ಬಾಲಿವುಡ್ಗೂ ಸ್ಯಾಂಡಲ್ವುಡ್ಗೂ ದೊಡ್ಡ ಅಂತರವಿದೆಯೆಂದು ಹೇಳುವ ಕಾಲವೊಂದಿತ್ತು. ಆದರೆ ‘ಕೆಜಿಎಫ್’ ರೀತಿಯ ಸಿನಿಮಾಗಳಿಂದಾಗಿ ಈ ಎರಡು ಚಿತ್ರರಂಗಗಳ ನಡುವಿನ ಅಂತರ ಕಡಿಮೆ ಆಗುತ್ತಿದೆ. ಅದೇ ಸಮಯಕ್ಕೆ ಸರಿಯಾಗಿ ಚಂದನವನದ ನಟಿಯರಿಗೆ ಬಿಟೌನ್ನಲ್ಲಿ ಭರಪೂರ ಅವಕಾಶಗಳು ಒದಗಿಬರುತ್ತಿರುವುದು ಖುಷಿಯ ವಿಚಾರ. ವೇದಿಕಾ, ಶ್ರದ್ಧಾ ಶ್ರೀನಾಥ್, ಪ್ರಣೀತಾ, ಭಾವನಾ ರಾವ್, ಮಾನ್ವಿತಾ ಕಾಮತ್, ಐಂದ್ರಿತಾ ರೇ ಮುಂತಾದ ಬೆಡಗಿಯರು ಹಿಂದಿ ಸಿನಿದುನಿಯಾದಲ್ಲಿ ಸೌಂಡು ಮಾಡುತ್ತಿದ್ದಾರೆ. ಬಾಲಿವುಡ್ ಅಂಗಳಕ್ಕೆ ಜಿಗಿದಿರುವ ಕನ್ನಡತಿಯರ ಪೈಕಿ ಯಾರ ತೆಕ್ಕೆಯಲ್ಲಿ ಯಾವ್ಯಾವ ಸಿನಿಮಾಗಳಿವೆ ಎಂಬುದರ ವಿವರ ಇಲ್ಲಿದೆ…
ಮಿಲನ್ ಟಾಕೀಸ್ನಲ್ಲಿ ಶ್ರದ್ಧಾ ಸಿನಿಮಾ
‘ಯು ಟರ್ನ್’ ಮೂಲಕ ನಟಿ ಶ್ರದ್ಧಾ ಶ್ರೀನಾಥ್ ಪಾಲಿಗೆ ಅದೃಷ್ಟ ಕುದುರಿತು ಎಂದರೂ ತಪ್ಪಿಲ್ಲ.ಆ ಬಳಿಕ ಕನ್ನಡದಲ್ಲಿ ಕೊಂಚ ಆಫ್ಬೀಟ್ ಸಿನಿಮಾಗಳನ್ನು ಅವರು ಒಪ್ಪಿಕೊಂಡರಾದರೂ ಪರಭಾಷೆಯಲ್ಲಿ ಸ್ಟಾರ್ ನಟರ ಜತೆ ನಟಿಸುವ ಅವಕಾಶ ಒದಗಿಬಂತು. ಅದರ ಬೆನ್ನಲೇ ಬಾಲಿವುಡ್ ಮಂದಿ ಕಣ್ಣಿಗೂ ಅವರು ಬಿದ್ದರು. ತಿಗ್ಮಾಂಶು ದುಲಿಯಾ ನಿರ್ದೇಶನ ಮಾಡುತ್ತಿರುವ ‘ಮಿಲನ್ ಟಾಕೀಸ್’ ಚಿತ್ರಕ್ಕೆ ಶ್ರದ್ಧಾ ನಾಯಕಿಯಾದರು. ಬಾಲಿವುಡ್ನ ಜತೆ ಹಾಲಿವುಡ್ನ ಕೆಲವು ಸಿನಿಮಾಗಳಲ್ಲೂ ನಟಿಸುವ ಮೂಲಕ ಖ್ಯಾತಿ ಗಿಟ್ಟಿಸಿಕೊಂಡಿರುವ ಅಲಿ ಫಜಲ್ ಈ ಚಿತ್ರಕ್ಕೆ ಹೀರೋ. ಏಕಪರದೆ ಚಿತ್ರಮಂದಿರದ ಹಿನ್ನೆಲೆಯಲ್ಲಿ ಒಂದು ಪ್ರೇಮಕಥೆ ಹೇಳಬೇಕು ಎಂಬುದು ನಿರ್ದೇಶಕರ ಕನಸು. ಅದಕ್ಕಾಗಿ ಬಹುವರ್ಷದಿಂದ ಶ್ರಮಿಸಿದ್ದಾರೆ. ಇಂಥ ವಿಶೇಷ ಸಿನಿಮಾದಲ್ಲಿ ನಟಿಸುವುದು ಶ್ರದ್ಧಾ ಪಾಲಿಗೆ ಸಂತಸ ತಂದಿದೆ.
ಅರ್ಬಾಜ್ ಜತೆ ಐಂದ್ರಿತಾ ಕಮಿಂಗ್ ಬ್ಯಾಕ್
ಬಂಗಾಳದಿಂದ ಬಂದು ಕನ್ನಡದಲ್ಲಿ ಗಟ್ಟಿಯಾಗಿ ನೆಲೆಯೂರಿದ ನಟಿ ಐಂದ್ರಿತಾ, ಈಗ ಕರುನಾಡಿನ ಸೊಸೆ ಕೂಡ ಹೌದು. ನಟ ದಿಗಂತ್ ಜತೆ ಸಪ್ತಪದಿ ತುಳಿದಿರುವ ಅವರು ಪಟಪಟನೆ ಕನ್ನಡ ಮಾತನಾಡುತ್ತಾರೆ. ಸ್ಯಾಂಡಲ್ವುಡ್ನಲ್ಲಿ ಮಿಂಚಿದ ಬಳಿಕ ಐಂದ್ರಿತಾ ಚಿತ್ತ ಈಗ ಬಾಲಿವುಡ್ನತ್ತ ನೆಟ್ಟಿದೆ. ಪ್ರಸ್ತುತ ಎರಡು ಹಿಂದಿ ಸಿನಿಮಾಗಳು ಅವರ ಕೈಯಲ್ಲಿವೆ. ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ನಾಯಕತ್ವದ ‘ಕಮಿಂಗ್ ಬ್ಯಾಕ್’ ಚಿತ್ರಕ್ಕೆ ಐಂದ್ರಿತಾ ನಾಯಕಿ. ಅದರ ಸಂಪೂರ್ಣ ಚಿತ್ರೀಕರಣ ಸ್ವಿಜರ್ಲೆಂಡ್ನಲ್ಲಿ ಆಗಿರುವುದು ವಿಶೇಷ. ಕಾಮಿಡಿ ಸಿನಿಮಾಗಳಿಂದ ಪ್ರಖ್ಯಾತರಾದ ಚಂದ್ರಕಾಂತ್ ಸಿಂಗ್ ‘ಕಮಿಂಗ್ ಬ್ಯಾಕ್’ಗೆ ನಿರ್ದೇಶನ ಮಾಡಿದ್ದಾರೆ. ಇನ್ನು, ಮತ್ತೊಂದು ಸಿನಿಮಾದಲ್ಲಿ ಸಂಚಾರಿ ನಾಟಕ ತಂಡದ ಕಲಾವಿದೆಯ ಪಾತ್ರಕ್ಕೆ ಐಂದ್ರಿತಾ ಬಣ್ಣ ಹಚ್ಚಿರುವುದು ವಿಶೇಷ. ಈ ಚಿತ್ರಕ್ಕಾಗಿ ಮುಂಬೈನಲ್ಲಿ ತರಬೇತಿ ಪಡೆದುಕೊಂಡು, ಬಳಿಕ ಗುಜರಾತ್ನ ವಿವಿಧ ಲೊಕೇಷನ್ಗಳಲ್ಲಿ ನಡೆದ ಶೂಟಿಂಗ್ನಲ್ಲಿ ಅವರು ಪಾಲ್ಗೊಂಡರು. ಬಹುತೇಕ ರಂಗಭೂಮಿ ಕಲಾವಿದರೇ ಈ ಚಿತ್ರದಲ್ಲಿ ನಟಿಸಿದ್ದು, ಅವರೆಲ್ಲರ ಜತೆ ತೆರೆಹಂಚಿಕೊಂಡ ಖುಷಿ ಐಂದ್ರಿತಾಗೆ ಇದೆ. ಈ ಎರಡೂ ಸಿನಿಮಾಗಳ ಬಿಡುಗಡೆಯನ್ನು ಅವರು ಎದುರು ನೋಡುತ್ತಿದ್ದಾರೆ.
ವೇದಿಕಾಗೆ ಒಲಿದ ಹಿಂದಿ ಆಫರ್
ಮೂಲತಃ ಕನ್ನಡತಿಯಾದರೂ ಕಾಲಿವುಡ್ನಿಂದ ಸಿನಿಪಯಣ ಆರಂಭಿಸಿದವರು ನಟಿ ವೇದಿಕಾ. ದಕ್ಷಿಣ ಭಾರತದ ನಾಲ್ಕೂ ಭಾಷೆಯ ಚಿತ್ರರಂಗಗಳಲ್ಲಿ ಅವರ ಹೆಜ್ಜೆ ಗುರುತು ಮೂಡಿದೆ. ಕನ್ನಡದಲ್ಲಿ ‘ಸಂಗಮ’, ‘ಶಿವಲಿಂಗ’, ‘ಗೌಡ್ರು ಹೋಟೆಲ್’ ಚಿತ್ರಗಳ ಮೂಲಕ ಮನರಂಜಿಸಿದ್ದಾರೆ. ಉಪೇಂದ್ರ ಜತೆ ನಟಿಸಿರುವ ‘ಹೋಮ್ ಮಿನಿಸ್ಟರ್’ ಬಿಡುಗಡೆ ಆಗಬೇಕಿದೆ. ಅಷ್ಟರಲ್ಲೇ ಅವರಿಗೆ ಬಾಲಿವುಡ್ನಿಂದ ಬುಲಾವ್ ಬಂತು. ಮಲಯಾಳಂ ಚಿತ್ರರಂಗದಲ್ಲಿ ಪ್ರಸಿದ್ಧರಾಗಿರುವ ನಿರ್ದೇಶಕ ಜೀತು ಜೋಸೆಫ್ ಹಿಂದಿಯಲ್ಲೊಂದು ಸಿನಿಮಾ ನಿರ್ದೇಶನ ಮಾಡುವ ಪ್ಲಾ್ಯನ್ ರೂಪಿಸಿದ್ದಾರೆ. ಆ ಚಿತ್ರಕ್ಕೆ ಇಮ್ರಾನ್ ಹಷ್ಮಿ ನಾಯಕನಾದರೆ, ವೇದಿಕಾ ನಾಯಕಿ. ಅಂದಹಾಗೆ, ಸ್ಪ್ಯಾನಿಶ್ ಭಾಷೆಯ ‘ದಿ ಬಾಡಿ’ ಚಿತ್ರವನ್ನು ಹಿಂದಿಗೆ ಅದೇ ಹೆಸರಿನಲ್ಲಿ ರಿಮೇಕ್ ಮಾಡಿದ್ದಾರೆ ನಿರ್ದೇಶಕರು. ಈಗಾಗಲೇ ಶೂಟಿಂಗ್ ಕೂಡ ಮುಗಿದಿದ್ದು, ಜೂನ್ನಲ್ಲಿ ತೆರೆಕಾಣುವ ನಿರೀಕ್ಷೆ ಇದೆ. ಸೌಮ್ಯ ಸ್ವಭಾವದ ಕಾಲೇಜು ಹುಡುಗಿ ಪಾತ್ರದಲ್ಲಿ ವೇದಿಕಾ ಕಾಣಿಸಿಕೊಂಡಿದ್ದಾರಂತೆ. ಬಿ-ಟೌನ್ಗೆ ಪ್ರವೇಶ ಪಡೆಯಲು ಬಹು ವರ್ಷದಿಂದ ಕಾದಿದ್ದ ತಮಗೆ ಇದು ಸೂಕ್ತ ಚಿತ್ರವಾಗಿ ಒದಗಿಬಂತು ಎಂಬುದು ವೇದಿಕಾ ಅಭಿಪ್ರಾಯ.
ಮಾನ್ವಿತಾಗೂ ಸಜ್ಜಾಗಿದೆ ಹಾದಿ
ನಿರ್ದೇಶಕ ಸೂರಿ ಹುಡುಕಿದ ಪ್ರತಿಭೆ ನಟಿ ಮಾನ್ವಿತಾ ಕಾಮತ್. ಅವರು ಆಕ್ಷನ್-ಕಟ್ ಹೇಳಿದ್ದ ‘ಕೆಂಡಸಂಪಿಗೆ’ ಮತ್ತು ‘ಟಗರು’ ಚಿತ್ರಗಳ ಯಶಸ್ಸಿನ ಬಳಿಕ ಮಾನ್ವಿತಾ ಹೆಸರು ಕರುನಾಡಿನಲ್ಲಿ ಮನೆಮಾತಾಯಿತು. ಕನ್ನಡದ ಜತೆಗೆ ಸದ್ಯ ಮರಾಠಿ ಚಿತ್ರರಂಗಕ್ಕೂ ಅವರು ಕಾಲಿರಿಸಿದ್ದಾರೆ. ಅಷ್ಟೇ ಅಲ್ಲ, ಬಾಲಿವುಡ್ನ ದೊಡ್ಡ ನಿರ್ವಣದ ಸಂಸ್ಥೆಯೊಂದಕ್ಕೆ ಆಡಿಷನ್ ಕೂಡ ನೀಡಿಬಂದಿದ್ದಾರೆ ಎಂಬ ಸುದ್ದಿ ಇತ್ತೀಚೆಗಷ್ಟೇ ಹೊರಬಿದ್ದಿದೆ. ಚಿತ್ರತಂಡವೊಂದರ ಜತೆ ಮಾತುಕತೆ ನಡೆದಿದ್ದು, ಅವರ ಆಯ್ಕೆ ಬಹುತೇಕ ಖಚಿತ ಎನ್ನಲಾಗಿದೆ. ಆದರೆ ಹೆಚ್ಚಿನ ಮಾಹಿತಿ ಬಿಟ್ಟುಕೊಡಲು ಅವರು ಹಿಂದೇಟು ಹಾಕಿದ್ದಾರೆ. ಎಲ್ಲವೂ ಅಂತಿಮಗೊಂಡ ಬಳಿಕ ವಿವರ ಬಹಿರಂಗ ಪಡಿಸಬೇಕು ಎಂಬುದು ಅವರ ಉದ್ದೇಶ.
‘ಬೈಪಾಸ್’ ಮೂಲಕ ಭಾವನಾ ಬಿ-ಟೌನ್ಗೆ..
ಚಿತ್ರರಂಗಕ್ಕೆ ಕಾಲಿಡುತ್ತಲೇ ಭಾರಿ ಜನಪ್ರಿಯತೆ ಪಡೆದುಕೊಂಡರು ಭಾವನಾ ರಾವ್. ‘ಗಾಳಿಪಟ’ ಚಿತ್ರದಲ್ಲಿ ಅವರು ಹೆಜ್ಜೆ ಹಾಕಿದ ‘ನದೀಂ ದೀಂ ತನ..’ ಹಾಡು ಇಂದಿಗೂ ಫೇಮಸ್. ಆದರೆ ಆನಂತರ ಅವರ ಸಿನಿಜರ್ನಿಗೆ ಹೇಳಿಕೊಳ್ಳುವಂತಹ ವೇಗ ಸಿಗಲಿಲ್ಲ. ಇತ್ತೀಚಿನ ದಿನಗಳಲ್ಲಿ ಚಿಕ್ಕ-ಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದ ಭಾವನಾಗೆ ಈಗ ಬಂಪರ್ ಆಫರ್ ಸಿಕ್ಕಿದೆ. ಬಾಲಿವುಡ್ ನಟ ನೀಲ್ ನಿತಿನ್ ಮುಖೇಶ್ ಜತೆ ತೆರೆ ಹಂಚಿಕೊಳ್ಳುವ ಅವಕಾಶ ಅವರದ್ದಾಗಿದೆ. ಚಿತ್ರದ ಹೆಸರು ‘ಬೈಪಾಸ್ ರೋಡ್’. ಈಗಾಗಲೇ ಎರಡು ದಿನಗಳು ಶೂಟಿಂಗ್ನಲ್ಲಿ ಪಾಲ್ಗೊಂಡ ಅವರು ಖುಷಿಯಲ್ಲಿ ತೇಲುತ್ತಿದ್ದಾರೆ. ಜನವರಿ 20ರ ಬಳಿಕ ಎರಡನೇ ಹಂತದ ಚಿತ್ರೀಕರಣದಲ್ಲಿ ಅವರು ಭಾಗವಹಿಸಲಿದ್ದಾರೆ. ನೀಲ್ ನಿತಿನ್ ಸಹೋದರ ನಮನ್ ಮುಕೇಶ್ ‘ಬೈಪಾಸ್ ರೋಡ್’ಗೆ ನಿರ್ದೇಶಕ. ಈವರೆಗೆ ಕನ್ನಡ ಮತ್ತು ತಮಿಳಿನಲ್ಲಿ ಹಲವು ಬಗೆಯ ಪಾತ್ರ ನಿಭಾಯಿಸಿರುವ ಭಾವನಾ, ಈ ಚಿತ್ರದಲ್ಲಿ ಕೊಂಚ ನೆಗೆಟಿವ್ ಛಾಯೆ ಇರುವ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರಂತೆ.
ಪ್ರಣೀತಾ ಹಾಡಿನ ಸದ್ದು
ಅಪ್ಪಟ್ಟ ಕನ್ನಡತಿ ಪ್ರಣೀತಾ ಸುಭಾಷ್ ಕೂಡ ಸುಮ್ಮನೆ ಕುಳಿತಿಲ್ಲ. ಹಾಗಂತ ಅವರು ಈಗಾಗಲೇ ಯಾವುದೋ ಹಿಂದಿ ಚಿತ್ರದಲ್ಲಿ ನಟಿಸಿ ಬೀಗುತ್ತಿದ್ದಾರೆ ಎಂದರ್ಥವಲ್ಲ. ಮತ್ತೆ? ಬಾಲಿವುಡ್ನಲ್ಲಿ ಭಾರಿ ಸದ್ದು ಮಾಡುತ್ತಿರುವ ಆಯುಷ್ಮಾನ್ ಖುರಾನಾ ಜತೆ ಒಂದು ವಿಡಿಯೋ ಸಾಂಗ್ನಲ್ಲಿ ಅಭಿನಯಿಸಿ ಹಿಂದಿ ಸಿನಿಪ್ರಿಯರ ವಲಯಕ್ಕೆ ಪರಿಚಿತಗೊಂಡಿದ್ದಾರೆ. ಒಂದೆಡೆ ನಟನೆಯಲ್ಲಿ ತೊಡಗಿಕೊಂಡು, ‘ಬದಾಯಿ ಹೋ’ ರೀತಿಯ 100 ಕೋಟಿ ರೂ. ಕ್ಲಬ್ನ ಸಿನಿಮಾಗಳ ಮೂಲಕ ಪ್ರಖ್ಯಾತಿ ಪಡೆಯುವುದರ ಜತೆಗೆ ಗಾಯನ ಮತ್ತು ಸಂಗೀತ ನಿರ್ದೇಶನದಲ್ಲೂ ಸದ್ದು ಮಾಡುವ ಆಯುಷ್ಮಾನ್ಗೆ ಬಾಲಿವುಡ್ನಲ್ಲಿ ದೊಡ್ಡ ಸಂಖ್ಯೆಯ ಅಭಿಮಾನಿ ಬಳಗ ಇದೆ. ಅವರ ಜತೆ ಪ್ರಣೀತಾ ನಟಿಸಿರುವ ‘ಚನ್ ಕಿತ್ತಾನ್’ ಹಾಡು ‘ಯೂ ಟ್ಯೂಬ್’ನಲ್ಲಿ ಬರೋಬ್ಬರಿ 4 ಕೋಟಿ ಭಾರಿ ವೀಕ್ಷಣೆ ಕಂಡಿದೆ.