ಮೈಸೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ಕಲಾಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಮಹಿಳಾ ಸಾಂಸ್ಕೃತಿಕ ಉತ್ಸವದಲ್ಲಿ ಮಹಿಳೆಯರು ತಮ್ಮ ಕಲಾಶ್ರೀಮಂತಿಕೆಯನ್ನು ತೋರ್ಪಡಿಸಿದರು.
ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ರಂಗೋಲಿ ಸ್ಪರ್ಧೆ, ವಸ್ತು ಪ್ರದರ್ಶನ ಗಮನ ಸೆಳೆಯಿತು.
ಕುಕ್ಕರಹಳ್ಳಿಯ ಕವಿತಾ ತಂಡದಿಂದ ಡೊಳ್ಳು ಕುಣಿತ, ಚಾಮರಾಜ ಜೋಡಿ ರಸ್ತೆಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಪಟ ಕುಣಿತ, ಹುಣಸೂರಿನ ಸಹನಾ ತಂಡದಿಂದ ಸುಗ್ಗಿ ಕುಣಿತ, ಕಾತ್ಯಾಯಿನಿ ಅವರಿಂದ ಛದ್ಮವೇಷ, ಕರಾವಳಿ ಯಕ್ಷಗಾನ ತಂಡದಿಂದ ಯಕ್ಷಗಾನ, ತಿ.ನರಸೀಪುರ ತಾಲೂಕಿನ ಬೀಡನಹಳ್ಳಿ ಪಲ್ಲವಿ ತಂಡದಿಂದ ಪೂಜಾ ಕುಣಿತ, ನೆರಳು ಟ್ರಸ್ಟ್‌ನಿಂದ ಬಂಜಾರ, ಅಮೃತಾ ತಂಡದಿಂದ ನಗಾರಿ, ದೇಸಿರಂಗ ಸಾಂಸ್ಕೃತಿಕ ಸಂಸ್ಥೆಯಿಂದ ಕಂಸಾಳೆ ನೃತ್ಯ ಮುದ ನೀಡಿತು.
ಭಾರತೀಯ ನೃತ್ಯಕಲಾ ಪರಿಷತ್, ತಿ.ನರಸೀಪುರದ ನಯನಾ, ಯರಗನಹಳ್ಳಿಯ ನಿತ್ಯ ನಿರಂತರ ಟ್ರಸ್ಟ್‌ನಿಂದ ನೃತ್ಯರೂಪಕ, ರಂಗಯಾನ ತಂಡ ಹಾಗೂ ಜಿಲ್ಲಾ ಕನ್ನಡ ವೃತ್ತಿ ರಂಗಭೂಮಿ ಕಲಾವಿದೆಯರ ಸಂಘದಿಂದ ನಾಟಕ ಪ್ರದರ್ಶನಗೊಂಡಿತು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬನ್ನೂರು ಕೆಂಪಮ್ಮ ನೇತೃತ್ವದಲ್ಲಿ ಸಣ್ಣಮ್ಮ, ರಾಜಮ್ಮ, ನೀಲಮ್ಮ, ಮಂಗಳಮ್ಮ ಸೋಬಾನೆ ಪದ, ವಾಗ್ದೇವಿ ಭಜನಾ ಮಂಡಳಿ, ಗಾನಸುಧಾ ಕಲಾತಂಡ, ಜ್ಞಾನೇಶ್ವರಿ ಕಲಾತಂಡ ಹಾಗೂ ಕದಳಿ ಮಹಿಳಾ ವೇದಿಕೆಯಿಂದ ಭಜನೆ ಕಾರ್ಯಕ್ರಮ ನಡೆಯಿತು.
ಶುಭಾರಾಘವೇಂದ್ರ, ರಾಜೇಶ್ವರಿ, ಸ್ನೇಹಶ್ರೀ, ಪ್ರೇಮಾ, ಅಶ್ವಿನಿ ನಂಜನಗೂಡು, ಡಾ.ಎಂ.ಪಿ.ಪ್ರೀತಮ್, ಮಂಜುಳಾ, ನಾಗರತ್ನಾ ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮಕ್ಕೆ ಚಾಲನೆ: ಶಾಸಕ ಎಲ್.ನಾಗೇಂದ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಹಿಳೆಯರು ಪ್ರಸ್ತುತ ಎಲ್ಲ ಕ್ಷೇತ್ರದಲ್ಲೂ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ. ಮಹಿಳೆಯರನ್ನು ಸಮಾಜದಲ್ಲಿ ಮುಂದೆ ತರಲು ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಮಹಿಳೆಯರು ಯೋಜನೆಯನ್ನು ಸದುಪಯೋಗಪಡಿಸಿಕೊಂಡು ಮುಂದೆ ಬರಬೇಕೆಂದು ಕರೆ ನೀಡಿದರು.
ಮಹಿಳಾ ಸಾಂಸ್ಕೃತಿಕ ಉತ್ಸವಕ್ಕೆ ಬಹುತೇಕ ಅತಿಥಿಗಳು ಗೈರು ಹಾಜರಾಗಿದ್ದಕ್ಕೆ ನಾಗೇಂದ್ರ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ರೀತಿ ಎಲ್ಲ ಅತಿಥಿಗಳು ಗೈರು ಹಾಜರಾಗಿರುವುದು ಸರಿಯಲ್ಲ. ಕಾಟಾಚಾರಕ್ಕೆ ಕಾರ್ಯಕ್ರಮಗಳನ್ನು ಆಯೋಜಿಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಮಾತನಾಡಿ, ಮಹಿಳೆಯರ ಸಹಕಾರ ಇಲ್ಲದೆ ಯಾವುದೇ ಪುರುಷರು ಸಾಧನೆ ತೋರಲು ಸಾಧ್ಯವಿಲ್ಲ. ಪ್ರತಿಯೊಬ್ಬ ಪುರುಷರ ಸಾಧನೆಯ ಹಿಂದೆ ಮಹಿಳೆ ಇರುತ್ತಾಳೆ. ಮಹಿಳೆಯರಿಗೆ ನಮ್ಮ ದೇಶದಲ್ಲಿ ಅಪಾರ ಗೌರವ ನೀಡಲಾಗುತ್ತಿದೆ. ಮಹಿಳೆಯರಿಗೆ ಗೌರವ ದೊರೆಯದೆ ಇದ್ದರೆ ಅದು ಅನಾಗರಿಕ ಸಮಾಜವಾಗುತ್ತದೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಗಳಾ ಸೋಮಶೇಖರ್ ಮಾತನಾಡಿ, ಮಹಿಳೆಯರಲ್ಲಿ ಸಾಕಷ್ಟು ಪ್ರತಿಭೆಗಳು ಇವೆ. ಅವರ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ಒದಗಿಸಿರುವುದು ಸ್ವಾಗತಾರ್ಹ ಎಂದರು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ತಾಲೂಕು ಪಂಚಾಯಿತಿ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಕಲಾವಿದೆಯರಾದ ಬನ್ನೂರು ಕೆಂಪಮ್ಮ, ಶಾಂತಾದೇವಿ, ಅಭ್ಯುದಯ ಸಂಘದ ಅಧ್ಯಕ್ಷೆ ಸುಶೀಲಾ, ಕಲಾವಿದೆಯರ ಸಂಘದ ಅಧ್ಯಕ್ಷೆ ವಸಂತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚನ್ನಪ್ಪ, ರಂಗಾಯಣ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ ಇತರರು ಇದ್ದರು.
ಗಮನ ಸೆಳೆದ ಕಪ್ಪೆ ಚಿಪ್ಪುಗಳು: ಸಾಂಸ್ಕೃತಿಕ ಉತ್ಸವದಲ್ಲಿ ರಾಧಾಮಲ್ಲಪ್ಪ ಅವರು ಕಪ್ಪೆ ಚಿಪ್ಪು ಹಾಗೂ ಶಂಖದಿಂದ ತಯಾರಿಸಿದ ವಿವಿಧ ಕಲಾಕೃತಿಗಳು ಗಮನ ಸೆಳೆಯಿತು.
ನಗರದ ಕೃಷಿಕಲಾ ಸಂಸ್ಥೆಯಿಂದ ಸೋರೆಕಾಯಿ ಕಲೆ, ಆಶಾಪ್ರಸಾದ್‌ರಿಂದ ಸಾಂಪ್ರದಾಯಿಕ ಕಲೆ ಹಾಗೂ ರವಿವರ್ಮ ಕಲಾ ಕಾಲೇಜಿನ ಸಿರಿ ತಂಡದಿಂದ ಚಿತ್ರಕಲೆ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.