ರಸ್ತೆ ಅಪಘಾತದಲ್ಲಿ ಮೃತಪಟ್ಟ ಐವರಲ್ಲಿ ಮಗಳು ಜಾನಕಿ ಧಾರವಾಹಿಯ ಮಂಗಳಕ್ಕನ ಪಾತ್ರಧಾರಿಯೂ ಒಬ್ಬರು!

ಚಿತ್ರದುರ್ಗ: ಬುಧವಾರ ಮಧ್ಯಾಹ್ನ ಚಿತ್ರದುರ್ಗದ ಕುಂಚಿಗನಾಳ್ ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಒಂದೇ ಕುಟುಂಬದ ಐವರಲ್ಲಿ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಟಿ ಸೀತಾರಾಂ ನಿರ್ದೇಶನದ ‘ಮಗಳು ಜಾನಕಿ’ ಧಾರವಾಹಿಯ ಪಾತ್ರಧಾರಿಯು ಸೇರಿದ್ದಾರೆ.

‘ಮಗಳು ಜಾನಕಿ’ ಧಾರವಾಹಿಯ ಮಂಗಳಕ್ಕನ ಪಾತ್ರಧಾರಿಯಾಗಿದ್ದ ಶೋಭಾ ಎಂಬವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದ್ದು, ಮಗಳು ಜಾನಕಿ ಫೇಸ್ ಬುಕ್ ಪೇಜ್‌ನಲ್ಲಿ ಕಲಾವಿದರು ಸಾವಿಗೆ ಸಂತಾಪ ಸೂಚಿಸಿದ್ದಾರೆ.

ತಮ್ಮ ಸಹಜ-ನೈಜ ನಟನೆಯಿಂದ ನಮ್ಮೆಲ್ಲರ ಮನ ಗೆದ್ದಿದ್ದ ಮಗಳು ಜಾನಕಿಯ ಮಂಗಳಕ್ಕ(ಆನಂದ ಬೆಳಗೂರ್ ತಾಯಿ) ಪಾತ್ರಧಾರಿ ಶೋಭಾ ಎಮ್‌.ವಿ. ಅವರು ನಿನ್ನೆ ಸಂಭವಿಸಿದ ಅಪಘಾತದಲ್ಲಿ ನಮ್ಮನ್ನೆಲ್ಲ ಅಗಲಿದ್ದಾರೆ. ಮಗಳು ಜಾನಕಿ ಫೇಸ್‌ಬುಕ್‌ ಬಳಗವು ಅಗಲಿದ ಚೇತನಕ್ಕೆ ಭಗವಂತ ಸದ್ಗತಿ ಕರುಣಿಸಲಿ ಹಾಗೂ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಸಂತಾಪ ಸೂಚಿಸಿದ್ದಾರೆ.

ಅನೇಕ ಚಲನಚಿತ್ರಗಳು-ಧಾರಾವಾಹಿಗಳಲ್ಲಿ ನಟಿಸಿರುವ ಇವರು ಅತ್ಯಂತ ಸಜ್ಜನರು, ಸೌಮ್ಯ ಸ್ವಭಾವದವರಾಗಿದ್ದರು. ಇವರ ಅಗಲಿಕೆ ತಂಡಕ್ಕೆ ದೊಡ್ಡ ನಷ್ಟ ಎಂದು ಮಗಳು ಜಾನಕಿ ತಂಡ ಹೇಳಿಕೊಂಡಿದೆ.