ಕನ್ನಡ ಶಾಲೆಗಳಿಗೆ ಕಾಯಕಲ್ಪ

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

ಆಂಗ್ಲ ಮಾಧ್ಯಮ ಶಿಕ್ಷಣ ಪ್ರಭಾವದಿಂದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು ಅಳಿವಿನಂಚಿಗೆ ಬಂದಿದೆ ಎಂಬುದು ಎಷ್ಟು ಸತ್ಯವೋ ಸರ್ಕಾರದ ದಂದ್ವ ನೀತಿ ಕೂಡ ಅಷ್ಟೇ ಕಾರಣ. ಪಾಲಕರ ಇಂಗ್ಲಿಷ್ ಶ್ರೇಷ್ಠ ಎಂಬ ವ್ಯಾಮೋಹದಿಂದ ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಕಡಿಮೆ ಆಗಿದೆ.

ಬದಲಾದ ಕಾಲಘಟ್ಟದಲ್ಲಿ ಶಾಲೆಯೆಂಬುದು ಒಂದು ಉದ್ಯಮರಂಗವಾಗಿ ಕಂಡ ಕಂಡಲ್ಲಿ ಖಾಸಗಿ ಶಾಲೆ ನಿರ್ಮಿಸಿ ಅಂತಹ ಶಾಲೆಗೆ ಮಕ್ಕಳನ್ನು ಕರೆತರಲು ವಾಹನ ವ್ಯವಸ್ಥೆ ಕಲ್ಪಿಸಿ ಮನೆ ಬಾಗಿಲವರೆಗೆ ಬಸ್ ಅಥವಾ ಇನ್ನಿತರ ವಾಹನದ ಮೂಲಕ ಶಾಲೆಗೆ ಕರೆತರುವ ಕಾರ್ಯ ನಡೆಯುತ್ತಿದೆ. ಇದರಿಂದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸತೊಡಗಿದೆ. ಇದು ಇಂದು ಸರ್ಕಾರಿ ಶಾಲೆ ಮುಚ್ಚಲು ಕಾರಣವೆನ್ನಬಹುದು.

ಯುವಕ ಮಂಡಲಗಳ ಸಹಕಾರ: ಸರ್ಕಾರಿ ಅನುದಾನಿತ, ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುವುದನ್ನು ಮನಗಂಡ ಆಯಾ ಭಾಗಗಳ ಯುವಕ ಮಂಡಲಗಳು ತಮ್ಮೂರಿನ ಸರ್ಕಾರಿ ಶಾಲೆ ಉಳಿಸಲು ಪಣತೊಟ್ಟಿದ್ದಾರೆ. ಇದಕ್ಕಾಗಿ ಪರ ಊರುಗಳಿಗೆ ಭೇಟಿ ನೀಡಿ ಧನಸಹಾಯ ಪಡೆದು ಶಾಲೆಗಳ ಮೂಲಸೌಕರ್ಯಗಳ ಬಗ್ಗೆ ಅಧ್ಯಯನ ನಡೆಸಿ ಅಭಿವೃದ್ಧಿಪಡಿಸುತ್ತಿದ್ದಾರೆ. ಇದು ಒಂದು ಮಾದರಿ ಕಾರ್ಯವೇ ಸರಿ.

ಆಂಗ್ಲ ಶಿಕ್ಷಣ ಉದ್ಯಮ?: ಕೆಲವು ವರ್ಷಗಳ ಹಿಂದೆ ಖಾಸಗಿ ಆಂಗ್ಲಮಾಧ್ಯಮ ಶಿಕ್ಷಣ ವ್ಯವಸ್ಥೆಯಿಂದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸತೊಡಗಿತು. ಇದರಿಂದ ಕಂಗಾಲಾದ ಸರ್ಕಾರಿ ಅನುದಾನಿತ ಶಿಕ್ಷಣ ಸಂಸ್ಥೆ ಖಾಸಗಿ ಆಂಗ್ಲ ಶಿಕ್ಷಕಿಯರನ್ನು ನೇಮಿಸಿಕೊಂಡು ಶಾಲೆಗೊಂದು ವಾಹನ ವ್ಯವಸ್ಥೆ ಮಾಡಿಕೊಂಡು ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಶಿಕ್ಷಣ,ಇನ್ನಿತರ ಶೈಕ್ಷಣಿಕ ಕ್ರಾಂತಿಕಾರಿ ನಿಲುವಿನೊಂದಿಗೆ ತಮ್ಮ ಶಾಲೆಗಳು ಆಂಗ್ಲ ಮಾಧ್ಯಮಕ್ಕಿಂತ ಕಡಿಮೆ ಇಲ್ಲ ಎನ್ನುವಷ್ಟು ಮಟ್ಟಿಗೆ ಬೆಳೆದು ವಿದ್ಯಾರ್ಥಿಗಳನ್ನು ಹಿಡಿದಿಟ್ಟುಕೊಂಡು ಬೆಳೆಯತೊಡಗಿತು. ಇದರಿಂದ ಆಯಾ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಏರುಗತಿ ಕಂಡಿವೆ.

ಅನುದಾನಿತ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ, ಆಡಳಿತ ಮಂಡಳಿಗಳು ಶ್ರಮಿಸುತ್ತಿರುವುದು ಹಾಗೂ ಹೆತ್ತವರ ಕನ್ನಡಾಭಿಮಾನ ಮಕ್ಕಳ ದಾಖಲಾತಿ ಹೆಚ್ಚಳಕ್ಕೆ ಕಾರಣವಾಗಿರಬಹುದು.
|ಕೆ. ರಾಜಾರಾಮ್ ಐತಾಳ್ ಪಡುಕರೆ, ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ

ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಹೆಚ್ಚಿಸುವಲ್ಲಿ ಸರ್ಕಾರದ ಜತೆ ಪಾಲುದಾರರಾಗಿ ಯುವಕ ಮಂಡಲಗಳು ಮಹತ್ವದ ಪಾತ್ರ ವಹಿಸುತ್ತಿದೆ. ಹಾಗೂ ಇದಕ್ಕೆ ಯಾವುದೇ ರಾಜಕೀಯ ಹಸ್ತಕ್ಷೇಪ ಇಲ್ಲದೆ ಇದ್ದರೆ ಮುಂದೊಂದು ದಿನ ಸರ್ಕಾರಿ ಶಾಲೆ ಸುವರ್ಣ ಯುಗ ಕಾಣುವುದರಲ್ಲಿ ಸಂಶಯವಿಲ್ಲ.
|ರಾಘವೇಂದ್ರ ಕುಂದರ್, ಕಾರ್ಯದರ್ಶಿ, ಗಿಳಿಯಾರು ಯವಕ ಮಂಡಲ ಗಿಳಿಯಾರು ಕೋಟ