ಕನ್ನಡ ಭಾಷೆ ಉಳಿಸಿ ಬೆಳೆಸೋಣ

ವಿಜಯವಾಣಿ ಸುದ್ದಿಜಾಲ ಬ್ಯಾಡಗಿ

ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಇರುವ ಬ್ಯಾಡಗಿ ತಾಲೂಕು ಧಾರ್ವಿುಕ, ಸಾಹಿತ್ಯ ಮತ್ತಿತರ ಕ್ಷೇತ್ರಗಳಲ್ಲಿ ವಿಶಿಷ್ಟ ಛಾಪು ಮೂಡಿಸಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

ತಾಲೂಕಿನ ಚಿಕ್ಕಬಾಸೂರು ಗ್ರಾಮದ ಶ್ರೀ ಸಿದ್ಧರಾಮೇಶ್ವರ ದೇವಸ್ಥಾನ ಬಯಲು ಜಾಗದಲ್ಲಿ ಗುರುವಾರ ಜರುಗಿದ 5ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯುವಪೀಳಿಗೆಯು ಕನ್ನಡ ಉಳಿಸಿ ಇಂಗ್ಲಿಷ್ ಅನ್ನು ಜ್ಞಾನ ಭಾಷೆಯಾಗಿ ಬಳಸಬೇಕು. ಆಧುನಿಕ ಶಿಕ್ಷಣಕ್ಕೆ ಇಂಗ್ಲಿಷ್ ಕಲಿಯಲಿ. ಆದರೆ, ಮಾತೃಭಾಷೆ ಮರೆಯ ಬಾರದು. ಹಳ್ಳಿಗಳಲ್ಲಿ ಕೆಲಮಟ್ಟಿಗೆ ಇಂಗ್ಲಿಷ್ ಬಳಕೆ ತುಸು ಕಡಿಮೆ. ಕನ್ನಡವನ್ನು ಹೆಚ್ಚು ಬಳಸುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಬೇಕಿದೆ ಎಂದರು.

ಉದ್ಘಾಟನೆ ನೆರವೇರಿಸಿದ ಎಪಿಎಂಸಿ ಸದಸ್ಯ ವೀರಭದ್ರಪ್ಪ ಗೊಡಚಿ ಮಾತನಾಡಿ, ರಾಜ್ಯದಲ್ಲಿ ಕನ್ನಡ ಭಾಷೆ ಉಳಿವು, ಬಳಕೆಯ ಜಾಗೃತಿ ಆಗಬೇಕಿದೆ. ದೇಶದಲ್ಲಿ ಅತಿಹೆಚ್ಚು ಜ್ಞಾನಪೀಠ ಪ್ರಶಸ್ತಿಯನ್ನು ಕನ್ನಡಿಗರು ಪಡೆದಿದ್ದಾರೆ. ಕನ್ನಡದ ಹಿರಿಮೆ ಅಪಾರವಾಗಿದೆ. ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ ಎಂದರು.

ಶಿಕ್ಷಕ ಅಶೋಕ ಮೂಡಿ, ಎಸ್.ಎನ್. ಯಮನಕ್ಕನವರ, ಸುರೇಶ ಆಸಾದಿ ನಿರ್ವಹಿಸಿದರು. ಪುರಸಭಾಧ್ಯಕ್ಷ ಮುರಿಗೆಪ್ಪ ಶೆಟ್ಟರ, ಉಪಾಧ್ಯಕ್ಷೆ ದ್ರಾಕ್ಷಾಣಿಮ್ಮ ಪಾಟೀಲ, ತಾಪಂ ಸದಸ್ಯರಾದ ಶಾಂತಪ್ಪ ದೊಡ್ಡಮನಿ, ಪ್ರಭುಗೌಡ ಪಾಟೀಲ, ಕಸಾಪ ಜಿಲ್ಲಾಧ್ಯಕ್ಷ ಪ್ರೊ. ಲಿಂಗಯ್ಯ ಹಿರೇಮಠ, ತಾಲೂಕಾಧ್ಯಕ್ಷ ಬಿ.ಎಂ. ಜಗಾಪುರ, ಸಾಹಿತಿ ಕೆ.ಎಚ್. ಮುಕ್ಕಣ್ಣನವರ, ಗ್ರಾಪಂ ಅಧ್ಯಕ್ಷೆ ಕುಸುಮಾ ಹಂಜೇರ, ಮುಖಂಡರಾದ ಪ್ರೇಮಾನಂದ ಲಕ್ಕಣ್ಣನವರ, ಜಗದೀಶ ಕಣಗಿಲಬಾವಿ, ರುದ್ರಪ್ಪ ಹೊಂಕಣ, ಪ್ರೊ. ಪ್ರೇಮಾನಂದ ಲಕ್ಕಣ್ಣನವರ ಇತರರಿದ್ದರು.

ರೈತರ ಉನ್ನತಿಯಿಂದ ಅಭಿವೃದ್ಧಿ:ತಾಲೂಕಿನ ಕೆರೆ ಕಟ್ಟೆ ತುಂಬಿಸಿ ಅಂತರ್ಜಲ ಹೆಚ್ಚಿಸಬೇಕು. ಕೃಷಿಗೆ ಒತ್ತು ನೀಡಿ ಮೂಲಕ ರೈತರನ್ನು ಆರ್ಥಿಕವಾಗಿ ಬಲಗೊಳಿಸಬೇಕಿದೆ ಎಂದು ಸಮ್ಮೇಳನಾಧ್ಯಕ್ಷ ಡಾ. ಶಶಿಧರ ವೈದ್ಯ ಹೇಳಿದರು.

ರೈತಕುಲ ಸಮೃದ್ಧಿಯಾದರೆ ನಾಡು ಪ್ರಗತಿ ಹೊಂದಲಿದೆ. ಕೆರೆಗಳ ಹೂಳೆತ್ತಿ ನದಿ ನೀರಿನಿಂದ ತುಂಬಿಸಬೇಕು. ತಾಲೂಕಿನಲ್ಲಿ ನೀರಾವರಿ ಯೋಜನೆಗಳನ್ನು ಜಾರಿಗೊಳಿಸುವ ಅವಶ್ಯಕತೆ ಇದೆ. ಸಾವಯುವ ಕೃಷಿ, ಶೂನ್ಯಬೆಳೆ ಪದ್ಧತಿಗೆ ಒತ್ತು ನೀಡಬೇಕು. ಇಂತಹ ಕೃಷಿ ಸಾಧಕರನ್ನು ಪ್ರೋತ್ಸಾಹಿಸಿ ಅವರು ಬೆಳೆ ಪದ್ಧತಿಯನ್ನು ಎಲ್ಲೆಡೆ ಪರಿಚಯಿಸುವ ಕಾರ್ಯ ಸರ್ಕಾರ, ಸಾರ್ವಜನಿಕರಿಂದ ನಡೆಯಬೇಕಿದೆ. ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಖ್ಯಾತಿಯ ಬ್ಯಾಡಗಿಯಲ್ಲಿ ಮೂಲತಳಿ ಕಡ್ಡಿ ಮೆಣಸಿಕಾಯಿ ಹಂತಹಂತವಾಗಿ ಅಳಿಯುತ್ತಿದೆ. ಈ ತಳಿ ಕುರಿತು ಸಂಶೋಧನೆ ಮಾಡುವ ಮೂಲಕ ಸಾವಯವ ಶೈಲಿಯಲ್ಲಿ ಮೆಣಸಿನಕಾಯಿ ಬೆಳೆಯಬೇಕು. ಮಾರುಕಟ್ಟೆಗೆ ಮೆಣಸಿನಕಾಯಿ ಹೆಚ್ಚು ಆವಕಗೊಂಡ ಸಮಯದಲ್ಲಿ ದರ ಸ್ಥಿರತೆ ಮೂಲಕ ಬೆಳೆಗಾರರ ಹಿತ ಕಾಪಾಡಬೇಕು ಎಂದರು.

ಕನ್ನಡದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತಿತರ ಸಂದರ್ಭಗಳಲ್ಲಿ ಪ್ರಥಮ ಆದ್ಯತೆ ನೀಡಲು ಕಾಯ್ದೆ ತಿದ್ದುಪಡಿ ಮಾಡಬೇಕು. ಕನ್ನಡ ಭಾಷೆಯನ್ನು ನಾವು ಅಭಿಮಾನ, ಮೈಮನಗಳಲ್ಲಿ ರೂಢಿಸಿಕೊಳ್ಳಬೇಕು. ಕನ್ನಡವನ್ನು ಹೆಚ್ಚು ಬಳಸಿದಾಗ ಅದು ತಾನಾಗಿಯೇ ಉಳಿಯುತ್ತದೆ. ಹಳ್ಳಿಗಾಡಿನ ಕಲಾವಿದರನ್ನು ಇನ್ನಷ್ಟು ಪ್ರೋತ್ಸಾಹಿಸಲು, ಶಕ್ತಿ ತುಂಬಲು ಕಸಾಪ ಯತ್ನಿಸಬೇಕು. ಆಗಾಗ ವಿವಿಧ ಗ್ರಾಮಗಳಿಗೂ ಅವಕಾಶ ಕಲ್ಪಿಸಲು ಪರಿಷತ್ ನಿರ್ಧರಿಸಲಿ. ಕನ್ನಡದ ಕಂಪನ್ನು ಬಾನೆತ್ತರಕ್ಕೆ ಹಾರಿಸಲು ನಾವೆಲ್ಲ ಶ್ರಮಿಸೋಣ ಎಂದರು.

ಅದ್ದೂರಿ ಮೆರವಣಿಗೆ:ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಭುವನೇಶ್ವರಿ ದೇವಿ, ಸಮ್ಮೇಳನಾಧ್ಯಕ್ಷ ಡಾ. ಶಶಿಧರ ವೈದ್ಯ ದಂಪತಿಯ ಸಾರೋಟ ಮೆರವಣಿಗೆ ಅದ್ದೂರಿಯಾಗಿ ಜರುಗಿತು. ಹಿರೇಅಣಜಿ ವೀರಗಾಸೆ ತಂಡ, ಚಿಕ್ಕಳ್ಳಿಯ ಶಹನಾಯಿ ಸೇರಿ ವಿವಿಧ ಕಲಾವಿದರ ತಂಡ ಮೆರವಣಿಗೆಗೆ ಮೆರುಗು ನೀಡಿತು.

ನಾಡಿನಲ್ಲಿ ಧರ್ಮ, ಸಾಹಿತ್ಯ, ಸಂಸ್ಕೃತಿ, ಕಲೆ, ಭಾಷೆ ಬೆಳವಣಿಗೆಯಲ್ಲಿ ಕನ್ನಡ ಸಂಭ್ರಮ ಕಾರ್ಯಕ್ರಮ ಅಗತ್ಯವಾಗಿದೆ. ಕಸಾಪ ಮೂಲಕ ಸಾಧಕರನ್ನು ಪ್ರೋತ್ಸಾಹಿಸುವ, ಒಡೆದ ಮನಸುಗಳನ್ನು ಒಗ್ಗೂಡಿಸುವ, ಭಾವೈಕ್ಯ ಬೆಸೆಯುವ ಕಾರ್ಯವಾಗಬೇಕು. ಕನ್ನಡದ ಒಡಲು ನುಡಿ ಮನೆ-ಮನಗಳಲ್ಲಿ ಬೆಳಗಬೇಕಿದೆ.

| ಮಹೇಶ್ವರ ಶಿವಾಚಾರ್ಯರು, ಕೂಡಲ ಗುರುನಂಜೇಶ್ವರ ಮಠದ