ಬೆಂಗಳೂರು: ಭಾರತದ ವಿವಿಧ ರಾಜ್ಯಗಳ ಜನರು ಇಂಗ್ಲಿಷ್ ಬದಲು ಹಿಂದಿಯಲ್ಲಿ ಸಂವಹನ ನಡೆಸಬೇಕು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿಕೆಗೆ ಕೂ ಮೈಕ್ರೋ ಬ್ಲಾಗಿಂಗ್‌ನಲ್ಲಿ ಕನ್ನಡಿಗರಿಂದ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ.
#ಸ್ಥಳೀಯಭಾಷೆಗೆಆದ್ಯತೆಕೊಡಿ ಎಂಬ ಹ್ಯಾಷ್‌ಟ್ಯಾಗ್‌ನಡಿ ಹಲವರು ಕನ್ನಡ ಪರವಾದಂತಹ ಕೂಗಳನ್ನು ಮಾಡಿದ್ದಾರೆ. ಅಲ್ಲದೆ, ಕನ್ನಡದ ಅಗತ್ಯ ಮತ್ತು ಸಂವಹನಕ್ಕೆ ಇಂಗ್ಲಿಷ್‌ನ ಅಗತ್ಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
#ಸ್ಥಳೀಯಭಾಷೆಗೆಆದ್ಯತೆಕೊಡಿ ಪರಕೀಯ ಭಾಷೆಗಳಿಗಲ್ಲ! ದೇಶೀಯ ಭಾಷೆಗಳನ್ನು ಬೆಂಬಲಿಸೋಣ, ಪರಕೀಯ ಭಾಷೆಗಳಿಗೆ ದೇಶೀಯ ಭಾಷೆಗಳು ಪರ್ಯಾಯವಾಗಿ ನಿಲ್ಲಲಿ, ನಮ್ಮ ನಮ್ಮ ರಾಜ್ಯಗಳಲ್ಲಿ ನಮ್ಮ ಭಾಷೆಗೇ ಮೊದಲ ಆದ್ಯತೆ ಎಂಬುದು ನೆನಪಿರಲಿ ಎಂದು ಪ್ರೀತಮ್ ಎಂಬುವರು ಕೂ ಮಾಡಿದ್ದಾರೆ.
ಸನ್ಮಾನ್ಯ ಕೇಂದ್ರದ ಗೃಹಮಂತ್ರಿಗಳಾದ ಅಮಿತ್ ಷಾ ಅವರ ಹಿಂದಿ ಪ್ರೇಮ ಅವರ ಮಾತುಗಳಲ್ಲಿ ಎದ್ದು ಕಾಣುತ್ತಿದೆ. ತಮಿಳುನಾಡಿಗೆ ಹೋಗಿ ಒಮ್ಮೆಯಾದರೂ ಹಿಂದಿಯ ಒಂದು ಅಕ್ಷರ ಮಾತನಾಡಿಸಲಿ. ಆಗ ಒಪ್ಪೋಣ. ಆದರೆ ಅದು ಅಸಾಧ್ಯದ ಮಾತು. ಇಂಗ್ಲಿಷ್ ಬದಲು ಹಿಂದಿಯನ್ನೇ ಬಳಸಿ ಎಂಬುದು ಈಗ ಧೋರಣೆಯಂತೆ ಮಾರ್ಪಟ್ಟಿದೆ ಎಂದು ಶ್ರೀರಂಗ ಕೂ ಮಾಡಿದ್ದಾರೆ.
– ಶ್ರೀರಂಗ (@sri.ranga) 8 Apr 2022
ಅಮಿತ್ ಷಾ ಅವರ ಇಂಗ್ಲಿಷ್ ಬದಲು ಹಿಂದಿ ಬಳಸಿ ಹೇಳಿಕೆ ಈಗ ಚರ್ಚೆಗೆ ಗ್ರಾಸವಾಗಿದೆ. ವಿರೋಧ ಪಕ್ಷ ಹಾಗೂ ಇತರ ಪಕ್ಷಗಳ ಮುಖಂಡರು ಕನ್ನಡಕ್ಕೆ ಮಾಡುತ್ತಿರುವ ಅವಮಾನ, ಹಿಂದಿ ಹೇರಿಕೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸ್ಥಳೀಯ ಭಾಷೆಯಲ್ಲಿ ಮಾತನಾಡಲು ಅವಕಾಶ ನೀಡಲು ಆಗ್ರಹಿಸುತ್ತಿದ್ದಾರೆ. ರಾಜಕೀಯ ಪಕ್ಷಗಳಿಗೆ ಈಗ ಉಕ್ಕಿ ಬರುವ ಕನ್ನಡ ಪ್ರೇಮ ಯಾವಾಗಲೂ ಇದ್ದರೆ ಒಳ್ಳೆಯದಲ್ಲವೇ? ಎಂದು ಶ್ರೀಕರ ಅಭಿಪ್ರಾಯಪಟ್ಟಿದ್ದಾರೆ.
– ಶ್ರೀಕರ (@ಶ್ರೀಕರ) 8 Apr 2022
ಕನ್ನಡ, ತಮಿಳು, ಸಂಸ್ಕೃತ ಭಾಷೆಗಳು ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು ಜನರ ಜೀವನದ ಅವಿಭಾಜ್ಯ ಅಂಗವಾಗಿದೆ ಹೀಗಿರುವಾಗ ದೇಶದಲ್ಲಿ ಹಿಂದಿ ಭಾಷೆಯನ್ನು ರಾಷ್ಟ್ರ ಭಾಷೆಯಂತೆ ಪರಿಗಣಿಸಿದರೆ, ಜನರು ಖಂಡಿತ ಒಪ್ಪುವುದಿಲ್ಲ ಎಂದು ಚಂದನಾ ಗೌಡ ಎಂಬುವರು ಕೂ ಮಾಡಿದ್ದಾರೆ.
ಅಮಿತ್ ಷಾ ಇಂಗ್ಲಿಷ್ ಭಾಷೆಗೆ ಪರ್ಯಾಯವಾಗಿ ಹಿಂದಿ ಬಳಸಿ ಎಂದಿದ್ದೇ ತಡ, ರಾಜಕೀಯ ವ್ಯಕ್ತಿಗಳು ಕನ್ನಡಕ್ಕೆ ಆಗುತ್ತಿರುವ ದ್ರೋಹ ಅಂತ ಶುರು ಮಾಡಿವೆ. ಎಲ್ಲಾ ರಾಜಕೀಯ ಪಕ್ಷಗಳಿಗೂ ಒಂದು ಪ್ರಶ್ನೆ, ನೀವು ಕನ್ನಡಕ್ಕಾಗಿ ಏನ್ ಮಾಡಿದ್ದೀರಿ ಹೇಳಿ, ತಪ್ ತಪ್ಪು ಭಾಷಣ ಮಾಡಿ ಹದಗೆಡಿಸಿದ್ದೀರಿ ಎಂದು ಎನ್‌ಜಿ ಸುನೀಲ್ ಕೂ ಮಾಡಿದ್ದಾರೆ.
ಇಬ್ಬರು ಮಾಜಿ ಸಿಎಂ, ಕುಂ.ವೀ. ಸೇರಿ 61ಕ್ಕೂ ಅಧಿಕ ಸಾಹಿತಿಗಳಿಗೆ ಕೊಲೆ ಬೆದರಿಕೆ!