ಭಾಷಾ ಪ್ರೇಮ ಭಾಷಣಕ್ಕೆ ಸೀಮತವಾಗದಿರಲಿ

ವಿಜಯವಾಣಿ ಸುದ್ದಿಜಾಲ ರಟ್ಟಿಹಳ್ಳಿ

ಇಂಗ್ಲಿಷ್ ವ್ಯಾಮೋಹದಿಂದ ಕನ್ನಡ ಭಾಷೆ ನಿರ್ಲಕ್ಷ್ಯ್ಕೊಳಗಾಗಿದೆ. ಕನ್ನಡ ಭಾಷೆ ಅಭಿವೃದ್ಧಿ ಭಾಷಣಕ್ಕೆ ಸೀಮಿತವಾಗದೇ ಸಮಗ್ರ ಚಿಂತನೆ ನಡೆಸಬೇಕಿದೆ ಎಂದು ಸಮ್ಮೇಳನ ಸರ್ವಾಧ್ಯಕ್ಷ ರಾಷ್ಟ್ರಪ್ರಶಸ್ತಿ ಪುರಸ್ಕೃತ ಹ.ಮು. ತಳವಾರ ಹೇಳಿದರು.

ಇಲ್ಲಿನ ಕಬ್ಬಿಣಕಂತಿಮಠದ ಆವರಣದಲ್ಲಿ ಜರುಗಿದ ರಟ್ಟಿಹಳ್ಳಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಕನ್ನಡ ಶಾಲೆಗಳನ್ನು ಸರ್ಕಾರ ಯಾವುದೇ ಕಾರಣಕ್ಕೂ ಮುಚ್ಚಬಾರದು ಎಂದರು.

ಪಟ್ಟಣದಲ್ಲಿ ಜನಸಂಪರ್ಕಕ್ಕೆ ಸಮೀಪವಾಗುವಂತೆ ಆಡಳಿಕ ಕಚೇರಿ ಮತ್ತು ಮಿನಿವಿಧಾನಸೌಧ ನಿರ್ವಿುಸಬೇಕು. ರಟ್ಟಿಹಳ್ಳಿ ಮತ್ತು ಮಾಸೂರ ಗ್ರಾಪಂಗಳನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕು. ತಾಲೂಕು ಆಸ್ಪತ್ರೆಗೆ ಸೌಲಭ್ಯ ಒದಗಿಸಬೇಕು. ಮಾಸೂರಿನಲ್ಲಿ ಸರ್ವಜ್ಞ ಪ್ರಾಧಿಕಾರಕ್ಕೆ 50 ಕೋಟಿ ರೂ. ಮಂಜೂರು ಮಾಡಬೇಕು. ತಾಲೂಕು ಕ್ರೀಡಾಂಗಣ, ಗ್ರಂಥಾಲಯ, ಗುರುಭವನ ನಿರ್ವಿುಸಬೇಕು. ಐತಿಹಾಸಿಕ ಮದಗದ ಕೆರೆ ಅಭಿವೃದ್ಧಿ ಜತೆಗೆ ಪ್ರೇಕ್ಷಣಿಯ ಸ್ಥಳವನ್ನಾಗಿಸಬೇಕು. ರಟ್ಟಿಹಳ್ಳಿ ತಾಲೂಕಿನ ಕಣವಿ, ಹಳ್ಳೂರ, ಮಾಸೂರಿನ ಸರ್ವಜ್ಞ ಸಮಾಧಿ ಅಭಿವೃದ್ಧಿ ಸೇರಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು ಎಂದು ಹೇಳಿದರು.

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಶಾಸಕ ಬಿ.ಸಿ. ಪಾಟೀಲ, ಈಗಾಗಲೇ ರಟ್ಟಿಹಳ್ಳಿ ತಾಲೂಕಿನ ಸರ್ವಜ್ಞ ಪ್ರಾಧಿಕಾರ, ಮದಗದ ಕೆರೆಯ ಅಭಿವೃದ್ಧಿ, ಸರ್ವಜ್ಞ ಏತ ನೀರಾವರಿ ಯೋಜನೆಗಳಿಗೆ ಮಂಜೂರಾತಿ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಮುಂಬರುವ ಬಜೆಟ್​ನಲ್ಲಿ ತಾಲೂಕಿನ ಬೇಡಿಕೆಗಳನ್ನು ಈಡೇರಿಸುವ ವಿಶ್ವಾಸವಿದೆ ಎಂದರು.

ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಅಧ್ಯಕ್ಷತೆ ವಹಿಸಿದ್ದರು. ಇತ್ತೀಚೆಗೆ ನಿಧನಹೊಂದಿದ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಮತ್ತು ರಟ್ಟಿಹಳ್ಳಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷರಾಗಿದ್ದ ಪ್ರಸಿದ್ಧ ವೈದ್ಯ ಡಾ. ಇ.ಎಲ್. ನಾಡಗೇರ ಅವರಿಗೆ ಮೌನ ಆಚರಿಸುವ ಮೂಲಕ ಸಂತಾಪ ಸೂಚಿಸಲಾಯಿತು.

ಪುಸ್ತಕ- ಚಿತ್ರಕಲಾ ಪ್ರದರ್ಶನ: ಸಮ್ಮೇಳನದ ಮುಂಭಾಗದಲ್ಲಿ 3 ಪುಸ್ತಕ ಮಳಿಗೆಗಳು ಮತ್ತು ತಾಲೂಕಿನ ಚಿತ್ರಕಲಾ ಶಿಕ್ಷಕರು ವಿಭಿನ್ನವಾಗಿ ತಯಾರಿಸಿದ್ದ ಚತ್ರಕಲಾ ಮಾದರಿಗಳು, ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ವಸ್ತು ಪ್ರದರ್ಶನ, ಕೃಷಿ ವಸ್ತು ಪ್ರದರ್ಶನ ಮಳಿಗೆಗಳು ಸಾರ್ವಜನಿಕರ ಗಮನ ಸೆಳೆದವು.

ಸಾನ್ನಿಧ್ಯ ವಹಿಸಿದ್ದ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ತಿಪ್ಪಾಯಿಕೊಪ್ಪ ಮಠದ ಶ್ರೀ ಮಹಾಂತ ದೇವರು ಆಶೀರ್ವಚನ ನೀಡಿದರು. ಜಿ.ಪಂ. ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ ಕೃತಿಗಳನ್ನು ಬಿಡುಗಡೆಗೊಳಿಸಿದರು. ಮಾಜಿ ಮುಖ್ಯ ಸಚೇತಕ ಡಿ.ಎಂ. ಸಾಲಿ ಮಾತನಾಡಿದರು.

ಜಿ.ಪಂ. ಸದಸ್ಯ ಪ್ರಕಾಶ ಬನ್ನಿಕೋಡ, ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ತಾಲೂಕಾಧ್ಯಕ್ಷ ಸೋಮೇಶ್ವರ ಮೇಸ್ತ, ಎಪಿಎಂಸಿ ಅಧ್ಯಕ್ಷ ವಸಂತ ದ್ಯಾವಕ್ಕಳವರ, ಕಸಾಪ ಕಾರ್ಯಾಧ್ಯಕ್ಷ ಆರ್.ಎನ್. ಗಂಗೋಳ, ಜಿ.ಪಂ. ಮಾಜಿ ಸದಸ್ಯ ಪಿ.ಡಿ. ಬಸನಗೌಡ್ರ, ನಿವೃತ್ತ ಉಪನ್ಯಾಸಕ ಎಂ.ಎಚ್. ಹರವಿಶೆಟ್ರ, ಸಾಹಿತಿ ನಿಂಗಪ್ಪ ಚಳಗೇರಿ, ತಾ.ಪಂ. ಸದಸ್ಯ ಮಹಬೂಬಸಾಬ್ ಮುಲ್ಲಾ, ಎಸ್.ಬಿ. ಗೂಳಪ್ಪನವರ, ಹಿರೇಕೆರೂರು ತಾಲೂಕು ಕಸಾಪ ಅಧ್ಯಕ್ಷ ರಾಮು ಮುದಿಗೌಡ್ರು, ರಟ್ಟಿಹಳ್ಳಿ ತಾಲೂಕಿನ ವಿವಿಧ ಗ್ರಾಮಸ್ಥರು ಇದ್ದರು.

ನಾಡದೇವಿ, ಸರ್ವಾಧ್ಯಕ್ಷರ ಭವ್ಯ ಮೆರವಣಿಗೆ: ಸಮ್ಮೇಳನದ ನಿಮಿತ್ತ ಶನಿವಾರ ಪಟ್ಟಣದ ಎಲ್ಲೆಡೆ ರಾರಾಜಿಸುತ್ತಿದ್ದ ಕನ್ನಡ ಬಾವುಟ ಹಾಗೂ ಮೊಳಗುತ್ತಿದ್ದ ಜಯಘೊಷಗಳ ಮಧ್ಯೆ ನಾಡದೇವಿ ಭುವನೇಶ್ವರಿ ಮತ್ತು ಸಮ್ಮೇಳನ ಸರ್ವಾಧ್ಯಕ್ಷರ ಭವ್ಯ ಮೆರವಣಿಗೆ ವಿವಿಧ ವಾದ್ಯಮೇಳ, ಕಲಾ ತಂಡಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.

ಬೆಳಗ್ಗೆ 8 ಗಂಟೆಗೆ ಕಬ್ಬಿಣಕಂತಿ ಮಠದ ಆವರಣದಲ್ಲಿ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ತಹಸೀಲ್ದಾರ್ ಆರ್.ಜಿ. ಚಂದ್ರಶೇಖರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಗ್ರಾ.ಪಂ. ಅಧ್ಯಕ್ಷೆ ರೇಣುಕಾ ಕಮತಹಳ್ಳಿ ನಾಡ ಧ್ವಜಾರೋಹಣ ನೆರವೇರಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೋಮೇಶ್ವರ ಮೇಸ್ತ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು.

ಬೆಳಗ್ಗೆ 10 ಗಂಟೆಗೆ ಪಟ್ಟಣದ ಮಹಾಲಕ್ಷ್ಮೀ ದೇವಸ್ಥಾನದ ಬಳಿ ಸಾರೋಟದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರ ಹಾಗೂ ಸರ್ವಾಧ್ಯಕ್ಷ ಹ.ಮು. ತಳವಾರ ಅವರ ಮೆರವಣಿಗೆಗೆ ಜಿ.ಪಂ. ಮಾಜಿ ಉಪಾಧ್ಯಕ್ಷ ಆರ್.ಜಿ. ದ್ಯಾವಕ್ಕಳವರ ಚಾಲನೆ ನೀಡಿದರು. ಮೆರವಣಿಗೆ ಹೊಸ ಬಸ್ ನಿಲ್ದಾಣ, ಭಗತಸಿಂಗ್ ವೃತ್ತ, ಶಿವಾಜಿನಗರ, ಕೋಟೆ ಬೀದಿ ಮೂಲಕ 11.30ಕ್ಕೆ ವೇದಿಕೆಗೆ ಆಗಮಿಸಿತು. ಮೆರವಣಿಗೆಯಲ್ಲಿ ಕುಂಭಮೇಳ, ವಿವಿಧ ಶಾಲೆಯ ವಿದ್ಯಾರ್ಥಿಗಳ ಸಾಮೂಹಿಕ ಕವಾಯತ್, ಸ್ಕೌಟ್ ಮತ್ತು ಸೇವಾದಳ ವಿದ್ಯಾರ್ಥಿಗಳಿಂದ ಪಥಸಂಚಲನ, ಶಿವಮೊಗ್ಗ ಜಿಲ್ಲಾ ಶ್ರೀ ಮಹರ್ಷಿ ವಾಲ್ಮೀಕಿ ಶಬರಿ ಮಹಿಳಾ ಸಂಘದಿಂದ ಡೊಳ್ಳು, ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದ ಸಿದ್ಧಾರೂಢ ಜಗ್ಗಲಗಿ ತಂಡ, ಕುದುರೆ ಮೇಲೆ ಕುಳಿತಿದ್ದ ವೀರ ಪುರುಷರ ವೇಷಧಾರಿಗಳು, ವೀರಗಾಸೆಯ ಪುರವಂತರ ಒಡಪುಗಳು, ವಾಧ್ಯ ಮೇಳಗಳು ಗಮನಸೆಳೆದವು.