ಮಂತ್ರಾಲಯಕ್ಕೆ ನಟ ಪುನೀತ್​ ರಾಜ್​ಕುಮಾರ್​ ಭೇಟಿ

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠಕ್ಕೆ ಗುರುವಾರ ಭೇಟಿ ನೀಡಿದ್ದ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರು ರಾಯರ ದರ್ಶನ ಪಡೆದರು.

ಕುಟುಂಬ ಸಮೇತರಾಗಿ ಮಠಕ್ಕೆ ಆಗಮಿಸಿದ್ದ ಅವರು, ದರ್ಶನದ ನಂತರ ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರನ್ನು ಭೇಟಿಯಾದರು. ಅಲ್ಲಿ ಸನ್ಮಾನ, ಆಶೀರ್ವಾದ ಪಡೆದರು.

ರಾಯರ ದರ್ಶನದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಪುನೀತ್​​ ರಾಜಕುಮಾರ್​, ಮಠಕ್ಕೆ ಬಂದು ಬಹಳ ದಿನಗಳಾಗಿತ್ತು. ಈಗ ಅವಕಾಶ ಸಿಕ್ಕಿದೆ. ನನ್ನ ನಟಸಾರ್ವಭೌಮ ಚಿತ್ರ ನಿರೀಕ್ಷೆ ಹುಟ್ಟಿದೆ. ಮಂತ್ರಾಲಯದಲ್ಲಿನ ರಾಜಕುಮಾರ ವಸತಿ ಭವನದ ನವೀಕರಣ ಪೂರ್ಣಗೊಂಡಿದೆ. ನಂತರ ಸಾರ್ವಜನಿಕರಿಗೆ ಲಭ್ಯವಾಗಲಿದೆ,” ಎಂದು ಹೇಳಿದರು.

ಫೆಬ್ರವರಿ 8 ರಿಂದ 10ರ ವರೆಗೆ ನಡೆಯುವ ಸುಜಯೀಂದ್ರ ತೀರ್ಥರ ದಶಮಾನೋತ್ಸವ ಕಾರ್ಯಕ್ರಮಕ್ಕೆ ಸ್ವಾಮೀಜಿ ನನ್ನನ್ನು ಆಹ್ವಾನಿಸಿದ್ದಾರೆ ಎಂದೂ ಅವರು ತಿಳಿಸಿದರು.

ಇನ್ನು ಐಟಿ ದಾಳಿಯ ಕುರಿತು ಕೇಳಿದ ಪ್ರಶ್ನೆಗೆ ” ಅದೊಂದು ಮುಗಿದ ವಿಷಯ,” ಎಂದು ಹೇಳಿದರು.
ಶ್ರೀಮಠದ ಆವರಣದಲ್ಲಿ ಅಭಿಮಾನಿಗಳು ಪುನೀತ್​ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.