ಬೆಂಗಳೂರು: ‘ತತ್ಸಮ-ತದ್ಭವ’ ಚಿತ್ರದ ಬಳಿಕ ಪ್ರಜ್ವಲ್ ದೇವರಾಜ್ ‘ರಾಕ್ಷಸ’ನಾಗಿ ತೆರೆಗೆ ಬರಲು ಸಿದ್ಧತೆ ನಡೆಸಿದ್ದಾರೆ. ಇದೊಂದು ಹಾರರ್ ಚಿತ್ರವಾಗಿದ್ದು ಮೊದಲ ಬಾರಿಗೆ ಪ್ರಜ್ವಲ್ ಈ ಜಾನರ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಮಮ್ಮಿ’, ‘ದೇವಕಿ’ ಖ್ಯಾತಿಯ ಲೋಹಿತ್ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದು, ಚಿತ್ರೀಕರಣ ಪೂರ್ಣಗೊಳಿಸಿದೆ. ಈ ನಡುವೆ, ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಮೊದಲ ಬಾರಿಗೆ ಕನ್ನಡ ಚಿತ್ರವೊಂದರಲ್ಲಿ ಟೈಮ್ ಲೂಪ್ ಕಾನ್ಸೆಪ್ಟ್ ಅಳವಡಿಸಲಾಗಿದೆ.
ನಟಿ ಪ್ರಿಯಾಂಕಾ ಉಪೇಂದ್ರ ಟ್ರೇಲರ್ ಬಿಡುಗಡೆ ಮಾಡಿ,‘‘ರಾಕ್ಷಸ’ನಾಗಿ ಪ್ರಜ್ವಲ್ ದೇವರಾಜ್ ತುಂಬಾ ಚೆನ್ನಾಗಿ ಕಾಣಿಸುತ್ತಿದ್ದಾರೆ. ಲೋಹಿತ್ ವಿಭಿನ್ನ ಪ್ರಯತ್ನ ಮಾಡಿದ್ದಾರೆ. ತಂಡಕ್ಕೆ ಒಳ್ಳೆಯದಾಗಲಿ’ ಎಂದು ಶುಭಹಾರೈಸಿದರು. ನಟ ಪೃಥ್ವಿ ಅಂಬಾರ್, ಸಂಭಾಷಣೆಕಾರ ಮಾಸ್ತಿ ಉಪ್ಪಾರಹಳ್ಳಿ, ನಟ ಶಿವರಾಜ್ ಕೆಆರ್. ಪೇಟೆ ಚಿತ್ರತಂಡಕ್ಕೆ ಶುಭ ಕೋರಿದರು. ಪ್ರಜ್ವಲ್ ದೇವರಾಜ್, ‘ನನಗೆ ಹಾರರ್ ಸಿನಿಮಾ ಎಂದರೆ ತುಂಬಾ ಭಯ. ಹೆಂಡತಿ ಸೆರಗಿನ ಹಿಂದೆ ಬಚ್ಚಿಟ್ಟುಕೊಂಡು ಹಾರರ್ ಸಿನಿಮಾ ನೋಡುತ್ತೇನೆ. ಆದರೆ ಈಗ ನಾನೇ ಹಾರರ್ ಸಿನಿಮಾದಲ್ಲೇ ನಟಿಸಿದ್ದೇನೆ. ಇದಕ್ಕೆ ಕಾರಣ ಲೋಹಿತ್. ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ’ ಎಂದು ಹೇಳಿಕೊಂಡರು. ಪ್ರಜ್ವಲ್ ಜತೆ ಅರುಣ್ ರಾಥೋಡ್, ಶ್ರೀಧರ್, ಗೌತಮ್, ಸೋಮಶೇಖರ್, ವಿಹಾನ್ ಕೃಷ್ಣ, ಜಯಂತ್ ಅಭಿನಯಿಸಿದ್ದಾರೆ. 55 ದಿನಗಳ ಕಾಲ ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಕನ್ನಡ ಸೇರಿ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಚಿತ್ರ ಸಿದ್ಧವಾಗುತ್ತಿದೆ