ಬೆಳಗಾವಿ: ನಗರದ ಭರತೇಶ ಪದವಿಪೂರ್ವ ಮತ್ತು ಜೆ.ಜಿ.ಎನ್.ಡಿ. ಭರತೇಶ ಪದವಿ ಮಹಾವಿದ್ಯಾಲಯದಿಂದ ಈಚೆಗೆ ನುಡಿ ಪರ್ವ ಕನ್ನಡ ಹಬ್ಬದ ಕಾರ್ಯಕ್ರಮ ಜರುಗಿತು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿ, ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಮಾತನಾಡಿ, ಕನ್ನಡ ಭಾಷೆ, ಕಲೆ, ಸಂಸ್ಕೃತಿಯು 400 ವರ್ಷಗಳ ಹಿಂದಿನಿಂದಲೂ ಭಾರತದಲ್ಲಿ ಸರ್ವವ್ಯಾಪಿಯಾಗಿದೆ ಎಂದರು.
ಶ್ರವಣಬೆಳಗೊಳದ ಪ್ರಾಕೃತ ವಿಶ್ವವಿದ್ಯಾಲಯದ ನಿರ್ದೇಶಕ ಎನ್. ಸುರೇಶಕುಮಾರ ಮಾತನಾಡಿ, ಪ್ರಾಚೀನ ಪ್ರಾಕೃತ ಕೃತಿಗಳಲ್ಲಿ ನಮ್ಮ ಸಂಸ್ಕೃತಿ ಅಡಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ, ನುಡಿಪರ್ವದಂತಹ ಆಚರಣೆಗಳ ಮೂಲಕ ಭಾರತೀಯ ಸಂಸ್ಕೃತಿ ಜೀವಂತವಾಗಿಟ್ಟುಕೊಳ್ಳಲು ಸಾಧ್ಯ ಎಂದರು. ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಮಾತನಾಡಿದರು.
ಕನ್ನಡ, ಸಂಸ್ಕೃತಿ ಬಿಂಬಿಸುವ ವಿವಿಧ ಸ್ಪರ್ಧೆ ಆಯೋಜಿಸಲಾಗಿತ್ತು. ಸಂಸ್ಥೆಯ ವಿವಿಧ ಅಂಗ ಸಂಸ್ಥೆಗಳ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು.
ಜು. 6ರಂದು ಬೆಳಗ್ಗೆ ಭುವನೇಶ್ವರಿದೇವಿ ಮೂರ್ತಿ ಮೆರವಣಿಗೆ ಜರುಗಿತು. ಡೊಳ್ಳು ಕುಣಿತ, ಪೂರ್ಣಕುಂಭ ಹೊತ್ತ ವಿದ್ಯಾರ್ಥಿನಿಯರು, ಸಾಂಪ್ರದಾಯಿಕ ಉಡುಗೆ ತೊಟ್ಟ 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಮನ ಸೆಳೆದರು. ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಫಲಕ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.
ವಿನೋದ ಪಾಟೀಲ ನುಡಿ ಪರ್ವದ ವರದಿ ವಾಚಿಸಿದರು. ಸಂಸ್ಥೆಯ ಉಪಾಧ್ಯಕ್ಷ ಶ್ರೀಪಾಲ ಖೇಮಲಾಪುರೆ, ಆಡಳಿತ ಮಂಡಳಿ ಅಧ್ಯಕ್ಷ ಹೀರಾಚಂದ ಕಲಮನಿ, ಶಾಲಿನಿ ಚೌಗುಲೆ, ಸ್ವಾತಿ ಉಪಾಧ್ಯೆ, ಪದವಿ ಕಾಲೇಜಿನ ಸಹಸಂಯೋಜಕಿ ನೀತಾ ಗಂಗಾರಡ್ಡಿ ಇದ್ದರು. ಪ್ರಾಚಾರ್ಯ ಡಾ. ದೀಪ್ತಿ ಕುಲಕರ್ಣಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕಿ ಪ್ರೇಮಾ ಪತ್ತಾರ, ಶ್ರೀಕಾಂತ ಶಿರೋಳ ಪರಿಚಯಿಸಿದರು. ನುಡಿ ಪರ್ವ ಆಯೋಜಕಿ ಸುಪರ್ಣಾ ಲಗಮಣ್ಣವರ ವಂದಿಸಿದರು.