More

  ವೇದಿಕೆ ನಿರ್ಮಾಣ ಸ್ಥಳಕ್ಕೆ 16ರಂದು ಗುದ್ದಲಿ ಪೂಜೆ

  ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದ ಆವರಣದಲ್ಲಿ ಫೆಬ್ರವರಿ 5, 6 ಮತ್ತು 7 ರಂದು ಜರುಗಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆ ನಿರ್ಮಾಣ ಕಾರ್ಯಕ್ಕೆ 16 ರಂದು ಬೆಳಗ್ಗೆ 11.30ಕ್ಕೆ ವಿಶ್ವವಿದ್ಯಾಲಯ ಆವರಣದಲ್ಲಿ ಗುದ್ದಲಿ ಪೂಜೆ ನೆರವೇರಿಸಲಾಗುವುದು ಎಂದು ಶಾಸಕರೂ ಆದ ಸಮ್ಮೇಳನದ ವೇದಿಕೆ ಸಮಿತಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್​ ರೇವೂರ ಹೇಳಿದರು.
  ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ವೇದಿಕೆ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು.
  ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆಯಲ್ಲಿ ಜರುಗುವ ಉದ್ಘಾಟನಾ ದಿನದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸೇರಿ ಪ್ರಮುಖ ಗಣ್ಯರು ಆಗಮಿಸುವುದರಿಂದ ಯಾವುದೇ ಲೋಪವಾಗದಂತೆ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಬೇಕು. ಗಣ್ಯರಿಗೆ ಸತ್ಕರಿಸಲು ಹಳದಿ ಮತ್ತು ಕೆಂಪು ಬಣ್ಣದ ಕನ್ನಡ ಧ್ವಜದ ಶಾಲು ಮತ್ತು ಮೂರು ವಿವಿಧ ಮಾದರಿಯ ಸ್ಮರಣ ಸಂಚಿಕೆ ಸಿದ್ದಪಡಿಸಬೇಕು ಎಂದು ಸೂಚಿಸಿದರು.
  ಕನ್ನಡ ಕಂಪನ್ನು ಹೆಚ್ಚಿಸುವ ರಾಷ್ಟ್ರೀಯ ಹಬ್ಬ ಇದಾಗಿದ್ದು, ಇಲ್ಲಿ ಕವಿಗೋಷ್ಠಿ, ಸಂಗೀತ, ನೃತ್ಯ ಸೇರಿ ಎಲ್ಲ ಕಾರ್ಯಕ್ರಮಗಳಿಗೆ ತಕ್ಕಂತೆ ಅತ್ಯಾಧುನಿಕ ಗುಣಮಟ್ಟದ ಧ್ವನಿವರ್ಧಕ ಮತ್ತು ಬೆಳಕಿನ ವ್ಯವಸ್ಥೆ ಮಾಡಬೇಕು. ಮುಖ್ಯ ವೇದಿಕೆಯ ಹಿನ್ನೆಲೆಯ ಪರದೆ ಜಿಲ್ಲೆಯನ್ನು ಮುಖ್ಯವಾಗಿ ಗುರುತಿಸುವಂತಾಗಬೇಕು. ಐತಿಹಾಸಿಕ ಸ್ಥಳಗಳು ಇಲ್ಲಿ ಒಳಗೊಳ್ಳಬೇಕು. ಈ ನಿಟ್ಟಿನಲ್ಲಿ ಬ್ಯಾಕ್ಡ್ರಾಪ್ ವಿನ್ಯಾಸದ ಕುರಿತು ಡಾ.ಗೀತಾ ನಾಗಭೂಷಣ ಸೇರಿ ಜಿಲ್ಲೆಯ ಎಲ್ಲ ಸಾಹಿತಿಗಳ ಅಭಿಪ್ರಾಯ ಪಡೆದು ಅತ್ಯುತ್ತಮ ವೇದಿಕೆ ಹಿನ್ನೆಲೆಯ ಪರದೆ ಸಿದ್ದಪಡಿಸಬೇಕು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿಗೆ ಸೂಚಿಸಿದರು.
  ಕಲಬುರಗಿ ನಗರ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ ಮಾತನಾಡಿ, ಮುಖ್ಯ ವೇದಿಕೆ, ಎರಡು ಸಮನಾಂತರ ವೇದಿಕೆ, ಸಾರ್ವಜನಿಕರ ಊಟದ ಸ್ಥಳ ಹೀಗೆ ಸಮ್ಮೇಳನದ ಸಂಪೂರ್ಣ ಆವರಣ ಸಿ.ಸಿ ಕ್ಯಾಮರಾಗಳ ಕಣ್ಗಾವಲಿನಲ್ಲಿ ಇರಲಿದೆ. ಇದಲ್ಲದೆ ಡ್ರೋನ್ ಕ್ಯಾಮೆರಾ ಬಳಸಲಾಗುತ್ತದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತದೆ ಎಂದರು.
  ಜಿಲ್ಲಾಧಿಕಾರಿ ಶರತ್ ಬಿ. ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಸಮ್ಮೇಳನಕ್ಕೆ ಆಹ್ವಾನಿಸಬೇಕು. ಸ್ಥಳೀಯ ಕಲೆ ಮತ್ತು ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇದಾಗಿರುವುದರಿಂದ ಕವಿಗೋಷ್ಠಿ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಲ್ಲಿ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಯ ಕಲಾವಿದರಿಗೆ ಸೂಕ್ತ ಪ್ರಾತಿನಿಧ್ಯ ಲಭಿಸಬೇಕು. ಲಕ್ಷಾಂತರ ಜನಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು ಇಲ್ಲಿ ಸೇರುವುದರಿಂದ ಸ್ವಚ್ಛತೆಗೆ ಆದ್ಯತೆ ನೀಡಬೇಕಾಗಿದ್ದು, ಪುರುಷ-ಮಹಿಳೆಯರಿಗೆ ಪ್ರತ್ಯೇಕ ಶೌಚಗೃಹ ನಿರ್ಮಿಸಬೇಕಾಗಿದೆ ಎಂದರು.
  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ಮಾತನಾಡಿ, ಸಮ್ಮೇಳನದಲ್ಲಿ ಜರುಗುವ ಕವಿಗೋಷ್ಠಿಗಳ ಮಧ್ಯೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದರು.
  ಶ್ರೀ ವಿಜಯ ಮುಖ್ಯ ವೇದಿಕೆ: ಸಾಹಿತ್ಯ ಸಮ್ಮೇಳನದ ಸಂಪೂರ್ಣ ಮುಖ್ಯ ವೇದಿಕೆಯ ಆವರಣಕ್ಕೆ ಅನುಭವ ಮಂಟಪ, ಮುಖ್ಯ ವೇದಿಕೆಗೆ ಶ್ರೀವಿಜಯ, ಸಮನಾಂತರ ವೇದಿಕೆಗಳಿಗೆ ಪೂಜ್ಯ ದೊಡ್ಡಪ್ಪ ಅಪ್ಪ ಮತ್ತು ಬಿ.ಶ್ಯಾಮಸುಂದರ ಅವರ ಹೆಸರಿಡಲು ಸಭೆಯಲ್ಲಿ ಚರ್ಚಿಸಲಾಯಿತು.
  ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತ ಅಮೀನ್ ಮುಖ್ತಾರ ಅಹ್ಮದ್, ಪ್ರಚಾರ ಸಮಿತಿ ಕಾರ್ಯಾಧ್ಯಕ್ಷರೂ ಆದ ವಾರ್ತಾ  ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಸಿದ್ದೇಶ್ವರಪ್ಪ ಜಿ.ಬಿ., ಮಹಾನಗರ ಪಾಲಿಕೆಯ ಕಾರ್ಯನಿರ್ವಾಹಕ ಅಭಿಯಂತ ಆರ್.ಪಿ.ಜಾಧವ , ಎಂ.ಸಿ.ಎ. ಪ್ರತಿನಿಧಿ ಜಗದೀಶ ಮೇಟಿ ಸೇರಿದಂತೆ ವೇದಿಕೆ ಸಮಿತಿಯ ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು. 

  ನೆನಪಿನ ಕಾಣಿಕೆಯಲ್ಲಿ ಸಮ್ಮೇಳನ ಲಾಂಛನ ಕಡ್ಡಾಯವಾಗಿ ಬಳಸಬೇಕು. ಸಮನಾಂತರ ವೇದಿಕೆಯಲ್ಲಿಯೂ ಕಾರ್ಯಕ್ರಮ ಸುಲಲಿತವಾಗಿ ನಡೆಯಲು ಉಪ ಸಮಿತಿ ರಚಿಸಬೇಕು. ಯಾವುದೇ ಕಾರಣಕ್ಕೂ ಸಮ್ಮೇಳನದಲ್ಲಿ ಪ್ಲಾಸ್ಟಿಕ್ ಬಳಕೆಗೆ ಅವಕಾಶ ನೀಡಬಾರದು.
  ದತ್ತಾತ್ರೇಯ ಪಾಟೀಲ್ ರೇವೂರ್,
  ಅಧ್ಯಕ್ಷರು, ಸಮ್ಮೇಳನ ವೇದಿಕೆ ಸಮಿತಿ, ಕಲಬುರಗಿ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts