ರಾಜ್ಯೋತ್ಸವ ಮಾಸದಲ್ಲೇ ಕನ್ನಡ ಸಿನಿಮಾಗೆ ಪ್ರೇಕ್ಷಕರ ಕೊರತೆ

ಎನ್.ವೆಂಕಟೇಶ್, ಚಿಕ್ಕಬಳ್ಳಾಪುರ

ಬರಪೀಡಿತ ಜಿಲ್ಲೆಯಲ್ಲಿನ ಚಲನಚಿತ್ರ ಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವ ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರ ಬರ ಕಾಡುತ್ತಿದೆ. ಒಂದು ಪ್ರದರ್ಶನಕ್ಕೆ 600 ಆಸನಗಳ ಪೈಕಿ ಕೇವಲ 15 ಸೀಟುಗಳು ಭರ್ತಿಯಾಗುತ್ತಿದ್ದು, ಮಾಲೀಕರು ನಷ್ಟದ ಅಳಲು ತೋಡಿಕೊಳ್ಳುತ್ತಿದ್ದಾರೆ.

ಕನ್ನಡಪರ ಸಂಘಟನೆಗಳ ಒತ್ತಾಯದ ಮೇರೆಗೆ ಜಿಲ್ಲೆಯ ಚಲನಚಿತ್ರ ಮಂದಿರದ ಮಾಲೀಕರಿಗೆ ಕಡ್ಡಾಯವಾಗಿ ನವೆಂಬರ್​ನಲ್ಲಿ ಕನ್ನಡ ಸಿನಿಮಾ ಪ್ರದರ್ಶಿಸಲು ಜಿಲ್ಲಾಡಳಿತ ಸೂಚಿಸಿದೆ. ಆದರೆ, ಕನ್ನಡ ಸಿನಿಮಾದ ಟಾಕೀಸುಗಳಿಗೆ ಪ್ರೇಕ್ಷಕರೇ ಬರುತ್ತಿಲ್ಲ.

ಸಾಮಾನ್ಯವಾಗಿ ಚಲನಚಿತ್ರ ಮಂದಿರದಲ್ಲಿ ಪ್ರತಿದಿನ ಮಾರ್ನಿಂಗ್ ಶೋ, ಮ್ಯಾಟ್ನಿ, ಫಸ್ಟ್ ಮತ್ತು ಸೆಕೆಂಡ್ ಶೋ ಪ್ರದರ್ಶನಗಳು ನಡೆಯುತ್ತವೆ. ಚಲನಚಿತ್ರ ಮಂದಿರ ನಿರ್ವಹಣೆಗೆ ದಿನಕ್ಕೆ ಕನಿಷ್ಠ 12ರಿಂದ 13 ಸಾವಿರ ರೂಪಾಯಿ ಸಿಗಬೇಕು. ಇದರ ನಡುವೆ ಸ್ಯಾಟ್​ಲೈಟ್ ಶುಲ್ಕ ಮತ್ತು ಹಂಚಿಕೆದಾರರಿಂದ ಸಿನಿಮಾ ಖರೀದಿ ವೆಚ್ಚ ಬೇರೆ ಇರುತ್ತದೆ. ಆದರೆ, ಇಲ್ಲಿ ಸಿನಿಮಾ ನಿರ್ವಹಣೆ ವೆಚ್ಚವೇ ಕೈಗೆ ಸಿಗುತ್ತಿಲ್ಲ ಎನ್ನುವುದು ಮಾಲೀಕರ ಮಾತು.

ತಾತ್ಕಾಲಿಕ ಪ್ರದರ್ಶನ ರದ್ದು 

ವಿದ್ಯಾರ್ಥಿಗಳು, ರೈತರು ಸೇರಿ ಕೆಲವರಿಂದ ಮಾರ್ನಿಂಗ್ ಶೋಗೆ ಸಾಧಾರಣಾ ಪ್ರತಿಕ್ರಿಯೆ ದೊರೆಯುತ್ತಿದೆ. ಉಳಿದ ಮೂರು ಪ್ರದರ್ಶನಗಳಿಗೆ ಪ್ರೇಕ್ಷಕರೇ ಇರುವುದಿಲ್ಲ. ಪ್ರಸ್ತುತ ಚಿಕ್ಕಬಳ್ಳಾಪುರದ ಬಾಲಾಜಿ ಚಿತ್ರಮಂದಿರದಲ್ಲಿ ನಷ್ಟದ ನಡುವೆ ನಾಲ್ಕು ಪ್ರದರ್ಶನ ನಡೆಯುತ್ತಿದೆ. ಆದರೆ, ವಾಣಿ ಮತ್ತು ಕೃಷ್ಣಾ ಚಿತ್ರಮಂದಿರದಲ್ಲಿ ಎರಡು ಶೋಗಳನ್ನು ರದ್ದುಪಡಿಸಲಾಗಿದೆ.

ಅನ್ಯ ಚಿತ್ರಗಳ ಪ್ರದರ್ಶನ 

ಪ್ರಸ್ತುತ ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರಿನ ಎಲ್ಲ ಸಿನಿಮಾ ಮಂದಿರದಲ್ಲಿ ಕನ್ನಡ ಸಿನಿಮಾ ಪ್ರದರ್ಶಿಸಲಾಗುತ್ತಿದೆ. ಉಳಿದಂತೆ ಬಾಗೇಪಲ್ಲಿ, ಚಿಂತಾಮಣಿ, ಗುಡಿಬಂಡೆ ಮತ್ತು ಶಿಡ್ಲಘಟ್ಟ ತಾಲೂಕಿನಲ್ಲಿ (ತೆಲುಗಿನ ಸವ್ಯಸಾಚಿ, ಸರ್ಕಾರ್, ಶೈಲಜಾರೆಡ್ಡಿ ಅಲ್ಲುಡು, ಪಂದ್ಯಂಕೋಡಿ-2, ಹಿಂದಿಯ ಥಗ್ಸ್ ಆಫ್ ಹಿಂದೂಸ್ಥಾನ್) ಸಿನಿಮಾ ಹಾಕಲಾಗಿದೆ.

ಕನ್ನಡ ರಾಜ್ಯೋತ್ಸವದ ನ.1ರಂದು ಮಾತ್ರ ಕನ್ನಡ ಚಲನಚಿತ್ರ ಪ್ರದರ್ಶನಕ್ಕೆ ಹಿಂದಿನ ಸರ್ಕಾರ ಆದೇಶಿಸಿತ್ತು. ಇದರ ನಡುವೆ ನ್ಯಾಯಾಲಯವು ಬಲವಂತವಾಗಿ ಒಂದು ಭಾಷೆಯ ಸಿನಿಮಾ ಪ್ರದರ್ಶನ ಒತ್ತಾಯಿಸುವುದು ಸರಿಯಲ್ಲ ಎಂಬ ತೀರ್ಪು ನೀಡಿದೆ. ಇನ್ನು ರಾಜ್ಯದ ವಿವಿಧ ಮಾಲ್ ಸೇರಿ ಹಲವೆಡೆ ಬೇರೆ ಸಿನಿಮಾ ಹಾಕಲಾಗುತ್ತಿದೆ. ಆದರೆ, ಜಿಲ್ಲೆಗೆ ಮಾತ್ರ ಬೇರೆ ಕಾನೂನು ಇದೆಯಾ?

| ವೇಣು, ವ್ಯವಸ್ಥಾಪಕ, ಸಿನಿಮಾ ಮಂದಿರ

ಯಾವುದೇ ಭಾಷೆಯ ಒಳ್ಳೆಯ ಸಿನಿಮಾ ಆಗಿದ್ದರೂ ಪ್ರೇಕ್ಷಕರು ಇಷ್ಟಪಡುತ್ತಾರೆ. ಹಾಗೆಯೇ ಚೆನ್ನಾಗಿಲ್ಲ ಅಂದ್ರೆ ತಿರಸ್ಕರಿಸುತ್ತಾರೆ. ಇದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಇಲ್ಲಿ ಪ್ರೇಕ್ಷಕರನ್ನು ಆಕರ್ಷಿಸಬೇಕೆ ಹೊರತು ಬಲವಂತ ಮಾಡಬಾರದು. ಇಲ್ಲದಿದ್ದಲ್ಲಿ ನಿರುತ್ಸಾಹ ಇನ್ನೂ ಹೆಚ್ಚಾಗುತ್ತದೆ.

| ಶಿವಣ್ಣ, ಪ್ರೇಕ್ಷಕ, ಚಿಕ್ಕಬಳ್ಳಾಪುರ