ಪ್ರವಾಹ ಸಂತ್ರಸ್ತರ ಕಣ್ಣು ಒರೆಸಿದ ಕನ್ನಡ ಕೋಗಿಲೆ ಸೀಸನ್​-2 ವಿಜೇತ ಖಾಸೀಮ್ ಅಲಿ

ಚಿಕ್ಕೋಡಿ: ಕಲರ್ಸ್ ಸೂಪರ್​ ವಾಹಿನಿಯ ಪ್ರಖ್ಯಾತ ರಿಯಾಲಿಟಿ ಶೋ ‘ಕನ್ನಡ ಕೋಗಿಲೆ’ಯ ಸೀಸನ್​-2 ವಿಜೇತ ಖಾಸೀಮ್ ಅಲಿ ಪ್ರವಾಹ ಸಂತ್ರಸ್ತರ ನೋವಿಗೆ ಸ್ಪಂದಿಸುವ ಮೂಲಕ ಮಾದರಿಯಾಗಿದ್ದಾರೆ.

ಮಂಗಳವಾರ ಕೃಷ್ಣಾ ತೀರದ ಜನರ ಬಳಿ ತೆರಳಿ ಸಹಾಯಹಸ್ತ ಚಾಚಿದ ಅವರು ಹಾವೇರಿಯಿಂದ ಸುಮಾರು 50 ಸಾವಿರ ರೂ. ಮೌಲ್ಯದ ಅಗತ್ಯವಸ್ತುಗಳನ್ನು ತಂದು ಪ್ರವಾಹ ಸಂತ್ರಸ್ತರಿಗೆ ಹಂಚಿದರು. ಬಟ್ಟೆ, ಹಾಸಿಗೆ, ಹೊದಿಕೆ ಹಾಗೂ ದಿನಬಳಕೆಯ ವಸ್ತುಗಳೊಂದಿಗೆ ಚಿಕ್ಕೋಡಿ ತಾಲೂಕಿನ ಬಸವನಾಳಗಡ್ಡೆಯಲ್ಲಿ ತೆರೆಯಲಾದ ಆಶ್ರಯ ಕೇಂದ್ರಕ್ಕೆ ಆಗಮಿಸಿದ ಖಾಸೀಮ್ ಅಲಿ ಸ್ವತಃ ತಾವೇ ವಸ್ತುಗಳನ್ನು ಹಂಚಿಕೆ ಮಾಡಿದರು.

ಈ ವೇಳೆ ಮಾತನಾಡಿದ ಅವರು ಕರ್ನಾಟಕ ಜನತೆ ನನಗೆ ಪ್ರೀತಿ ಕೊಟ್ಟು ವೋಟ್​ ಮಾಡುವ ಮೂಲಕ ಕನ್ನಡ ಕೋಗಿಲೆ ಸೀಸನ್​- 2 ವಿಜೇತರನ್ನಾಗಿ ಮಾಡಿದ್ದಾರೆ. ಇದು ನನಗೆ ಬಹಳ ಖುಷಿಯಾಗಿದೆ. ನಮ್ಮ ಮನೆಯೂ ಸೇರಿ ಉತ್ತರ ಕರ್ನಾಟಕದ ಬಹುತೇಕ ಭಾಗ ಪ್ರವಾಹದಿಂದ ಮುಳುಗಿತ್ತು. ಅದನ್ನು ನೋಡಿ ನನಗೆ ತುಂಬಾ ಬೇಸರವಾಗಿತ್ತು. ನನ್ನನ್ನು ಪಬ್ಲಿಕ್​ ಹೀರೋವನ್ನಾಗಿ ಮಾಡಿದ ಅವರಿಗೆ ನನ್ನ ಕಡೆಯಿಂದ ಏನಾದರೂ ಸಹಾಯ ಮಾಡಬೇಕೆಂದು ಬಯಸಿ, ಅಳಿಲು ಸೇವೆ ಮಾಡಿದ್ದೇನೆ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *