ಕನ್ನಡ ಶಾಲೆಯಲ್ಲಿ ಸಂಸ್ಕಾರ ಶಿಕ್ಷಣ

ಯಶೋಧರ ವಿ.ಬಂಗೇರ ಮೂಡುಬಿದಿರೆ

ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿರುವ ಈ ಕಾಲಘಟ್ಟದಲ್ಲಿ ದೇಶೀಯತೆ, ಸಂಸ್ಕಾರ ಶಿಕ್ಷಣ ನೀಡುವುದರ ಜತೆಗೆ ಕನ್ನಡ ಶಾಲೆಯನ್ನು ಮೇಲ್ದರ್ಜೆಗೇರಿಸಿ, ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುವಂತೆ ಮಾಡಿದ ಸಾರ್ಥಕ ಸೇವೆ ಆರ್‌ಎಸ್‌ಎಸ್ ಮುಂದಾಳತ್ವದ ಸೇವಾಂಜಲಿ ಎಜುಕೇಶನಲ್ ಟ್ರಸ್ಟ್ ಹಾಗೂ ಪ್ರೇರಣಾ ಸೇವಾ ಟ್ರಸ್ಟ್‌ನದ್ದಾಗಿದೆ.

ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲಿರುವ ಕಡಲಕೆರೆ ಸಂತ ಇಗ್ನೇಶಿಯಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯನ್ನು ಕಳೆದ ಮೂರು ವರ್ಷಗಳಲ್ಲಿ ದೇಶೀಯ ಚಿಂತನೆಯೊಂದಿಗೆ ಅಭಿವೃದ್ಧಿಪಡಿಸುತ್ತಿರುವ ಎರಡು ಟ್ರಸ್ಟ್‌ಗಳು ಕನ್ನಡ ಶಾಲೆಗೆ ಹೊಸತೊಂದು ರೂಪು ನೀಡಿದೆ.
ಹಳೆಯ ಆಡಳಿತ ಮಂಡಳಿಯಿಂದ ಮೂರು ವರ್ಷದ ಹಿಂದೆ ಟ್ರಸ್ಟ್‌ಗೆ ಹಸ್ತಾಂತರವಾಗುವ ಸಂದರ್ಭ 54 ವಿದ್ಯಾರ್ಥಿಗಳು ಒಂದರಿಂದ ಏಳನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿದ್ದರು. ವಿದ್ಯಾರ್ಥಿಗಳ ಸಂಖ್ಯೆ ಪ್ರತಿವರ್ಷದಲ್ಲಿ ಇಳಿಕೆಯಾಗುವ ಸಂದರ್ಭ ಹೊಸ ಆಡಳಿತ ಭಾರತೀಯ ತತ್ವ ಸಿದ್ಧಾಂತಗಳ ಆಧಾರದಲ್ಲಿ ಸಂಸ್ಕಾರ ಶಿಕ್ಷಣದ ಪರಿಕಲ್ಪನೆಯನ್ನು ಶಾಲೆಯಲ್ಲಿ ಅಳವಡಿಸಿದ್ದು, ಪ್ರಸಕ್ತ ವರ್ಷದಲ್ಲಿ 224 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಟ್ರಸ್ಟ್‌ಗೆ ಹಸ್ತಾಂತರವಾಗುವ ಸಂದರ್ಭ ಆ ವರ್ಷದಲ್ಲಿ 4 ವಿದ್ಯಾರ್ಥಿಗಳು ಒಂದನೇ ತರಗತಿಗೆ ಪ್ರವೇಶ ಪಡೆದಿದ್ದು, ಈ ವರ್ಷ 34 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.

ಅಕ್ಷರ ಜ್ಞಾನ ಜತೆಗೆ ಸಂಸ್ಕಾರ ಶಿಕ್ಷಣ: ರಾಷ್ಟ್ರೀಯ ಸ್ವಯಂಸೇವಾ ಸಂಘದಲ್ಲಿ ಹಲವು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಪ್ರೊ.ವಾಸುದೇವ್ ಭಟ್ ನೇತೃತ್ವದಲ್ಲಿ ಎರಡೂ ಟ್ರಸ್ಟ್ ಪದಾಧಿಕಾರಿಗಳು ಶಾಲೆ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಮೂರರಿಂದ ಆರು ವರ್ಷದೊಳಗಿನ ಮಕ್ಕಳಿಗಾಗಿ ಶಿಶು ಮಂದಿರವಿದ್ದು, ಪ್ರಸಕ್ತ ವರ್ಷ 60 ವಿದ್ಯಾರ್ಥಿಗಳು ಅಲ್ಲಿ ಸಂಸ್ಕಾರ ಶಿಕ್ಷಣ ಪಡೆಯುತ್ತಿದ್ದಾರೆ. ಅಕ್ಷರ ಜ್ಞಾನದ ಜತೆಗೆ ಸಂಸ್ಕಾರ ಶಿಕ್ಷಣವನ್ನು ಮಕ್ಕಳು ಪಡೆಯುತ್ತಿದ್ದು, ಯೋಗ, ಶ್ಲೋಕ, ಪುರಾಣ ಚಿಂತನೆಗಳೊಂದಿಗೆ ಮಕ್ಕಳಿಗೆ ದೇಶೀಯತೆ ಅರಿವು ಮೂಡಿಸಲಾಗುತ್ತಿದೆ. ಉಚಿತವಾಗಿ ಶಿಕ್ಷಣ ಈ ಶಾಲೆಯಲ್ಲಿ ನೀಡಲಾಗುತ್ತಿದೆ.
ಒಂದರಿಂದ ಏಳನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಇಂಗ್ಲಿಷ್ ಸ್ಪೋಕನ್ ತರಗತಿಗಳನ್ನು ನಡೆಸಲಾಗುತ್ತಿದೆ. ಇದಕ್ಕಾಗಿ ಪ್ರತ್ಯೇಕವಾಗಿ ಶಿಕ್ಷಕರನ್ನು ಟ್ರಸ್ಟ್ ನೇಮಿಸಿದೆ. ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಯೋಗ, ಕರಾಟೆಗಳನ್ನು ಕಲಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಈಜು ಕಲಿಸುವ ಚಿಂತನೆ ಆಡಳಿತ ಮಂಡಳಿಯದ್ದು. ಸಂಸ್ಕಾರ ಶಿಕ್ಷಣದ ಮುಖೇನ ಆತ್ಮವಿಶ್ವಾಸ, ಅಕ್ಷರ ಜ್ಞಾನ ಪಡೆಯುವುದರೊಂದಿಗೆ ಸ್ವರಕ್ಷಣೆಗೆ ಹೆಚ್ಚಿನ ಮಹತ್ವ ನೀಡುತ್ತಿದೆ.

ಶಾಲೆಯಲ್ಲಿ ಸಿಗುತ್ತಿರುವ ಮಾದರಿ ಶಿಕ್ಷಣದಿಂದ ಪಾಲಕರು ಪ್ರೇರಿತರಾಗಿದ್ದು, ಮೂಡುಬಿದಿರೆ ನಗರ ಮಾತ್ರವಲ್ಲದೆ ಬೆಳುವಾಯಿ, ಮಾರೂರು, ಪುತ್ತಿಗೆ, ಕೊಡ್ಯಡ್ಕ ಸಹಿತ ಗ್ರಾಮಾಂತರ ಪ್ರದೇಶಗಳಿಂದಲೂ ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಬರುತ್ತಿದ್ದಾರೆ. ಎರಡು ಮಿನಿ ಬಸ್, ಒಂದು ಟೆಂಪೋ ಟ್ರಾವೆಲರ್ ಹಾಗೂ ಒಂದು ಕಾರಿನಲ್ಲಿ ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರಲಾಗುತ್ತಿದೆ.

ದಾನಿಗಳ ನೆರವಿನೊಂದಿಗೆ ಶಾಲಾಭಿವೃದ್ಧಿ
ಶಾಲೆಯಲ್ಲಿ 10 ಮಂದಿ ಶಿಕ್ಷಕರಿದ್ದು, ಮುಖ್ಯಶಿಕ್ಷಕರಿಗೆ ಮಾತ್ರ ಸರ್ಕಾರದಿಂದ ಸಂಬಳ ಸಿಗುತ್ತಿದೆ. ಉಳಿದಂತೆ 9 ಮಂದಿ ಶಿಕ್ಷಕರ ಸಂಬಳವನ್ನು ಟ್ರಸ್ಟ್ ದಾನಿಗಳ ನೆರವಿನಿಂದ ನೀಡುತ್ತಿದೆ. ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಮಧ್ಯಾಹ್ನದ ಬಿಸಿಯೂಟ ಸಿಗುತ್ತಿದ್ದು, ಶಿಶು ಮಂದಿರ ವಿದ್ಯಾರ್ಥಿಗಳಿಗೆ ಆಹಾರವನ್ನು ಟ್ರಸ್ಟ್ ನೀಡುತ್ತಿದೆ. ಎಂಆರ್‌ಪಿಎಲ್ ಪ್ರಾಯೋಜಕತ್ವದ ಒಂದು ಕೋಟಿ ರೂ. ಅನುದಾನದಲ್ಲಿ ಶಾಲೆಗೆ ಸುಸಜ್ಜಿತ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು, ಜುಲೈ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. 40 ಲಕ್ಷ ರೂ. ವೆಚ್ಚದಲ್ಲಿ ಶಿಶುಮಂದಿರ ನಿರ್ಮಾಣಗೊಳ್ಳಲಿದ್ದು, ಅದಾನಿ ಗ್ರೂಪ್ಸ್ 25 ಲಕ್ಷ ರೂ. ನೆರವು ನೀಡಿದೆ.

96 ವರ್ಷ ಇತಿಹಾಸವಿರುವ ಕಡಲಕೆರೆ ಶಾಲೆ ಮುಚ್ಚವ ಹಂತದಲ್ಲಿರುವುದನ್ನು ಅರಿತ ನಾವು ಆ ಶಾಲೆಯನ್ನು ಭಾರತೀಯ ಶಿಕ್ಷಣ ಪದ್ಧತಿ ಪರಿಕಲ್ಪನೆಯಲ್ಲಿ ಮರುಜೀವ ನಡೆಸಲು ಚಿಂತನೆ ನಡೆಸಿದ್ದೆವು. ಅದರ ಫಲವಾಗಿ ಸಹೃದಯ ದಾನಿಗಳ ನೆರವಿನಲ್ಲಿ ಶಾಲೆಗೆ ಸುಸಜ್ಜಿತ ಕಟ್ಟಡ ನಿರ್ಮಾಣವಾಗುತ್ತಿದೆ. ಶಾಲೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಚಿಂತನೆ ನಮ್ಮಲ್ಲಿದೆ. ಪ್ರಾರಂಭದ ಶಿಕ್ಷಣ ಕನ್ನಡದಲ್ಲೇ ನೀಡಿ, ಬಳಿಕ 6ನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಿಕ್ಷಣ ನೀಡುವ ಉದ್ದೇಶವಿದೆ. ಶಾಲೆಯನ್ನು ಮೇಲ್ದರ್ಜೆಗೇರಿಸಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಸ್ಥಾಪಿಸುವ ಉದ್ದೇಶ ನಮ್ಮ ಟ್ರಸ್ಟ್‌ನದ್ದಾಗಿದೆ.
ಎಂ.ವಾಸುದೇವ ಭಟ್, ಸಂಚಾಲಕರು, ಸೇವಾಂಜಲಿ ಎಜ್ಯಕೇಶನ್ ಟ್ರಸ್ಟ್

Leave a Reply

Your email address will not be published. Required fields are marked *