More

  ಅಕಾಡೆಮಿ, ಪ್ರಾಧಿಕಾರ ಅಧ್ಯಕ್ಷರ ಪದಗ್ರಹಣ ಜೂ. 13ಕ್ಕೆ

  ಪಂಕಜ ಕೆ.ಎಂ. ಬೆಂಗಳೂರು

  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ಸರ್ಕಾರ ನೇಮಕ ಮಾಡಿರುವ ಅಧ್ಯಕ್ಷರು ಜೂನ್ 13ರಂದು
  ಸಂಜೆ 3.30ಕ್ಕೆ ಕನ್ನಡ ಭವನದಲ್ಲಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಕಳೆದ 20 ತಿಂಗಳುಗಳಿಂದ ಕಳಾಹೀನಗೊಂಡಿದ್ದ ಸಾಂಸ್ಕೃತಿಕ ಕೇಂದ್ರಗಳ ಕಾರ್ಯಚಟುವಟಿಕೆಗಳು ಗರಿಗೆದರಲಿವೆ.

  ಕಾಂಗ್ರೆಸ್ ಸರ್ಕಾರ ಅಧಿಕಾರ ವಹಿಸಿಕೊಂಡಾಗಲೇ ಈ ಕಾರ್ಯ ಆಗಬೇಕಿತ್ತು. ಆದರೆ ನಾನಾ ಕಾರಣಗಳಿಂದ ಅಧ್ಯಕ್ಷರ ನೇಮಕ ಪ್ರಕ್ರಿಯೆಯಲ್ಲಿ ವಿಳಂಬವಾಯಿತು. ಅಂತಿಮವಾಗಿ ಸರ್ಕಾರ ಕಳೆದ ಮಾರ್ಚ್ 16ರಂದು ಅಧ್ಯಕ್ಷರ ಪಟ್ಟಿ ಪ್ರಕಟಿಸಿತು. ಅದೇ ದಿನ ಲೋಕಸಭೆ ಚುನಾವಣೆ ದಿನಾಂಕ ೋಷಣೆಯಾಗಿ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಅಧಿಕಾರ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಈಗ ನೀತಿ ಸಂಹಿತೆ ತೆರವಾಗಿದ್ದು, ನಾಟಕ, ಲಲಿತಕಲೆ, ಜಾನಪದ ಸೇರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ 13 ಅಕಾಡೆಮಿಗಳು, ನಾಲ್ಕು ಪ್ರಾಧಿಕಾರಗಳು ಹಾಗೂ ರಂಗಸಮಾಜಕ್ಕೆ ನೇಮಕಗೊಂಡಿರುವ ಅಧ್ಯಕ್ಷರು ಹಾಗೂ ಸದಸ್ಯರು ಅಧಿಕಾರ ಸ್ವೀಕರಿಸಲಿದ್ದಾರೆ.

  ಕಾರ್ಯಚಟುವಟಿಕೆಗಳಿಗೆ ಹಿನ್ನಡೆ: ಕಳೆದ 20 ತಿಂಗಳುಗಳಿಂದ ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ಹೊಸ ಕಾರ್ಯಕಾರಿ ಸಮಿತಿ ರಚನೆಯಾಗಿಲ್ಲ. ಇದರಿಂದಾಗಿ ಸಾಂಸ್ಕೃತಿಕ ಕೇಂದ್ರಗಳ ವಾರ್ಷಿಕ ಕಾರ್ಯಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದೆ. 2022ರ ಅಕ್ಟೋಬರ್‌ನಲ್ಲಿ ಹಿಂದಿನ ಕಾರ್ಯಕಾರಿ ಸಮಿತಿ ಅಧಿಕಾರವಧಿ ಮುಕ್ತಾಯಗೊಂಡಿತ್ತು. ಆಗ 2023ರ ವಿಧಾನಸಭೆ ಚುನಾವಣೆಗೆ 5-6 ತಿಂಗಳ ಅವಧಿ ಇತ್ತು. ಹಾಗಾಗಿ ಹಾಲಿ ಕಾರ್ಯಕಾರಿ ಸಮಿತಿ ಅಧಿಕಾರಾವಧಿ ವಿಸ್ತರಿಸುವ ನಿರೀಕ್ಷೆಯನ್ನು ಅಕಾಡೆಮಿಗಳ ಅಧ್ಯಕ್ಷರು ಹೊಂದಿದ್ದರು. ಕೋವಿಡ್‌ನಿಂದ ಸ್ಥಗಿತಗೊಂಡಿದ್ದ ಕಾರ್ಯಚಟುವಟಿಕೆ ಪೂರ್ಣಗೊಳಿಸಲು ಅಧಿಕಾರವಧಿ ವಿಸ್ತರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಆದರೆ, ಸರ್ಕಾರ ಇಲಾಖೆಯ ಜಂಟಿ ನಿರ್ದೇಶಕರನ್ನು ಆಡಳಿತಾಧಿಕಾರಿಗಳನ್ನಾಗಿ ನೇಮಿಸಿ, ಆದೇಶ ಹೊರಡಿಸಿತ್ತು. ಬಳಿಕ ವಿಧಾನಸಭೆ ಚುನಾವಣೆ ನಡೆದು ಹೊಸ ಸರ್ಕಾರ ರಚನೆಯಾದರೂ ಅಧ್ಯಕ್ಷರ ನೇಮಕ ಮಾಡಲು ಹತ್ತು ತಿಂಗಳು ತೆಗೆದುಕೊಂಡಿತು. ಸರ್ಕಾರದ ಈ ವಿಳಂಬ ಧೋರಣೆಗೆ ಸಾಂಸ್ಕೃತಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿತ್ತು.

  See also  ಬಿಗ್​ಬಾಸ್ 8​ ಅದ್ಧೂರಿ ಆರಂಭ; ಸ್ಪರ್ಧಿಗಳ ಗ್ರ್ಯಾಂಡ್​ ಎಂಟ್ರಿ ಸ್ಟಾರ್ಟ್​

  ಮೂರು ವರ್ಷಗಳಿಂದ ಚಟುವಟಿಕೆಗಳಿಲ್ಲ: 2020ರ ಮಾರ್ಚ್ ನಂತರ ಕೋವಿಡ್ ಕಾರಣದಿಂದಾಗಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿತ್ತು. ಇದರಿಂದಾಗಿ ಅಕಾಡೆಮಿಗಳ ಕಾರ್ಯಯೋಜನೆಗಳೂ ಅನುಷ್ಠಾನಗೊಳ್ಳಲಿಲ್ಲ. ಇಲಾಖೆಯೂ ವಾರ್ಷಿಕ ಅನುದಾನವನ್ನು ಅರ್ಧದಷ್ಟು ಕಡಿತ ಮಾಡಿತ್ತು. ಸಾಹಿತ್ಯ ಸೇರಿ ಕೆಲ ಅಕಾಡೆಮಿಗಳು ಆನ್‌ಲೈನ್ ವೇದಿಕೆಯ ಮೂಲಕ ವಿಚಾರಸಂಕಿರಣದಂತಹ ಕಾರ್ಯಕ್ರಮ ನಡೆಸಿದ್ದವು. ಕೋವಿಡ್ ಪ್ರಕರಣಗಳ ಇಳಿಕೆಯಿಂದಾಗಿ 2022ರ ಮಾರ್ಚ್ ಬಳಿಕ ವಾರ್ಷಿಕ ಪ್ರಶಸ್ತಿ ಪ್ರದಾನದಂತಹ ಸಮಾರಂಭಗಳನ್ನು ಮಾತ್ರ ಅಕಾಡೆಮಿಗಳು ನಡೆಸಿವೆ. ನಂತರದಲ್ಲಿ ಅಧ್ಯಕ್ಷರ ಅಧಿಕಾರವಧಿಯೇ ಪೂರ್ಣಗೊಂಡಿತು. ಬಳಿಕ ಹೊಸ ಕಾರ್ಯಕಾರಿ ಸಮಿತಿ ರಚನೆ ವಿಳಂಬವಾಯಿತು. ಈ ಎಲ್ಲ ಕಾರಣಗಳಿಂದಾಗಿ ಮೂರು ವರ್ಷಗಳಿಂದ ಅಕಾಡೆಮಿಗಳಲ್ಲಿ ಚಟುವಟಿಕೆಗಳು ನಡೆದಿಲ್ಲ.

  ಕೋಟ್
  ಲೋಕಸಭೆ ಚುನಾವಣೆ ನೀತಿ ಸಂಹಿತೆಯಿಂದಾಗಿ ಅಕಾಡೆಮಿಗಳು ಹಾಗೂ ಪ್ರಾಧಿಕಾರಗಳಿಗೆ ಅಧ್ಯಕ್ಷರು ಅಧಿಕಾರ ಸ್ವೀಕರಿಸಲು ಸಾಧ್ಯವಾಗಲಿಲ್ಲ. ಇದೀಗ ನೀತಿ ಸಂಹಿತೆ ತೆರವಾಗಿರುವುದರಿಂದ ಜೂ. 13ರಂದು ಅಧಿಕಾರ ಸ್ವೀಕರಿಸಲಿದ್ದೇವೆ.
  ಕೆ.ವಿ. ನಾಗರಾಜ ಮೂರ್ತಿ, ನಿಯೋಜಿತ ಅಧ್ಯಕ್ಷರು, ಕರ್ನಾಟಕ ನಾಟಕ ಅಕಾಡೆಮಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts