ದೇವದುರ್ಗ: ಕನ್ನಡ ನಾಡಿನ ಭಾಷೆ, ನೆಲ, ಜಲ ಸಂರಕ್ಷಣೆ ಜತೆಗೆ ನಮ್ಮ ಅಸ್ಮಿತೆ ಎತ್ತಿಹಿಡಿಯಲು ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿಸಿದ್ದಾರೆ. ಅದರ ಫಲವಾಗಿ ಪರಿಷತ್ ಸಾಹಿತ್ಯ ವಲಯಕ್ಕೆ ಅನೇಕ ಕೊಡುಗೆ ನೀಡಿದೆ ಎಂದು ಕಸಾಪ ತಾಲೂಕು ಸಂಘಟನಾ ಕಾರ್ಯದರ್ಶಿ ವೇಣುಗೋಪಾಲಗೌಡ ಪಾಟೀಲ್ ಹೇಳಿದರು.

ಇದನ್ನೂ ಓದಿ: ಕನ್ನಡ ವಿರೋಧಿ ಶಕ್ತಿಗಳ ವಿರುದ್ಧ ಎಲ್ಲರೂ ಒಂದಾಗಿ
ಪಟ್ಟಣದ ಬಸವ ಕಾಲೇಜಿನಲ್ಲಿ ಕಸಾಪ ತಾಲೂಕು ಘಟಕ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್‌ನ 111ನೇ ಸಂಸ್ಥಾಪನೆ ದಿನ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಮಾತೃಭಾಷೆ ಕನ್ನಡ ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯ. ಮೈಸೂರಿನ ದಿವಾನರಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯ, ಸರ್ ಮಿರ್ಜಾ ಇಸ್ಮಾಯಿಲ್ ಕಸಾಪ ಬೆಳವಣಿಗೆಗೆ ಅಪಾರವಾದ ಕೊಡುಗೆ ನೀಡಿದ್ದಾರೆ. ನಾಡು, ನುಡಿ, ಭಾಷೆ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಕನ್ನಡಿಗರು ಒಂದಾಗಬೇಕು ಎಂದರು.
ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ ಮಾತನಾಡಿ, ಕಸಾಪದಿಂದ ಯುವಜನತೆಯನ್ನು ಸಾಹಿತ್ಯದ ಕಡೆ ಸೆಳೆಯಲು ಅನೇಕ ಕಾರ್ಯಕ್ರಮ ರೂಪಿಸಲಾಗಿದೆ. ಪ್ರತಿವರ್ಷ ಕನ್ನಡ ಸಾಹಿತ್ಯ ಸಮ್ಮೇಳನ, ದತ್ತಿನಿಧಿ ಕಾರ್ಯಕ್ರಮ, ಶಾಲಾ ಕಾಲೇಜು ಹಂತದಲ್ಲಿ ಸಾಹಿತ್ಯ ಚಟುವಟಿಕೆಗಳು ಸೇರಿ ವಿವಿಧ ಗೋಷ್ಠಿಗಳನ್ನು ಆಯೋಜಿಸಲಾಗಿದೆ.
ಯುವಜನತೆ ಸಾಹಿತ್ಯದ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು. ಪ್ರಾಚಾರ್ಯ ಶ್ಯಾಮ್‌ಸುಂದರ್, ಉಪನ್ಯಾಸಕ ನಿತೀಶಕುಮಾರ, ಕಸಾಪ ಸಹಕಾರ್ಯದರ್ಶಿ ಶಿವರಾಜ ರುದ್ರಾಕ್ಷಿ, ಶಿವರಾಜ ಅಮರಾಪುರ ಇತರರಿದ್ದರು.