ನಾಡಿಗೆ ಹಿರಿಮೆ ತಂದ 63 ಸಾಧಕರಿಗೆ ರಾಜ್ಯೋತ್ಸವ ಗರಿಮೆ

ಬೆಂಗಳೂರು: ಸುಪ್ರೀಂಕೋರ್ಟ್​ನ ನಿವೃತ್ತ ಮುಖ್ಯ ನ್ಯಾಯಮೂರ್ತಿ, ಕನ್ನಡಿಗ ನ್ಯಾ. ಎಚ್.ಎಲ್.ದತ್ತು, ಕನ್ನಡದ ಹಿರಿಯ ಚಿತ್ರ ನಿರ್ದೇಶಕ ಭಾರ್ಗವ, ಕೆಎಲ್​ಇ ಸಂಸ್ಥೆಯ ಅಧ್ಯಕ್ಷ ಶಿವಾನಂದ ಕೌಜಲಗಿ, ಹಿರಿಯ ರಾಜಕಾರಣಿ ಮಾರ್ಗರೆಟ್ ಆಳ್ವ. ಸ್ವಂತ ಹಣದಲ್ಲಿ ಕೆರೆಗಳನ್ನು ಕಟ್ಟಿ ಪರಿಸರ ಕಾಳಜಿ ಮೆರೆದಿದ್ದ ಮಂಡ್ಯದ ಕಲ್ಮನೆ ಕಾಮೇಗೌಡ ಸೇರಿದಂತೆ ರಾಜ್ಯದ 63 ಸಾಧಕರಿಗೆ 2018ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಉಪ ಚುನಾವಣೆ ಕಾರಣಕ್ಕಾಗಿ ಈ ಬಾರಿ ಕನ್ನಡ ರಾಜ್ಯೋತ್ಸವಕ್ಕೂ ಮೊದಲು ಆಯ್ಕೆ ಪಟ್ಟಿ ಬಿಡುಗಡೆ ಆಗಿರಲಿಲ್ಲ. ಗುರುವಾರ (ಇಂದು) ಸಂಜೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ತುಂಬ ವರ್ಷಗಳಿಂದ ರಾಜ್ಯೋತ್ಸವ ಪ್ರಶಸ್ತಿ ಬರಬಹುದು ಎಂದು ಕಾದಿದ್ದೆ. ಈ ಬಾರಿ ನನ್ನ ಹೆಸರು ಆಯ್ಕೆ ಆಗಿದ್ದಕ್ಕೆ ಖುಷಿ ಆಗಿದೆ. ರಾಜ್ಯ ಸರ್ಕಾರಕ್ಕೆ ಮತ್ತು ಆಯ್ಕೆ ಸಮಿತಿಗೆ ನನ್ನ ಧನ್ಯವಾದಗಳು.

| ಭಾರ್ಗವ ಹಿರಿಯ ನಿರ್ದೇಶಕ


ಮಾರ್ಗರೆಟ್, ಭಾರ್ಗವ ಸೇರಿ 63 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

ಬೆಂಗಳೂರು: ಕನ್ನಡ ಚಲನಚಿತ್ರರಂಗದ ಹಿರಿಯ ಸಂಗೀತ ನಿರ್ದೇಶಕ ರಾಜನ್, ನಿರ್ದೇಶಕ ಭಾರ್ಗವ, ಚಿತ್ರ ನಟ ಜೈಜಗದೀಶ್, ಮಾಜಿ ರಾಜ್ಯಪಾಲರಾದ ಮಾರ್ಗರೆಟ್ ಆಳ್ವ, ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಚ್.ಎಲ್. ದತ್ತು, ಹಿರಿಯ ಪತ್ರಕರ್ತ ಜಿ.ಎನ್. ರಂಗನಾಥ ರಾವ್, ಕವಯತ್ರಿ ಚ. ಸರ್ವಮಂಗಳಾ, ಸ್ವಂತ ಪರಿಶ್ರಮದಿಂದ ನಾಲ್ಕು ಕೆರೆಗಳನ್ನು ನಿರ್ವಿುಸಿದ ಕಲ್ಮನೆ ಕಾಮೇಗೌಡ ಸೇರಿ 24 ವಿಭಾಗಗಳಲ್ಲಿ 63 ಸಾಧಕರನ್ನು 2018ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಸಾಮಾನ್ಯವಾಗಿ ನ.1ಕ್ಕೆ ನಡೆಯುವ ರಾಜ್ಯೋತ್ಸವ ಪ್ರಶಸ್ತಿ ಕಾರ್ಯಕ್ರಮವನ್ನು ಉಪ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮುಂದೂಡಿದ್ದ ರಾಜ್ಯ ಸರ್ಕಾರ ಬುಧವಾರ ಸಂಜೆ ಪಟ್ಟಿ ಪ್ರಕಟಿಸಿದ್ದು, ಗುರುವಾರ ಸಂಜೆ 6.30ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಒಂದು ಲಕ್ಷ ರೂ. ನಗದು, 20 ಗ್ರಾಂ ಚಿನ್ನದ ಪದಕವನ್ನು ಈ ಪ್ರಶಸ್ತಿ ಒಳಗೊಂಡಿದೆ.

ಕರ್ನಾಟಕ ಏಕೀಕರಣವಾಗಿರುವಷ್ಟೇ ವರ್ಷದಷ್ಟು ಪ್ರಶಸ್ತಿ ನೀಡುವ ನಿಯಮದಂತೆ ಈ ಬಾರಿ 63 ಗಣ್ಯರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಗೆ ಆಯ್ಕೆಯಾದವರ ಜತೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿರುವ ಲಘು ಉಪಾಹಾರ ಕಾರ್ಯಕ್ರಮದಲ್ಲಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಭಾಗಿಯಾಗಲಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ಪ್ರಮುಖವಾಗಿ ಬೆಳಗಾವಿಯ ಕೆಎಲ್​ಇ ಸಂಸ್ಥೆ ಅಧ್ಯಕ್ಷ ಶಿವಾನಂದ ಕೌಜಲಗಿ, ಮೈಸೂರಿನ ಗೀತಾ ರಾಮಾನುಜಂ, ಸಂಕೀರ್ಣ ಕ್ಷೇತ್ರದಲ್ಲಿ ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್, ಕ್ರೀಡಾ ವಿಭಾಗದಲ್ಲಿ ಸ್ಪ್ರಿಟರ್ ಕೆನೆತ್ ಪೊವೆಲ್, ಕುಬ್ಜರ ಬ್ಯಾಡ್ಮಿಂಟನ್ ಆಟಗಾರ ಆರ್. ಚೇತನ್, ಸಂಘ-ಸಂಸ್ಥೆ ವಿಭಾಗದಲ್ಲಿ ಬೆಂಗಳೂರಿನ ರಂಗದೊರೆ ಸ್ಮಾರಕ ಆಸ್ಪತ್ರೆಯನ್ನು ಸಿಎಂ ನೇತೃತ್ವದ ಉನ್ನತಾಧಿಕಾರ ಸಮಿತಿ ಆಯ್ಕೆ ಮಾಡಿದೆ.

ಸಾಗರದ ಡೊಳ್ಳು ಕುಣಿತ ಕಲಾವಿದೆ ಚೂಡಾಮಣಿ ರಾಮಚಂದ್ರ, ಸಾಹಿತಿ ಕಾಮರೂಪಿ, ನವಕರ್ನಾಟಕ ಪ್ರಕಾಶನ ಸಂಸ್ಥೆಯ ರಾಜಾರಾಂ, ಹಿರಿಯ ಪತ್ರಕರ್ತರಾದ ಜಿ.ಎನ್. ರಂಗನಾಥರಾವ್, ರಾಯಚೂರಿನ ಬಸವರಾಜಸ್ವಾಮಿ ಆಯ್ಕೆಯಾಗಿರುವ ಪ್ರಮುಖರಾಗಿದ್ದಾರೆ.

ನಿವೃತ್ತಿ ವಯಸ್ಸಿನಲ್ಲಿ ರಾಜ್ಯೋತ್ಸವ ಪ್ರಶಸ್ತಿ ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಪ್ರಶಸ್ತಿಗಾಗಿ ನಾನು ಯಾವುದೇ ಪ್ರಭಾವ ಬಳಸಿಲ್ಲ. ಇಷ್ಟಾಗಿಯೂ ಪ್ರಶಸ್ತಿ ಬಂದಿರುವುದು ಅತೀವ ಸಂತೋಷ ಉಂಟುಮಾಡಿದೆ. ಪ್ರಕಾಶಕರ ಸಾಧನೆ ಪರಿಗಣಿಸಿ, ಪ್ರಶಸ್ತಿ ನೀಡಿರುವುದು ಇದೇ ಮೊದಲು ಅನಿಸುತ್ತದೆ.

| ಆರ್.ಎಸ್. ರಾಜಾರಾಂ, ಪ್ರಕಾಶಕ, ನವಕರ್ನಾಟಕ

ವೈದ್ಯಕೀಯ ಕ್ಷೇತ್ರದಲ್ಲಿ ನಮ್ಮ 38 ವರ್ಷ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ನೀಡುತ್ತಿರುವ ರಾಜ್ಯೋತ್ಸವ ಪ್ರಶಸ್ತಿ ತುಂಬಾ ಖುಷಿ ತಂದಿದೆ. ಸರ್ಕಾರಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಎಚ್​ಐವಿ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ಕೈಗೊಂಡಿರುವ ಹಲವು ಜಾಗೃತಿ ಕಾರ್ಯಕ್ರಮಗಳು ಬಹಳ ಯಶಸ್ವಿಯಾಗಿವೆ.

| ಡಾ.ಎಂ.ಜಿ.ಗೋಪಾಲ್ ಕಿಮ್್ಸ ಆಸ್ಪತ್ರೆ ವೈದ್ಯ

19 ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದೆ. 1965ರಲ್ಲೇ ಅರ್ಜುನ ಪ್ರಶಸ್ತಿ ಸಿಕ್ಕಿತ್ತು. ರಾಜ್ಯ ಸರ್ಕಾರ ನನ್ನ ಸಾಧನೆ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿರುವುದಕ್ಕೆ ಸಂತೋಷ ಆಗುತ್ತಿದೆ. ಹಲವು ವರ್ಷಗಳ ಹಿಂದೆಯೇ ಈ ಪ್ರಶಸ್ತಿ ನಿರೀಕ್ಷಿಸಿದ್ದೆ.

| ಕೆನೆತ್ ಪೊವೆಲ್ ಅಥ್ಲೆಟ್

ದುಃಖದ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದೆ. ತಿಂಗಳ ಬಳಿಕ ಘೋಷಿಸಿದ್ದರೆ ಚೆನ್ನಾಗಿತ್ತು. ಇರಲಿ, ಈಗಾಗಲೇ ಹಲವು ಪ್ರಶಸ್ತಿಗಳು ಸಿಕ್ಕಿವೆ. ಅದಕ್ಕೆ ರಾಜ್ಯೋತ್ಸವ ಅವಾರ್ಡ್ ಸೇರಿದೆ. ಬಹುಶಃ ನಿವೃತ್ತಿ ಆಗಿ ಎಂದು ನೀಡಿರಬೇಕು.

| ಜೈ ಜಗದೀಶ್ ನಟ

ಬೆಂಗಳೂರು ಪಾರಮ್ಯ

ಈ ಬಾರಿಯ ಪ್ರಶಸ್ತಿ ಆಯ್ಕೆಯಲ್ಲೂ ಬೆಂಗಳೂರು ಪಾರಮ್ಯ ಮುಂದುವರಿದಿದೆ. 63ರ ಪೈಕಿ ಬೆಂಗಳೂರಿನ 13 ಸಾಧಕರು, 1 ಸಂಸ್ಥೆ ಸೇರಿ 14 ಹೆಸರುಗಳಿವೆ. ಪ್ರಶಸ್ತಿ ನೀಡಿಕೆ ಮಾನದಂಡದಲ್ಲಿರುವಂತೆ ಎಲ್ಲ ಜಿಲ್ಲೆಗೂ ಕನಿಷ್ಠ ಒಂದು ಪ್ರಶಸ್ತಿ ನೀಡಲಾಗಿದೆ. ಉಳಿದಂತೆ ದಕ್ಷಿಣ ಕನ್ನಡ 6, ಕಲಬುರಗಿ 5, ಮೈಸೂರು 4 ಪ್ರಶಸ್ತಿ ಪಡೆದಿದ್ದರೆ ಬೆಳಗಾವಿ, ಕೋಲಾರ, ಉಡುಪಿ ತಲಾ 3, ಉತ್ತರಕನ್ನಡ, ರಾಮನಗರ ತಲಾ 2 ಮತ್ತು ಉಳಿದ ಜಿಲ್ಲೆಗಳಿಗೆ ತಲಾ 1 ಪ್ರಶಸ್ತಿ ಲಭಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೆಸರು ನಮೂದಾಗದಿದ್ದರೂ, ಬೆಂಗಳೂರು ಜಿಲ್ಲೆ ಪಟ್ಟಿಯಲ್ಲೇ ಸೇರಿರುವ ಸಾಧ್ಯತೆ ಇದೆ. ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರ ಆಯ್ಕೆ ವಿಚಾರದಲ್ಲಿ ಅಕಾಡೆಮಿಗಳ ಅಭಿಪ್ರಾಯ ಕಡೆಗಣಿಸಲಾಗಿದೆ ಎಂದು ಕೆಲ ಅಕಾಡೆಮಿಗಳ ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆರೆ ಕಟ್ಟಿದ್ದ ಕಾಮೇಗೌಡ

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸನದೊಡ್ಡಿಯ ಕಲ್ಮನೆ ಕಾಮೇಗೌಡ ಅವರದ್ದು ಕೆರೆ ಕಟ್ಟುವ ಕಾಯಕ. 25ನೇ ಹರೆಯದಿಂದ ಈ ಕಾಯಕದಲ್ಲಿ ತೊಡಗಿಸಿಕೊಂಡು ಸ್ವಂತ ಹಣದಿಂದಲೇ 5 ಕೆರೆ ನಿರ್ವಿುಸಿದ್ದ ಇವರಿಗೆ ಈಗ 85 ವರ್ಷ. 5 ಕೆರೆ ನಿರ್ವಿುಸಿದ್ದಕ್ಕೆ ಸಂದ ವಿವಿಧ ಪ್ರಶಸ್ತಿಗಳ ಮೊತ್ತವನ್ನೂ ಅದೇ ಕೆಲಸಕ್ಕೆ ವಿನಿಯೋಗಿಸಿ ಇಲ್ಲಿವರೆಗೆ 14 ಕೆರೆ ನಿರ್ಮಾಣ ಮಾಡಿದ್ದಾರೆ.

ರಂಗದೊರೆ ಸ್ಮಾರಕ ಆಸ್ಪತ್ರೆ

ಶ್ರೀ ಶೃಂಗೇರಿ ಚಾರಿಟಬಲ್ ಟ್ರಸ್ಟ್ ಮೂಲಕ ಬೆಂಗಳೂರಿನಲ್ಲಿ ನಡೆಯುವ ರಂಗದೊರೆ ಸ್ಮಾರಕ ಆಸ್ಪತ್ರೆಯಿಂದ ಕಡಿಮೆ ಮೊತ್ತದಲ್ಲಿ ಉತ್ಕ ೃ್ಟ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರಿನ ಬಸವನಗುಡಿಯ ಶಂಕರಪುರದಲ್ಲಿರುವ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೇರಿ ಅನೇಕ ಚಿಕಿತ್ಸೆಗೆ ದೂರ ದೂರದಿಂದ ಬಡ ರೋಗಿಗಳೂ ಆಗಮಿಸಿ ಚಿಕಿತ್ಸೆ ಪಡೆಯುತ್ತಾರೆ.