ಕೈಗೊಳ್ಳಬೇಕು.
  • ಅತಿ ಸಣ್ಣ ರೈತರಿಗೆ ಮಾಸಾಶನ ಜಾರಿಗೊಳಿಸಬೇಕು.
  • ಅಕ್ರಮ ಮರಳು ತಡೆಗೆ ಕ್ರಮ ಕೈಗೊಳ್ಳಬೇಕು ಮತ್ತು ಕಾಮಗಾರಿ ಬದಲಿಗೆ ಇತರ ತಾಂತ್ರಿಕತೆ ಅಳವಡಿಸಿಕೊಳ್ಳಬೇಕು.
  • ಜಿಲ್ಲೆಯ ನೀರಾವರಿ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು.
  • ಕಲಬುರಗಿ ರೈಲ್ವೆ ವಿಭಾಗೀಯ ಕೇಂದ್ರವನ್ನು ಕೂಡಲೇ ಅನುಷ್ಠಾನಗೊಳಿಸಬೇಕು.