‘ಕನ್ನಡ ನುಡಿ ಸಂಭ್ರಮ-28’ ಇಂದಿನಿಂದ

ಅಕ್ಕಿಆಲೂರ: ನಾಡಾಭಿಮಾನ, ರಾಷ್ಟ್ರೀಯ ಮನೋಧರ್ಮದ ಸಭೆ ಸಮಾರಂಭಗಳ ಮೂಲಕ ‘ಸಾಂಸ್ಕೃತಿಕ ನಗರಿ’ ಎಂದು ಖ್ಯಾತಿ ಪಡೆದ ಅಕ್ಕಿಆಲೂರಿನಲ್ಲಿ ಡಿ. 20ರಿಂದ ಮೂರು ದಿನ ದುಂಡಿ ಬಸವೇಶ್ವರ ಜನಪದ ಕಲಾ ಸಂಘದ ಆಶ್ರಯದಲ್ಲಿ ಕನ್ನಡ ನುಡಿಸಂಭ್ರಮ-28 ಜರುಗಲಿದೆ.

ಅಕ್ಕಿಆಲೂರಿನ ಸಾಲುಸಂತೆ ವ್ಯಾಪಾರಿಗಳು ಸೇರಿಕೊಂಡು ಚಿಂತನ ಬಳಗದ ಮಾರ್ಗದರ್ಶನಲ್ಲಿ 1990ರಲ್ಲಿ ಉದಯಿಸಿದ ಡಾ. ರಾಜ್​ಕುಮಾರ ಯುವಕ ಮಂಡಳಿ, ಸದ್ಯ ದುಂಡಿ ಬಸವೇಶ್ವರ ಜನಪದ ಕಲಾಸಂಘವಾಗಿ ಕನ್ನಡ ಪರಂಪರೆಯನ್ನು ಮುನ್ನಡೆಸುತ್ತಿದೆ. ಕಳೆದ ಮೂರು ವರ್ಷಗಳಿಂದ ನುಡಿಸಂಭ್ರಮದ ಸಂತಸವನ್ನು ರಾಜ್ಯಮಟ್ಟಕ್ಕೆ ಉಣಬಡಿಸುತ್ತಿದೆ.

ಕನ್ನಡ ನಾಡಿನ ಸಾಹಿತ್ಯ, ಸಂಸ್ಕೃತಿ, ಪರಂಪರೆ ಹಾಗೂ ಆಚಾರ-ವಿಚಾರಗಳನ್ನು ಮನೆ, ಮನಕ್ಕೆ ತಲುಪಿಸುವ ಕಾರ್ಯವನ್ನು ಅಕ್ಕಿಆಲೂರಿನಲ್ಲಿ ಕಳೆದ 28 ವರ್ಷಗಳಿಂದ ದುಂಡಿ ಬಸವೇಶ್ವರ ಜನಪದ ಕಲಾಸಂಘ ಮಾಡುತ್ತಿದೆ. ಇದರಿಂದಾಗಿ ಗ್ರಾಮೀಣ ಭಾಗದ ಬಹುಮುಖ ಪ್ರತಿಭೆಗಳು ಇಂದು ರಾಜ್ಯ-ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಾರೆ.

ಶೈಕ್ಷಣಿಕ, ಸಾಮಾಜಿಕವಾಗಿ ಸೇವೆ ಸಲ್ಲಿಸಿದವರಿಗೆ ಸನ್ಮಾನ, ಸಾವಿರಾರು ಬಡ ವಿಧ್ಯಾರ್ಥಿಗಳಿಗೆ ಶಿಕ್ಷಣ ನೀಡಿದ ಗುರುಗಳಿಗೆ ಗುರುವಂದನೆ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಅಕ್ಕಿಆಲೂರಿನ ಪ್ರತಿಭೆಗಳಿಗೆ ‘ಬಸವ ಚೇತನ’ ಪುರಸ್ಕಾರ ನೀಡಿ ಪ್ರೋತ್ಸಾಹ ನೀಡಲಾಗುತ್ತದೆ.

ದುಂಡಿ ಬಸವೇಶ್ವರ ಜನಪದ ಕಲಾಸಂಘದ ಹಾದಿ

ಕೆಲ ಹವ್ಯಾಸಿ ಕಲಾವಿದ ಯುವಕರು ಸೇರಿ ಕಟ್ಟಿದ ಡಾ. ರಾಜಕುಮಾರ ಯುವಕ ಸಂಘ ಇಂದು ದುಂಡಿಬಸವೇಶ್ವರ ಜನಪದ ಕಲಾ ಸಂಘವಾಗಿ ಕನ್ನಡ ನುಡಿಯ ಸೇವೆ ಮಾಡುತ್ತ ನಾಡಿನಾದ್ಯಾಂತ ಹೆಸರು ಮಾಡಿದೆ. ಕಲಾಸಂಘದ ಪದಾಧಿಕಾರಿಗಳು ಉತ್ತರ ಕರ್ನಾಟಕದ ಪ್ರತಿ ಭಾಗದಲ್ಲೂ ಸಂಚರಿಸಿ, ನಾಡಿನ ಸಮಸ್ಯೆಗಳಿಗೆ ಕಲೆಯ ಮೂಲಕ ಪರಿಹಾರ ನೀಡುವ ವಿನೂತನ ಪ್ರಯತ್ನಕ್ಕೆ ಮುಂದಾದರು. ಭುವನೇಶ್ವರಿ ದೇವಿ ಆರಾಧನೆಯನ್ನು ನಿತ್ಯ ಮಾಡುತ್ತ. ವರ್ಷದಲ್ಲಿ ಬಡವರ ಸಾಮೂಹಿಕ ವಿವಾಹ, ಪ್ರಸಕ್ತ ಸಮಸ್ಯೆಗಳ ಕುರಿತು ಹರಟೆ, ಆಧ್ಯಾತ್ಮಿಕ ಉನ್ನತಿಗೆ ಕನ್ನಡ ದೀಪೋತ್ಸವ ಹೀಗೆ ಆಕರ್ಷಕ ಕಾರ್ಯಕ್ರಮಗಳ ಆಚರಣೆಗೆ ಡಾ.ರಾಜ್ ಕುಮಾರ ಯುವಕ ಮಂಡಳಿ ಮುಂದಾಯಿತು. ನಂತರ ಶ್ರೀ ದುಂಡಿ ಬಸವೇಶ್ವರ ಜನಪದ ಕಲಾಸಂಘವಾಗಿ ಮರು ನಾಮಕರಣಮಾಡಿ ಅಧಿಕೃತ ಸಂಘ ರಚನೆಯಾಯಿತು. ನಾಡಿನ ವಿಷಯ ಬಂದಾಗ ಜಾತಿ, ಧರ್ಮ, ಮತ, ಪಥಗಳನ್ನು ಮೀರಿ ಜನಮಾನಸದಲ್ಲಿ ಅಜರಾಮರಾಗುವಂತಹ ಕಾರ್ಯಕ್ರಮಗಳನ್ನು ನೀಡಿದ ಕೀರ್ತಿ ಶ್ರೀ ದುಂಡಿ ಬಸವೇಶ್ವರ ಜನಪದ ಕಲಾಸಂಘಕ್ಕೆ ಸಲ್ಲುತ್ತದೆ. ಅಂದು ಬೆರಳೆಣಿಕೆಯಷ್ಟು ಇದ್ದ ಸದಸ್ಯರ ಸಂಖ್ಯೆ ಇಂದು ನೂರರ ಗಡಿದಾಟಿದೆ.

ಭರದ ಸಿದ್ಧತೆ : ‘ಕನ್ನಡ ನುಡಿ ಸಂಭ್ರಮ-28’ ಸಮಾರಂಭಕ್ಕೆ ಅಕ್ಕಿಆಲೂರಿನ ಬಡಾವಣೆಗಳು ಶೃಂಗಾರಗೊಂಡಿವೆ. ಹೊಸ ಬಸ್ ನಿಲ್ದಾಣ, ಸಿಂಧೂರ ಸಿದ್ದಪ್ಪ ವೃತ್ತ, ಅಂಬೇಡ್ಕರ್ ಸರ್ಕಲ್, ಸುರಳೇಶ್ವರ ವೃತ್ತದಲ್ಲಿ ನಾಡಿನ ಪ್ರಸಿದ್ಧ ವ್ಯಕ್ತಿಗಳ ಹೆಸರುಗಳುಳ್ಳ ಮಹಾದ್ವಾರಗಳನ್ನು ನಿರ್ವಿುಸಲಾಗಿದೆ. ಅಕ್ಕಿಆಲೂರಿನ ಎರಡು ಬಸ್ ನಿಲ್ದಾಣಗಳ ಮೂಲಕ ಪರಸ್ಥಳದಿಂದ ಬರುವ ಸಾಹಿತ್ಯಾಭಿಮಾನಿಗಳಿಗೆ ಪ್ರಧಾನ ವೇದಿಕೆ ಮತ್ತು ಸಮಾರಂಭ ನಡೆಯುವ ಸ್ಥಳದ ಬಗ್ಗೆ ಮಾಹಿತಿ ನೀಡುವ ನಾಮಫಲಕ ಹಾಕಲಾಗಿದೆ. ಸಮಾರಂಭ ನಡೆಯುವ ಮುತ್ತಿನಕಂತಿಮಠದ ಆವರಣದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ.

ಸಮಾರಂಭದ ಪ್ರದೇಶದ ಸುತ್ತಲೂ ಖಾದಿ, ಕರಕುಶಲ ವಸ್ತುಗಳು, ನಾಡಿನಲ್ಲಿ ಪ್ರಸಿದ್ಧಿ ಪಡೆದಿರುವ ಮಾಲೆ, ಸಿದ್ಧ ಉಡುಪು, ರೈತರ ಕೃಷಿ ಸಾಮಗ್ರಗಳ ಮಾಹಿತಿ, ಜಾನುವಾರುಗಳ ಸಂರಕ್ಷಣೆ, ಸಾಹಿತ್ಯ, ಕಲೆಗಳಿಗೆ ಸಂಬಂಧಿಸಿದ ಪುಸಕ್ತಗಳ ಮಾರಾಟಕ್ಕೆ ಪ್ರತ್ಯೇಕ ಮಳಿಗೆಗಳನ್ನು ನಿರ್ವಿುಸಲಾಗಿದೆ.

ಮೂರು ದಿನಗಳ ಕಾಲ ವಿವಿಧ ವಿಚಾರ ಗೋಷ್ಠಿ, ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮಕ್ಕೆ ಆಗಮಿಸುವ ನಾಡಿನ ಖ್ಯಾತ ಕಲಾವಿದರು, ಸಾಹಿತಿ, ಕವಿಗಳು, ಚಲನಚಿತ್ರ ನಟರು ಹಾಗೂ ಜನಪ್ರತಿನಿಧಿಗಳಿಗೆ ತಂಗಲು ವಾಸ್ತವ್ಯಕ್ಕೆ ಅವಕಾಶ ಮಾಡಲಾಗಿದೆ. 8ರಿಂದ 10 ಜನರು ಇರುವ ಒಟ್ಟು 7 ಸಮಿತಿಗಳನ್ನು ರಚಿಸಲಾಗಿದ್ದು, ಕಳೆದ ಐದು ದಿನಗಳಿಂದ ಪದಾಧಿಕಾರಿಗಳು ಅವಿರತವಾಗಿ ಶ್ರಮಿಸಿದ್ದಾರೆ.

ನುಡಿ ಸಂಭ್ರಮದಲ್ಲಿಂದು: ಡಿ. 20ರಂದು ಬೆಳಗ್ಗೆ 10ಕ್ಕೆ ಮುತ್ತಿನಕಂತಿಮಠದ ಆವರಣದಲ್ಲಿ ಕಸಾಪ ಗ್ರಾಮೀಣ ಘಟಕದ ಅಧ್ಯಕ್ಷ ಚನ್ನವೀರಪ್ಪ ಬೆಲ್ಲದ ಧ್ವಜಾರೋಹಣ ನೆರವೇರಿಸುವರು. ಬೆಳಗ್ಗೆ 11 ಗಂಟೆಗೆ ರಾಜ್ಯಪಾಲ ವಾಜುಬಾಯ್ ವಾಲಾ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಂಘದ ಅಧ್ಯಕ್ಷ ಬಸವರಾಜ ಕೋರಿ ಅಧ್ಯಕ್ಷತೆ ವಹಿಸುವರು. ಶಾಸಕ ಸಿ.ಎಂ. ಉದಾಸಿ, ವಿಪ ಸದಸ್ಯ ಶ್ರೀನಿವಾಸ ಮಾನೆ, ಸರ್ಕಾರದ ಅಧೀನ ಕಾರ್ಯದರ್ಶಿ ವಿಶ್ವನಾಥ ಹಿರೇಮಠ, ಷಣ್ಮುಖಪ್ಪ ಮುಚ್ಚಂಡಿ, ಆರ್.ಕೆ. ದಯಾನಂದ ಪಾಲ್ಗೊಳ್ಳುವರು. ಸಂಜೆ 6.30ಕ್ಕೆ ನಡೆಯುವ ಸಮಾರಂಭದಲ್ಲಿ ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕಸಾಪ ಮಾಜಿ ರಾಜಾಧ್ಯಕ್ಷ ಗೊ.ರು. ಚಂದ್ರಶೇಖರ ಪಾಲ್ಗೊಳ್ಳುವರು. ಮಾಜಿ ಶಾಸಕ ಮನೋಹರ ತಹಶೀಲ್ದಾರ ಅವರಿಗೆ ಬಸವಚೇತನ ಪುರಸ್ಕಾರ ನೀಡಲಾಗುತ್ತದೆ. ರಾತ್ರಿ 9.30ರ ನಂತರ ನಟಿ ರಾಗಿಣಿ ದ್ವಿವೇದಿ ನೃತ್ಯ ಸಂಭ್ರಮ ನಡೆಸಿಕೊಡಲಿದ್ದಾರೆ. ನಡೆದಾಡುವ ಕಂಪ್ಯೂಟರ್ ಖ್ಯಾತಿಯ ರೋಣದ ಬಸವರಾಜ ಉಮರಾಣಿ ‘ರೊಕ್ಕಾ ನಿಮ್ಮದು, ಲೆಕ್ಕಾ ನಮ್ಮದು’ ಎಂಬ ಕಾರ್ಯಕ್ರಮ ನಡೆಸಿಕೊಡುವರು. ಮಜಾಭಾರತ ಹಾಗೂ ಕಾಮಿಡಿ ಟಾಕೀಸ್​ನ ಕಲಾವಿದರಿಂದ ಹಾಸ್ಯ ಸಂಭ್ರಮ, ನಂತರ ನಾಟ್ಯ ಪ್ರದರ್ಶನ ನಡೆಯಲಿದೆ.