ಕನ್ನಡ ವಿವಿಯಲ್ಲಿ ವಚನ ಅಧ್ಯಯನ ಕೇಂದ್ರ ಸ್ಥಾಪನೆ

ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕುಲಪತಿ ಡಾ.ಸ.ಚಿ.ರಮೇಶ್ ಹೇಳಿಕೆ

ಹೊಸಪೇಟೆ: ಶ್ರೀ ಪ್ರಭು ಸ್ವಾಮೀಜಿ ಬಯಕೆಯಂತೆ ಮಠ, ಮಾನ್ಯಗಳ ಸಹಕಾರ ದೊರೆತರೆ ಕನ್ನಡ ವಿವಿ ಆವರಣದಲ್ಲಿ ವಚನ ಅಧ್ಯಯನ ಪೀಠ ಶೀಘ್ರವೇ ಸ್ಥಾಪಿಸಲಾಗುವುದು ಎಂದು ಕುಲಪತಿ ಡಾ.ಸ.ಚಿ.ರಮೇಶ್ ತಿಳಿಸಿದರು.

ವಿಜಯನಗರ ಕಾಲೇಜಿನ ಸಭಾಂಗಣದಲ್ಲಿ ಶರಣ ಸಾಹಿತ್ಯ ಪರಿಷತ್, ವಿಜಯನಗರ ಕಾಲೇಜ್ ಹಾಗೂ ಕರ್ನಾಟಕ ಸಂಘ ಆಯೋಜಿಸಿದ್ದ ಜಾನಪದ ವಿದ್ವಾಂಸ ಡಾ.ಬಸವರಾಜ ಮಲಶೆಟ್ಟಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಗಮಕನಿಧಿ ಜೋಳದರಾಶಿ ದೊಡ್ಡನಗೌಡರ ನಾಟಕಗಳ ವಿಶ್ಲೇಷಣೆ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು. ಬಳ್ಳಾರಿ ಜಿಲ್ಲೆ ಶರಣರ ನೆಲವೀಡು. ಇಂಥ ನೆಲದಲ್ಲಿ ವಚನ ಅಧ್ಯಯನ ಪೀಠದ ಅಗತ್ಯವಿದೆ. ಹೀಗಾಗಿ, ಪೀಠ ಸ್ಥಾಪನೆಗೆ ಮುಂದಾಗುವುದಾಗಿ ತಿಳಿಸಿದರು.

ಡಾ.ಬಸವರಾಜ ಮಲಶೆಟ್ಟಿ ವಿರಚಿತ, ಕನ್ನಡ ವಿವಿ ಹಸ್ತಪ್ರತಿ ವಿಭಾಗದ ಮುಖ್ಯಸ್ಥ ಡಾ.ಕೆ.ರವೀಂದ್ರನಾಥ ಸಂಪಾದಿಸಿ, ಪರಿಷ್ಕರಿಸಿದ ಪುಸ್ತಕದಲ್ಲಿ ಒಟ್ಟು 7 ನಾಟಕಗಳಿದ್ದು, ವಿಶೇಷ ಜ್ಞಾನ ಕೊಡುವಂಥ ಗ್ರಂಥವಾಗಿದೆ. ಜತೆಗೆ ಪುಸ್ತಕ ಓದುವ ಮನಸ್ಸು ಮೂಡಿಸುವ ಉತ್ತಮ ಕೃತಿಯಾಗಿದೆ. ಮಹಿಳೆಯರನ್ನು ಗೌರವಿಸುವ ಸಂದರ್ಭಗಳಲ್ಲಿ ಈ ನಾಟಕಗಳಲ್ಲಿವೆ. ವಿನಯ ಇದ್ದರೆ ಕೀರ್ತಿ ಸಂಪಾದಿಸಬಹುದು ಎನ್ನುವುದಕ್ಕೆ ಡಾ.ಮಲಶೆಟ್ಟಿಯವರು ಉತ್ತಮ ನಿದರ್ಶನ ಎಂದರು.

ಡಾ.ಬಸವರಾಜ ಮಲಶೆಟ್ಟಿಯವರ ದತ್ತಿ ವಿಷಯ ಕುರಿತು ಕನ್ನಡ ವಿವಿ ಪ್ರಾಧ್ಯಾಪಕ ಡಾ.ಕೆ.ರವೀಂದ್ರನಾಥ ಮಾತನಾಡಿದರು. ಸಾಲಿ ಸಿದ್ದಯ್ಯಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಡೂರು ಪ್ರಭುದೇವರ ಸಂಸ್ಥಾನ ವಿರಕ್ತ ಮಠದ ಶ್ರೀ ಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರಾಚಾರ್ಯ ಡಾ.ವಿ.ಎಸ್.ಪ್ರಭಯ್ಯ, ಪ್ರಾಧ್ಯಾಪಕ ಡಾ.ಮೃತ್ಯುಂಜಯ ರುಮಾಲೆ, ಟಿ.ಎಚ್.ಬಸವರಾಜ, ಲಕ್ಷ್ಮಣ ಕರಿಭೀಮಣ್ಣ, ಮಾವಿನಹಳ್ಳಿ ಬಸವರಾಜ, ಡಾ.ಬಸವರಾಜ ಮಲಶೆಟ್ಟಿ ಪತ್ನಿ ಶಾರದಾ ಮಲಶೆಟ್ಟಿ ಇತರರಿದ್ದರು. ಡಾ.ಮಲಶೆಟ್ಟಿಯವರ ದತ್ತಿನಿಧಿಗೆ ವಿಜಯನಗರ ಕಾಲೇಜಿನಿಂದ 30 ಸಾವಿರ ರೂ. ನೀಡುವುದಾಗಿ ಅಧ್ಯಕ್ಷ ಸಾಲಿಸಿದ್ದಯ್ಯಸ್ವಾಮಿ ಘೋಷಿಸಿದರು.

ಬಯಲಾಟದ ಮೂಲ ಬಳ್ಳಾರಿ
ಬಯಲಾಟದ ಮೂಲ ರೂಪ ಬಳ್ಳಾರಿ ಜಿಲ್ಲೆಯಲ್ಲಿದೆ ಎನ್ನುವುದನ್ನು ಸಾರಿದವರು ಜಾನಪದ ವಿದ್ವಾಂಸ ಡಾ.ಬಸವರಾಜ ಮಲಶೆಟ್ಟಿ. ಅವರ ಸಾಂಸ್ಕೃತಿಕ, ರಂಗಭೂಮಿಯ ಕ್ಷೇತ್ರದ ಸಾಧನೆಯ ಕುರಿತು ರಾಜ್ಯದ ತುಂಬ ಜನರಿಗೆ ಪರಿಚಯಿಸಬೇಕಿದೆ. ಕನ್ನಡ ವಿವಿಯಲ್ಲಿ ವಚನ ಅಧ್ಯಯನ ಪೀಠ ಸ್ಥಾಪನೆಯ ಕುರಿತು ನಾಲ್ಕೈದು ದಿನಗಳ ಹಿಂದೆ ಪ್ರಸ್ತಾಪ ಮಾಡಿದ್ದಕ್ಕೆ ಸ್ಪಂದಿಸಿದ ಕನ್ನಡ ವಿವಿ ಕುಲಪತಿ ಡಾ.ಸ.ಚಿ.ರಮೇಶ್ ಪೀಠ ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದು ಸಂತೋಷದ ಸಂಗತಿ. ಸರ್ಕಾರ ಮಠ, ಮಾನ್ಯಗಳಿಗೆ ಅನುದಾನ ನೀಡುವುದನ್ನು ನಿಲ್ಲಿಸಿ ವಚನ ಅಧ್ಯಯನ ಪೀಠಕ್ಕೆ ನೀಡುವಂತೆ ಮುಖ್ಯಮಂತ್ರಿಯನ್ನು ಎಲ್ಲ ಮಠಾಧೀಶರು ಭೇಟಿಯಾಗಿ ಹೇಳುವ ಕಾರ್ಯ ಮಾಡುತ್ತೇವೆ ಎಂದು ತಿಳಿಸಿದರು.