ಮಂಡ್ಯ: ಕಳೆದ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 3,500 ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿಯೇ ಅನುತ್ತೀರ್ಣಗೊಂಡಿದ್ದಾರೆ. ಈ ಪೈಕಿ ಶೇ.48ರಷ್ಟು ವಿದ್ಯಾರ್ಥಿಗಳು ಕನ್ನಡ ವ್ಯಾಕರಣದಲ್ಲಿಯೇ ಅನುತ್ತೀರ್ಣಗೊಂಡಿರುವುದು ತಲೆ ತಗ್ಗಿಸುವ ವಿಷಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಬೇಸರ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಹೆದ್ದಾರಿಗಳಲ್ಲಿ ಕನ್ನಡ ನಾಮಫಲಕಗಳು ಕಡಿಮೆ ಪ್ರಮಾಣದಲ್ಲಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಎಚ್ಚೆತ್ತುಕೊಳ್ಳಬೇಕು ಎಂದರು.
ಜಿಲ್ಲಾಸ್ಪತ್ರೆ, ಬ್ಯಾಂಕ್‌ಗಳು, ಕಚೇರಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕನ್ನಡ ಭಾಷೆಯನ್ನು ಬಳಸಬೇಕು. ಸಂಬಂಧಪಟ್ಟ ಎಲ್ಲ ಅರ್ಜಿ ನಮೂನೆ ಹಾಗೂ ಎಲ್ಲ ನಾಮಫಲಕಗಳು ಕನ್ನಡದಲ್ಲಿಯೇ ಇರಬೇಕು. 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ನಡೆಯುತ್ತಿದ್ದು, ಜಿಲ್ಲೆಯಲ್ಲಿ ಕನ್ನಡ ಭವನ ನಿರ್ಮಾಣವಾಗಬೇಕು. ಸಮ್ಮೇಳನಕ್ಕೆ ಹೊರ ಜಿಲ್ಲೆಯಿಂದ ಅನೇಕರು ಬರುತ್ತಿದ್ದು, ಮಂಡ್ಯ ಜಿಲ್ಲೆಯಲ್ಲಿನ ಐತಿಹಾಸಿಕ ಮತ್ತು ಧಾರ್ಮಿಕ ಕ್ಷೇತ್ರಗಳ ಬಗ್ಗೆ ಮಾಹಿತಿಯನ್ನು ಜಿಲ್ಲೆ ಪ್ರಮುಖ ಸ್ಥಳಗಳಲ್ಲಿ ಪ್ರದರ್ಶಿಸಬೇಕು. ಕನ್ನಡ ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ಹಬ್ಬವನ್ನು ಆಚರಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಕನ್ನಡವನ್ನು ಹೆಚ್ಚಾಗಿ ಬಳಸಿದರೆ ಮಾತ್ರ ಕನ್ನಡ ಭಾಷೆ ಉಳಿಯುತ್ತದೆ. ಕನ್ನಡದ ನೆಲ, ಜಲವನ್ನು ಪಡೆಯುತ್ತಿರುವ ನಾವೇ ಕನ್ನಡ ಬಳಸದೆ ಹೋದರೆ ಕನ್ನಡ ಭಾಷೆಯು ಮುಂದೊಂದು ದಿನ ಕಣ್ಮರೆಯಾಗುತ್ತದೆ. ಆದ್ದರಿಂದ ಕನ್ನಡವನ್ನು ಉಳಿಸುವ ಭಾವನೆ ಎಲ್ಲರ ಹೃದಯದಲ್ಲಿರಬೇಕು. ಎಲ್ಲರೂ ಜೊತೆಗೂಡಿ ಪರಸ್ಪರ ವಿಶ್ವಾಸದಿಂದ ಕನ್ನಡವನ್ನು ಕಟ್ಟೋಣ. ಕನ್ನಡಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೆ ಕನ್ನಡ ಪ್ರಾಧಿಕಾರವನ್ನು ಸಂಪರ್ಕಿಸಿ. ಭಾರತೀಯ ಸಂಸ್ಕೃತಿಯ ಮೂಲ ಗುಣಗಳಿರುವ ಕನ್ನಡ ಭಾಷೆಯು ನಮ್ಮ ಅಂತರಂಗದ ಭಾಷೆಯಾಗಿದ್ದು, ಕನ್ನಡದ ಪರವಾಗಿ ನಾವೆಲ್ಲರು ದುಡಿಯಬೇಕು ಎಂದರು.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿಯೊಬ್ಬರೂ ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದು ಸಂತೋಷದ ವಿಷಯವಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ಕನ್ನಡದ ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸುವುದು ಬಹಳ ಮುಖ್ಯವಾಗಿದೆ. ಕನ್ನಡ ಭಾಷೆಯು ನಮ್ಮ ನಿರೀಕ್ಷೆಯ ಮಟ್ಟದಲ್ಲಿ ಸಶಕ್ತವಾಗಿ ಬೆಳೆಯುತ್ತಿಲ್ಲ. ಕನ್ನಡ ಶಾಲೆಗಳಿಗೆ ಮಕ್ಕಳು ಬರದೇ ಇರುವ ಕಾರಣ ಕನ್ನಡ ಶಾಲೆಗಳನ್ನು ಮುಚ್ಚುವಂತಹ ಪರಿಸ್ಥಿತಿಗಳು ಕಂಡುಬರುತ್ತಿದೆ. ಕನ್ನಡ ಶಾಲೆಯ ಮಟ್ಟ ಕುಸಿಯುತ್ತಿದೆ. ಜತೆಗೆ ಆಡಳಿತದಲ್ಲಿಯೂ ಕನ್ನಡದ ಸಂಪೂರ್ಣ ಬಳಕೆಯಾಗುತ್ತಿಲ್ಲ. ಇದೇ ರೀತಿ ಮುಂದುವರೆದರೆ ಕನ್ನಡ ಭಾಷೆಯು ಬೆಳವಣಿಗೆಯಾಗುವುದಿಲ್ಲ. ಕನ್ನಡದ ಸಾರ್ವಭೌಮತೆ ಇರುವುದು ಹಾಗೂ ಹೆಚ್ಚು ಕನ್ನಡ ಭಾಷೆ ಮಾತನಾಡುವ ಜಿಲ್ಲೆ ಮಂಡ್ಯ ಆಗಿದೆ. ಆದ್ದರಿಂದ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಬಂದರು ನಾವೆಲ್ಲರೂ ಸೇರಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ರಾಜ್ಯದ ಎಲ್ಲ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಹಾಗೂ ಉಳಿದ ಶೇ.40ರಷ್ಟು ಇತರೆ ಭಾಷೆಯಲ್ಲಿರಬೇಕು ಎಂದು ಈ ಹಿಂದೆಯೇ ಆದೇಶ ಹೊರಡಿಸಲಾಗಿತ್ತು. ಆದರೆ ಈ ಆದೇಶವನ್ನು ಪರಿಣಾಮಕಾರಿಯಾಗಿ ಅನುಸರಿಸುತ್ತಿಲ್ಲ. ಮಂಡ್ಯ ಜಿಲ್ಲೆಯಲ್ಲಿ ಖಾಸಗಿ ಶಾಲೆ ಮತ್ತು ಅಲ್ಪಸಂಖ್ಯಾತರ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಕಲಿಸುತ್ತಿಲ್ಲ ಎಂಬ ದೂರುಗಳಿವೆ. ಕನ್ನಡ ಭಾಷೆಯನ್ನು ಬೆಳೆಸುವ ನಿಟ್ಟಿನಲ್ಲಿ ಯಾವುದೇ ವಿಷಯಗಳ ಬಗ್ಗೆ ಸರ್ಕಾರಿ ಇಲಾಖೆಗಳ ಅಂತರ್ಜಾಲ ಪುಟದಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು. ವಿವರಗಳನ್ನು ಕನ್ನಡದಲ್ಲಿ ನಮೂದಿಸಿರಬೇಕು. ಗ್ರೂಪ್ ಸಿ ಹಾಗೂ ಗ್ರೂಪ್ ಡಿ ಹುದ್ದೆಗಳಲ್ಲಿ ಸ್ಥಳೀಯರಿಗೆ ಶೇ.100ರಷ್ಟು ಉದ್ಯೋಗ ನೀಡಬೇಕು. ಆದರೆ ಹೊರಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕನ್ನಡಿಗರು ಮತ್ತು ಕನ್ನಡಿಗರಲ್ಲದವರ ಬಗ್ಗೆ ಮಾಹಿತಿಯನ್ನು ಕ್ರೋಡಿಕರಿಸಬೇಕಿದೆ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ್ ಹಾನಗಲ್, ಸದಸ್ಯ ಟಿ ತಿಮ್ಮೇಶ್, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಫಣಿಕುಮಾರ್, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರಸ್ವಾಮಿ ಇತರರಿದ್ದರು.
ಕನ್ನಡದಲ್ಲಿ ಅನುತ್ತೀರ್ಣ ಬೇಸರದ ವಿಷಯ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿಕೆ
You Might Also Like
ಈ ಅಭ್ಯಾಸಗಳಿಂದ ನೀವು ಶ್ವಾಸಕೋಶ ಕ್ಯಾನ್ಸರ್ಗೆ ತುತ್ತಾಗಬಹುದು ಎಚ್ಚರ! ತಡೆಗಟ್ಟದ್ದಿದ್ರೆ ಸಾವು ಕಟ್ಟಿಟ್ಟಬುತ್ತಿ | Lung Cancer
Lung Cancer: ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಕಾಯಿಲೆಗೆ ತುತ್ತಾದವರ ಸಂಖ್ಯೆ ಗಣನೀಯವಾಗಿ ಏರಿಕೆ ಆಗುತ್ತಿದೆ. ವಯಸ್ಸಿನ…
ಪೂರ್ವಾಭಿಮುಖವಾಗಿ ಕುಳಿತು ಪೂಜೆ ಮಾಡುವುದೇಕೆ?; ಇಲ್ಲಿದೆ ಈ ಮಾತಿನ ಹಿಂದಿನ ಅಸಲಿ ಕಾರಣ | Health Tips
ಪೂಜೆ ಮಾಡುವಾಗ ಹೇಗೆ ನಿಯಮಗಳು ಮತ್ತು ನಿಬಂಧನೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಲಾಗುತ್ತದೆಯೋ ಅದೇ ರೀತಿಯಲ್ಲಿ ದಿಕ್ಕನ್ನು ಸಹ ಮನಸ್ಸಿನಲ್ಲಿಟ್ಟುಕೊಳ್ಳುವುದು…
ಊಟದ ಬಳಿಕ ಹೊಟ್ಟೆಯು ಬಲೂನ್‌ನಂತೆ ಊದಿಕೊಳ್ಳುತ್ತದೆಯೇ?; ಸಮಸ್ಯೆಗೆ ಇಲ್ಲಿದೆ ಪರಿಹಾರ | Health Tips
ಇತ್ತೀಚೆಗೆ ಜೀವನಶೈಲಿ ಮತ್ತು ಊಟದಿಂದಾಗಿ ಗ್ಯಾಸ್ ಸಮಸ್ಯೆಯು ತುಂಬಾ ಸಾಮಾನ್ಯವಾಗಿದೆ. ಇದು ಅನೇಕ ಕಾರಣಗಳಿಂದ ಉಂಟಾಗಬಹುದು.…