ಅಕ್ಷರ ಜಾತ್ರೇಲಿ ಕುದಿಮೌನ

ಧಾರವಾಡ: 84ನೇ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭಕ್ಕೆ ಇನ್ನೊಂದೇ ದಿನ ಇದೆ. ಈ ಸಮಯದಲ್ಲಿ ಸರ್ಕಾರ ಆಂಗ್ಲ ಮಾಧ್ಯಮಕ್ಕೆ ಅಗ್ರ ತಾಂಬೂಲ ನೀಡಲು ಮುಂದಾಗಿರುವುದು ಅಕ್ಷರ ಜಾತ್ರೆಯಲ್ಲಿ ಕುದಿಮೌನ ಆರಂಭ ಆಗುವಂತೆ ಮಾಡಿದೆ. ಕನ್ನಡ ನಾಡು ನುಡಿಗಾಗಿ ಕೆಚ್ಚೆದೆಯ ಹೋರಾಟ ನಡೆಸಿದ ಗಂಡು ಮೆಟ್ಟಿನ ನೆಲದಲ್ಲಿ ಸಾಹಿತ್ಯ ಸಮ್ಮೇಳನದ ಮುನ್ನಾದಿನವೇ ಅಸಮಾಧಾನ, ಆಕ್ರೋಶ, ವಿವಾದದ ಮಾತುಗಳು ಕೇಳಿಬಂದಿವೆ.

ಉತ್ತರ ಕರ್ನಾಟಕ ನಿರ್ಲಕ್ಷ್ಯ ವಿರುದ್ಧ ಸಾಹಿತ್ಯ ಸಮ್ಮೇಳನದಲ್ಲಿ ಧ್ವನಿ ಮೊಳಗಬೇಕು ಎನ್ನುವ ಒತ್ತಾಸೆ ಜೋರಾಗಿ ಎದ್ದಿರುವ ವೇಳೆಯೇ ಆಂಗ್ಲ ಮಾಧ್ಯಮ ಶಾಲೆ ಕುರಿತು ಸರ್ಕಾರದ ನಡೆ ಉರಿವ ದೀಪಕ್ಕೆ ಎಣ್ಣೆ ಸುರಿದಂತಾಗಿದೆ. ಸಮ್ಮೇಳನದ ಸಿದ್ಧತೆಗೆ ಅಂತಿಮ ಹಂತದ ಸ್ಪರ್ಶ ನೀಡಲು ಸಂಘಟಕರು-ಅಧಿಕಾರಿಗಳು ಓಡಾಡುತ್ತಿರುವ ವೇಳೆಯೇ ಗಣ್ಯರು, ಕನ್ನಡದ ಕಟ್ಟಾಳುಗಳು ಈ ಭಾಗದ ಧ್ವನಿ ಮೊಳಗಬೇಕು ಎನ್ನುವುದರ ಜತೆಗೆ ಸರ್ಕಾರದ ನಿರ್ಧಾರ ಖಂಡನೀಯ ಎಂದು ವೇದಿಕೆಯ ಬಳಿಗೆ ಬಂದು ಏರುಧ್ವನಿಯಲ್ಲಿ ಒತ್ತಡ ಹೇರುತ್ತಿರುವುದು ಕಂಡು ಬಂತು.

6 ದಶಕಗಳ ನಂತರ ನಗರದಲ್ಲಿ ನಡೆಯುತ್ತಿರುವ ನುಡಿ ಜಾತ್ರೆಗೆ ವಿದ್ಯಾನಗರಿ ಸಜ್ಜಾಗಿರುವ ವೇಳೆ ಸಮ್ಮೇಳನದಲ್ಲಿ ಕನ್ನಡ ಭಾಷೆ, ಕನ್ನಡ ನಾಡಿನ ಅಭಿವೃದ್ಧಿ, ಕನ್ನಡ ಜಾಗೃತಿ, ಅಳಿವು-ಉಳಿವಿನ ಬಗ್ಗೆ ಚರ್ಚೆ ಆದೀತೇ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಗೋಷ್ಠಿಗಳಲ್ಲಿ ಉತ್ತರ ಕರ್ನಾಟಕ ಭಾಗದ ಸಾಹಿತಿಗಳನ್ನು ನಿರ್ಲಕ್ಷಿಸಿರುವುದು ಈ ಭಾಗದ ಸಾಹಿತ್ಯ ಪ್ರೇಮಿ-ಕಲಾವಿದರಲ್ಲಿ ಅಸಮಾಧಾನ ಹೆಚ್ಚಿಸಿದೆ.

ಉ.ಕ. ಧ್ವನಿ ಮೊಳಗಲಿ: ಸಮ್ಮೇಳನದಲ್ಲಿ ‘ಉತ್ತರ ಕರ್ನಾಟಕ: ಅಭಿವೃದ್ಧಿ ಸವಾಲುಗಳು’ ಎಂಬ ಗೋಷ್ಠಿ ಇದೆ. ಇದು ಈ ಭಾಗದ ಸಮಸ್ಯೆಗಳಿಗೆ ಕೈಗನ್ನಡಿಯಾಗಿ, ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವಲ್ಲಿ ಯಶಸ್ವಿ ಆಗಬೇಕಿದೆ. ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಲಾಗಿದೆ ಎಂದು ಆಗಾಗ ಪ್ರತ್ಯೇಕ ಉತ್ತರ ಕರ್ನಾಟಕಕ್ಕೆ ಬೇಡಿಕೆ ಕೇಳುತ್ತಲೇ ಇರುತ್ತದೆ. ಈ ಸಮ್ಮೇಳನಕ್ಕೆ ಉತ್ತರ ಕರ್ನಾಟಕದವರೇ ಆದ ಕಂಬಾರರು ಅಧ್ಯಕ್ಷರಾಗಿದ್ದಾರೆ. ಹೀಗಾಗಿ ಈ ಭಾಗದ ಜನರು ಇಲ್ಲಿನ ಸಾಮಾಜಿಕ, ಶೈಕ್ಷಣಿಕ, ನೀರು-ನೆಲ ಅಭಿವೃದ್ಧಿ ಕುರಿತು ಚರ್ಚೆ ನಡೆದು ಪರಿಹಾರ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಇದಕ್ಕೆ ಸಂಘಟಕರು ಎಷ್ಟರ ಮಟ್ಟಿಗೆ ಅವಕಾಶ ಒದಗಿಸಲಿದ್ದಾರೆ ಎಂಬ ಚರ್ಚೆ ಸಾಹಿತ್ಯಕ ವಲಯದಲ್ಲಿ ಕೇಳಿ ಬರುತ್ತಿದೆ.

ಜನರ ಆಶಯ

ಸಾಹಿತ್ಯ ಜಾತ್ರೆ ಅತ್ಯಂತ ಯಶಸ್ವಿಯಾಗಬೇಕು ಎಂಬುದೇ ಇಲ್ಲಿನ ಜನರ ಆಶಯ. ಸಮ್ಮೇಳನದಲ್ಲಿ ನಡೆಯುವ ಚರ್ಚೆ, ಗೋಷ್ಠಿಗಳ ಮೇಲೆಯೇ ಪ್ರಜ್ಞಾವಂತರ ಗಮನ ನೆಟ್ಟಿದೆ. ಸಮ್ಮೇಳನದಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ಕನ್ನಡ ಭಾಷೆಯ ಅಭಿವೃದ್ಧಿ, ಕನ್ನಡ ಶಾಲೆಗಳ ಉಳಿವಿನ ಪರವಾಗಿರಬೇಕು. ಪದೇಪದೆ ಕೇಳಿಬರುವ ಪ್ರತ್ಯೇಕ ಉತ್ತರ ಕರ್ನಾಟಕದ ಧ್ವನಿಯನ್ನು ಶಮನಗೊಳಿಸುವಂತಿರಬೇಕು ಎಂಬುದು ಈ ಭಾಗದ ಜನರ ಒತ್ತಾಸೆಯಾಗಿದೆ. ಶುಕ್ರವಾರ ಬೆಳಗಾದರೆ ನುಡಿಜಾತ್ರೆಯ ತೇರು ಹೊರಡಲಿದೆ. ಈ ಹೊತ್ತಿನಲ್ಲಿ ಹಲವು ಅಸಮಾಧಾನ ಹೊಗೆಯಾಡುತ್ತಿರುವುದು ಇಲ್ಲಿನ ಸಾಹಿತ್ಯಾಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಇದೆಲ್ಲ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಸಮ್ಮೇಳನವನ್ನು ಯಶಸ್ವಿಗೊಳಿಸಬೇಕಾದ ಜವಾಬ್ದಾರಿ ಸಂಘಟಕರದ್ದಾಗಿದೆ.

ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭ ಕುರಿತು ಸಾಹಿತ್ಯ ಸಮ್ಮೇಳನದಲ್ಲಿನ ಸಂಪನ್ಮೂಲ ವ್ಯಕ್ತಿಗಳು, ವಿಷಯ ತಜ್ಞರು ಬೆಳಕು ಚೆಲ್ಲಲಿ. ಉತ್ತರ ಕರ್ನಾಟಕದ ಅಭಿವೃದ್ಧಿಯ ಸವಾಲುಗಳು, ನಂಜುಂಡಪ್ಪ ವರದಿ ಅನುಷ್ಠಾನ, ಉತ್ತರ ಕರ್ನಾಟಕ ಭಾಗದ ಜನ ಗುಳೆ ಹೋಗುವುದು ಈ ಎಲ್ಲ ವಿಷಯಗಳ ಕುರಿತು ಸಮ್ಮೇಳನದಲ್ಲಿ ಮಂಡಿಸುವ ನಿರ್ಣಯಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕು.

| ಡಾ. ಲಿಂಗರಾಜ ಅಂಗಡಿ, ಕಸಾಪ ಅಧ್ಯಕ್ಷರು, ಧಾರವಾಡ