ಬೆಳಗಾವಿ : ಗಡಿಭಾಗದಲ್ಲಿ ಪ್ರತಿಯೊಬ್ಬರೂ ಕನ್ನಡ ಕಟ್ಟುವ ಕೆಲಸ ಮಾಡಬೇಕು. ಮನೆ-ಮನಗಳಲ್ಲಿ ಕನ್ನಡ ಬೆಳಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಹೇಳಿದರು.
ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಕವಿಗೋಷ್ಠಿಯಲ್ಲಿ ಅವರು ಮಾತನಾಡಿ, ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು ಎಂದರು.
ಕನ್ನಡ ತಪಸ್ವಿಗಳಾಗಿ, ಕನ್ನಡ ನುಡಿಯ ಯೋಗಿಗಳಾಗಿ, ಕನ್ನಡ ನೆಲಕ್ಕೆ ಚಿರಋಣಿಗಳಾಗಿರಬೇಕು. ನವೆಂಬರ್ ತಿಂಗಳು ಬಂದರೆ ಹಬ್ಬ ಪ್ರಾರಂಭವಾಗುತ್ತದೆ. ವರ್ಷವಿಡೀ ಹಬ್ಬದ ವಾತಾವರಣ ನಿರ್ಮಿಸಬೇಕು. ಕನ್ನಡ ಉಳಿಸಿ-ಬೆಳೆಸುವ ಕಾರ್ಯದಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದರು.
ಪ್ರೊ.ಎಸ್.ಎಂ. ಗಂಗಾಧರಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಧ್ಯಾಪಕರಾದ ಡಾ.ಕವಿತಾ ಕುಸುಗಲ್, ಡಾ.ಗಜಾನನ ನಾಯ್ಕ, ಡಾ.ಶೋಭಾ ನಾಯಕ, ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ, ವಿದ್ಯಾರ್ಥಿಗಳಾದ ಗೋಪಾಲ ಕಟ್ಟೆಪ್ಪಗೋಳ, ಸಂತೋಷ ನಾಯಿಕ, ಗೌತಮ ಮಾಳಿಗೆ, ಬಸವರಾಜ ಹಡಪದ, ಸುರೇಶ ನಡೋಣಿ, ದಯಾನಂದ ಬಬುಲಾದಿ ಇತರರು ಸ್ವರಚಿತ ಕವನ ವಾಚಿಸಿದರು.