More

    ನೋಡುವ ಸಂಸ್ಕೃತಿಗಿಂತ ಓದುವ ಸಂಸ್ಕೃತಿ ಅಗತ್ಯ

    ಕೋಲಾರ: ಭಾಷಾ ನೀತಿಯ ವಿಷಯದಲ್ಲಿ ದೃಢ ನಿರ್ಧಾರ ತೆಗೆದುಕೊಳ್ಳದ ಸರ್ಕಾರದ ನೀತಿಗಳಿಂದ ರಾಜ್ಯದ ಅರ್ಧದಷ್ಟು ಮಕ್ಕಳು ಆಂಗ್ಲ ಮಾಧ್ಯಮದಲ್ಲಿ ಓದುವಂತಾಗಿದೆ ಎಂದು ಸಮ್ಮೇಳನಾಧ್ಯಕ್ಷ ಡಾ.ಸಿ.ಎಂ.ಗೋವಿಂದರೆಡ್ಡಿ ನುಡಿದರು.

    ನಗರದ ಟಿ.ಚನ್ನಯ್ಯ ರಂಗಮಂದಿರದ ಜಿ.ಪಿ.ರಾಜರತ್ನಂ ವೇದಿಕೆಯಲ್ಲಿ ಗುರುವಾರ ಆರಂಭಗೊಂಡ ಕೋಲಾರ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿ, ಮಕ್ಕಳು ಕನ್ನಡದಿಂದ ದೂರವಾಗುತ್ತಿರುವುದು ವಿಷಾದದ ಸಂಗತಿ. ಕಾನ್ವೆಂಟ್‌ಗಳ ವ್ಯಾಮೋಹ ಹೆಚ್ಚಾದಂತೆ ಪಾಲಕರು ಮಕ್ಕಳಿಗೆ ಆಂಗ್ಲ ಮಾಧ್ಯಮದ ಶಿಕ್ಷಣ ಕೊಡಿಸಲಾರಂಭಿಸಿ ಅವರು ಕನ್ನಡದಲ್ಲಿ ಮಾತನಾಡಲು ಹಿಂಜರಿಯುವ ಸ್ಥಿತಿ ಬಂದಿದೆ ಎಂದು ಬೇಸರಿಸಿದರು.

    ಮಕ್ಕಳ 14ರಿಂದ 15 ವರ್ಷದ ಅವಧಿಯಲ್ಲಿ ಲೋಕಗ್ರಹಿಕೆಗೆ ಮಾತೃಭಾಷೆ ಪ್ರಧಾನ ಪಾತ್ರವಹಿಸುತ್ತದೆ. ಆದರೆ ಸರ್ಕಾರ ಭಾಷಾ ನೀತಿ ವಿಚಾರದಲ್ಲಿ ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಸೋತಿದೆ. ಕಾನ್ವೆಂಟ್ ಶಾಲೆಗಳಲ್ಲಿ ನೈತಿಕ ಶಿಕ್ಷಣ ಪುಸ್ತಕಗಳ ಅಲಂಕಾರಕ್ಕಷ್ಟೇ, ಅದು ಮಕ್ಕಳ ಪುಸ್ತಕ ಚೀಲದಲ್ಲಿ ಅಡಗಿ ಕುಳಿತಿರುತ್ತದೆಯೇ ವಿನಾ ಪ್ರಯೋಜನವಾಗುತ್ತಿಲ್ಲ ಎಂದರು.

    ಕೋಶ ಓದುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ನೋಡುವ ಸಂಸ್ಕೃತಿಗಿಂತ ಓದುವ ಸಂಸ್ಕೃತಿ ಬೆಳೆಸಬೇಕು. ಅಸಹಿಷ್ಣುತೆ ಹೆಚ್ಚುತ್ತಿರುವುದರಿಂದ ಮಕ್ಕಳು ಎಳೆಯ ಹಂತದಿಂದಲೇ ಮನುಷ್ಯರಾಗಿ ಬದುಕುವುದನ್ನು ಕಲಿಯುವ ಪ್ರಯತ್ನ ಆಗಬೇಕು ಎಂದು ನುಡಿದರು.

    ನೀಲಗಿರಿ ತೆರವಿಗೆ ಪರಿಹಾರ ನೀಡಿ: ಜಿಲ್ಲೆಯಲ್ಲಿ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದ್ದು, ಮುಂದಿನ 10 ವರ್ಷಗಳಲ್ಲಿ ನೀರಿರುವ ಸ್ಥಳಗಳಿಗೆ ಜನ ಗುಳೆ ಹೋಗಬೇಕಾದೀತು. ಅಂತರ್ಜಲ ಬತ್ತಲು ನೀಲಗಿರಿಯೂ ಕಾರಣವೆಂಬ ವಾದವಿದೆ. ನೀಲಗಿರಿ ತೆರವಿಗೆ ಸರ್ಕಾರ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಅರಣ್ಯ ಇಲಾಖೆ ಸುಪರ್ದಿಯಲ್ಲಿರುವ ಮರ ತೆರವು ಮಾಡಿ ಇತರ ಮರ ಬೆಳೆಸಲು ಆಸಕ್ತಿ ತೋರಬೇಕು ಎಂದು ಸಲಹೆ ನೀಡಿದರು.

    ಶಾಶ್ವತ ನೀರಾವರಿ ಮರೀಚಿಕೆ: ಜಿಲ್ಲೆಗೆ ಶಾಶ್ವತ ನೀರು ಕನಸಿನ ಮಾತಾಗಿದೆ. ಯರಗೋಳ್ ಯೋಜನೆ ಗೋಳಾಡುತ್ತಿದೆ. ಎತ್ತಿನಹೊಳೆ ಯೋಜನೆಯ ಕತ್ತು ಹಿಸುಕಲಾಗುತ್ತಿದೆ. ಕೆಸಿ ವ್ಯಾಲಿ ಯೋಜನೆಯಿಂದ ಸಂಸ್ಕರಿಸಿದ ನೀರು ಕೆರೆಗೆ ಹರಿಸುತ್ತಿರುವುದು ಆಶಾಕಿರಣವಾಗಿ ಗೋಚರಿಸಿದರೂ ಶಾಶ್ವತವೇ ಎಂಬ ಅನುಮಾನವಿದೆ. ಕಾರ್ಪೋರೇಟ್ ಕುಳಗಳ ಪ್ರವೇಶದಿಂದ ಭೂಮಿ ಬೆಲೆ ಏರುತ್ತಿದೆ. ರೈತ ಹಣದ ಆಸೆಗೆ ಬಲಿಯಾಗಿ ಜಮೀನು ಮಾರಿ ಜಮೀನಿನಲ್ಲಿ ಸ್ಥಾಪನೆಯಾದ ಕಂಪನಿಗಳಲ್ಲಿ ವಾಚ್‌ಮನ್ ಆಗಿ ಕೆಲಸ ಮಾಡುವ ಸ್ಥಿತಿಗೆ ಬರುತ್ತಿದ್ದು, ಇದರಿಂದ ಪಾರಾಗಲು ಶಾಶ್ವತ ನೀರಾವರಿ ಯೋಜನೆಯಿಂದಷ್ಟೇ ಸಾಧ್ಯ ಎಂದರು.

    ಕೇಂದ್ರ ಕಸಾಪ ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ, ಉಪವಿಭಾಗಾಧಿಕಾರಿ ಸೋಮಶೇಖರ್, ತಹಸೀಲ್ದಾರ್ ಆರ್.ಶೋಭಿತಾ, ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು, ಕಸಾಪ ಗೌರವ ಸಲಹೆಗಾರ ಎಸ್.ಮುನಿಯಪ್ಪ, ಗೌರವ ಕಾರ್ಯದರ್ಶಿ ಆರ್. ಅಶ್ವತ್ಥ್, ಆರ್.ಎಂ.ವೆಂಕಟಸ್ವಾಮಿ, ಗೌರವ ಕೋಶಾಧ್ಯಕ್ಷ ರತ್ನಪ್ಪ ಮೇಲಾಗಾಣಿ ಇತರ ಪದಾಧಿಕಾರಿಗಳು ಹಾಜರಿದ್ದರು.

    ತ್ರಿಪದಿ-ವಚನ: ಸಮ್ಮೇಳನಾಧ್ಯಕ್ಷರು ಭಾಷಣದಲ್ಲಿ ಮನುಷ್ಯನ ಬದುಕಿನ ಮಾರ್ಗ, ಜೀವನ ತತ್ವ, ನೆಲ ಮುಟ್ಟುವ ಪ್ರೀತಿಯ ಬಗ್ಗೆ ಬೆಳಕು ಚೆಲುತ್ತ ಜನಪದರು ಹಾಡಿರುವ ಗರತಿ ಹಾಡು ‘ಬೆಳಗಾಗ ನಾನೆದ್ದು ಯಾರ‌್ಯಾರ ನೆನೆಯಾಲಿ…’ ಹಾಗೂ ‘ಲಿಂಗವ ಪೂಜಿಸಿದ ಬಳಿಕ ಜಂಗಮಕ್ಕಂಜಲೇಬೇಕು…’ ಎಂಬ ಬಸವಣ್ಣನವರ ವಚನದೊಂದಿಗೆ ಸಾಗಿ ಆಧುನಿಕ ನಾಗರಿಕತೆಯಲ್ಲಿ ನೆಲಮುಟ್ಟುವ ಪ್ರೀತಿ ಇರುವುದಿಲ್ಲ, ಬೀಗಿ ಬೆಳೆಯುವ ಮತ್ತು ಬಾಗಿ ನಡೆಯುವ ವ್ಯಕ್ತಿತ್ವ ನಮ್ಮದಾಗಲಿ ಎಂದು ಆಶಿಸಿದರು.

    ಮಕ್ಕಳ ಸಾಹಿತ್ಯಕ್ಕೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸಿಗುತ್ತಿರುವ ಪ್ರೋತ್ಸಾಹ ನಮ್ಮ ದೇಶದಲ್ಲಿ ಸಿಗುತ್ತಿಲ್ಲ. ಇತಿಹಾಸಕಾರರು ಮಕ್ಕಳ ಸಾಹಿತ್ಯವನ್ನು ಕಂಡೂ ಕಾಣದಂತೆ ನಿರ್ಲಕ್ಷಿಸಿದ್ದಾರೆ. ಮಕ್ಕಳ ಸಾಹಿತ್ಯದ ವ್ಯವಸ್ಥಿತ ಮಾರಾಟ ಜಾಲದ ಮೂಲಕ ಕಡಿಮೆ ದರದಲ್ಲಿ ಗುಣಾತ್ಮಕ ಪುಸ್ತಕಗಳು ನಾಡಿನ ಎಲ್ಲ ಭಾಗಗಳಲ್ಲಿ ದೊರೆಯುವಂತಾಗಬೇಕು.
    ಡಾ.ಸಿ.ಎಂ.ಗೋವಿಂದರೆಡ್ಡಿ, ಸಮ್ಮೇಳನಾಧ್ಯಕ್ಷ

    ಧ್ವಜಾರೋಹಣ: ಜಿಲ್ಲಾಧಿಕಾರಿ ಜೆ.ಮಂಜುನಾಥ್ ಧ್ವಜಾರೋಹಣ ನೆರವೇರಿಸಿದರು. ಕಸಾಪ ಮಾಜಿ ಅಧ್ಯಕ್ಷ ಕೆ. ಪ್ರಹ್ಲಾದರಾವ್ ನಾಡಧ್ವಜ ಹಾಗೂ ಜಿಲ್ಲಾಧ್ಯಕ್ಷ ಡಾ.ನಾಗಾನಂದ ಕೆಂಪರಾಜ್ ಪರಿಷತ್ ಧ್ವಜಾರೋಹಣ ನೆರವೇರಿಸಿದರು. ಗೋಕುಲ್ ನಾರಾಯಣಸ್ವಾಮಿ, ನಗರಾಧ್ಯಕ್ಷ ಶಿವಕುಮಾರ್ ಇತರರು ಪಾಲ್ಗೊಂಡಿದ್ದರು.

    ಮೆರವಣಿಗೆ: ರಂಗಮಂದಿರ ಮುಂಭಾಗದಿಂದ ಸಮ್ಮೇಳನಾಧ್ಯಕ್ಷ ಡಾ. ಸಿ.ಎಂ.ಗೋವಿಂದರೆಡ್ಡಿ ಅವರ ಮೆರವಣಿಗೆಗೆ ಜಿಪಂ ಉಪಾಧ್ಯಕ್ಷೆ ಯಶೋದಾ ಕೃಷ್ಣಮೂರ್ತಿ ಚಾಲನೆ ನೀಡಿದರು. ಕಾಲೇಜು ವೃತ್ತ, ಎಂಜಿ ರಸ್ತೆ, ಗಾಂಧಿವನದ ಮೂಲಕ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿ ರಂಗಮಂದಿರ ತಲುಪಿತು. ಡೊಳ್ಳು ವಾದನ, ಡೊಳ್ಳು ಕುಣಿತ ಮೆರುಗು ನೀಡಿತು. ಸಾಹಿತ್ಯಾಭಿಮಾನಿಗಳೊಂದಿಗೆ ಸರ್ಕಾರಿ ಮಹಿಳಾ ಕಾಲೇಜು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಮೆರವಣಿಗೆ ಮಾರ್ಗಮಧ್ಯೆ ಉದ್ಯಾನದಲ್ಲಿನ ಸರ್ವಜ್ಞ ಪ್ರತಿಮೆ ಹಾಗೂ ಗಾಂಧಿವನದಲ್ಲಿ ಗಾಂಧಿಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.

    ಸಾಹಿತಿಗಳ ನಿಧನಕ್ಕೆ ಮೌನಾಚರಣೆ: ಸಮ್ಮೇಳನ ಆರಂಭದಲ್ಲೇ ಸಾಹಿತಿಗಳಾದ ಚಿದಾನಂದಮೂರ್ತಿ, ಎಲ್.ಎಸ್.ಶೇಷಗಿರಿರಾವ್, ಕವಿ ಕೆ.ಬಿ.ಸಿದ್ದಯ್ಯ ನಿಧನಕ್ಕೆ ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.

    ಪುಸ್ತಕ ಬಿಡುಗಡೆ: ಸಮ್ಮೇಳನಾಧ್ಯಕ್ಷ ಡಾ.ಸಿ.ಎಂ.ಗೋವಿಂದರೆಡ್ಡಿ ಅವರ ಆನಂದ, ಜನಪರ ಕವಿಯೋಗಿ ವೇಮನ, ಹಸ್ತಿನಾವತಿ, ಪರ್ವತಾರಣ್ಯ, ಕುರುಕ್ಷೇತ್ರ, ಮಹಾಪ್ರಸ್ಥಾನ, ಶೂದ್ರ ದೀವಿಗೆ, ಹುತ್ತಯ್ಯ ಹಾಗೂ ಸಾಹಿತಿ ಮಂಜುಕನ್ನಿಕಾ ಬರೆದಿರುವ ಮನೋಜ್‌ಕುಮಾರ್ ಐಎಎಸ್, ಬೆಟ್ಟದ ಹುಡುಗ, ಹಿಂದು ಸಮಾಜದಲ್ಲಿ ಗುರುವಿನ ಸ್ಥಾನ ಕುರಿತ ಪುಸ್ತಕಗಳು ಲೋಕಾರ್ಪಣೆಗೊಂಡವು.

    ಊಟದ ಮೆನು ಹೀಗಿತ್ತು: ಪ್ರತಿನಿಧಿಗಳು ಸಾಹಿತ್ಯಾಸಕ್ತರಿಗೆ ಬೆಳಗಿನ ಉಪಾಹಾರಕ್ಕೆ ದೋಸೆ, ಪೊಂಗಲ್, ಕಾಫಿ, ಮಧ್ಯಾಹ್ನ ಮುದ್ದೆ, ಹಿತಕಿನಬೇಳೆ ಸಾರು, ಒಬ್ಬಟ್ಟು, ಅನ್ನ, ರಸಂ, ಮಜ್ಜಿಗೆ, ಸಂಜೆ ಕಾಫಿಗೆ ಬಜ್ಜಿ, ರಾತ್ರಿ ಊಟಕ್ಕೆ ಪಲಾವ್, ಅನ್ನಸಾರು ವ್ಯವಸ್ಥೆ ಮಾಡಲಾಗಿತ್ತು. ಭಾರತ್ ಸ್ಕೌಟ್ಸ್-ಗೈಡ್ಸ್ ಮಕ್ಕಳು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದರು.

    ಪುಸ್ತಕ ಮಳಿಗೆ: 20ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳು ತೆರೆದಿದ್ದವು. ಕನ್ನಡ ಪುಸ್ತಕ ಪ್ರಾಧಿಕಾರದ ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ರಿಯಾಯಿತಿ ದರದಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತಾದರೂ ಕೊಳ್ಳುವವರ ಸಂಖ್ಯೆ ಕಡಿಮೆ ಇತ್ತು. 10, 20 ರೂ.ಗಳ ಪುಸ್ತಕ ಮಳಿಗೆಯಲ್ಲಿ ಜನಜಂಗಳಿ ಕಂಡುಬಂತು. ಪುಸ್ತಕೇತರ ಗೃಹಬಳಕೆ, ಇನ್ನಿತರ ಉತ್ಪನ್ನಗಳ ಮಳಿಗೆಗೆ ಉತ್ತಮ ಸ್ಪಂದನೆ ಕಂಡುಬಂತು.

    1 ಲಕ್ಷ ರೂ. ಹಸ್ತಾಂತರ: ಕೋಲಾರ ನಗರಸಭೆಯಿಂದ ಪೌರಾಯುಕ್ತ ಶ್ರೀಕಾಂತ್ ಅವರು ಸಮ್ಮೇಳನಕ್ಕಾಗಿ 1 ಲಕ್ಷ ರೂ.ಗಳ ಚೆಕ್ ಅನ್ನು ಕಸಾಪ ಜಿಲ್ಲಾಧ್ಯಕ್ಷರಿಗೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಹಸ್ತಾಂತರಿಸಿದರು. ಕೃಷಿ ಆಧರಿತ ಮೊದಲ ಗೋಷ್ಠಿಗೆ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಾದರೂ ವಿಷಯಕ್ಕೆ ಅನ್ವಯಿಸಿದಂತೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಕಂಡುಬರಲಿಲ್ಲ.

    ಕನ್ನಡ ಕಟ್ಟಾಳು: ಕನ್ನಡಪರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವ ಇಳಿ ವಯಸ್ಸಿನ ನಿವೃತ್ತ ಶಿಕ್ಷಕ ಸುಲೇಮಾನ್ ಖಾನ್ ಸಾಹಿತ್ಯ ಸಮ್ಮೇಳನದ ಮೆರವಣಿಗೆ, ಸಭಾ ಕಾರ್ಯಕ್ರಮದಲ್ಲಿ ಕೈಯಲ್ಲಿ ಕನ್ನಡಧ್ವಜ, ತಲೆಗೆ ಕೆಂಪು, ಹಳದಿ ಪೇಟ, ಕತ್ತು, ಸೊಂಟದಲ್ಲೂ ಕೆಂಪು, ಹಳದಿ ಶಾಲು, ಕಚ್ಚೆಧಾರಿಯಾಗಿ ಬಿಳಿ ಅಂಗಿ ತೊಟ್ಟು ಕನ್ನಡ ಕಟ್ಟಾಳುವಂತೆ ಪಾಲ್ಗೊಂಡಿದ್ದು ಗಮನಾರ್ಹವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts