ಮೀಟೂ ಅನುಭವ ಆಗಿಲ್ಲ

ಕುಂದಾಪುರ: ಸಿನಿಮಾ ಜೀವನದಲ್ಲಿ ಇದುವರೆಗೂ ತನಗೆ ಮೀಟೂ ಸೇರಿದಂತೆ ಅಂತಹ ಯಾವುದೇ ಕೆಟ್ಟ ಅನುಭವವಾಗಿಲ್ಲ. ಸಿನಿಮಾ ಜೀವನದಲ್ಲಿ ಅಂತಹ ಘಟನೆ ಸಂಭವಿಸಿದ್ದರೆ ಅಲ್ಲಿಯೇ ತಕ್ಕ ಉತ್ತರ ನೀಡುತ್ತಿದ್ದೆ ಎಂದು ಮಾಜಿ ಸಚಿವೆ, ಹಿರಿಯ ನಟಿ ಉಮಾಶ್ರೀ ಹೇಳಿದ್ದಾರೆ.

ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಶನಿವಾರ ಕುಟುಂಬ ಸಮೇತರಾಗಿ ದೇವರ ದರ್ಶನ ಪಡೆದ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ಮಹಿಳೆಯರಿಗೆ ಅವರು ದುಡಿಯುವ ಕ್ಷೇತ್ರ, ಮನೆ ಸೇರಿದಂತೆ ಎಲ್ಲಾದರೂ ಸಮಸ್ಯೆಗಳಾಗಿದ್ದರೆ ದೈಹಿಕ ಕಿರುಕುಳಗಳು ಘಟಿಸಿದ್ದರೆ ಅಂತಹ ಅನುಭವ ವ್ಯಕ್ತಪಡಿಸಲು ಈ ಮೀಟೂ ಅಭಿಯಾನ ಆರಂಭವಾಗಿದೆ. ಹಿಂದೆ ಇಂಥ ಸೂಕ್ತ ವೇದಿಕೆ ಇರಲಿಲ್ಲ ಎಂದರು.

ಇನ್ನೊಬ್ಬರನ್ನು ಅವಮಾನಿಸುವ ಮತ್ತು ತೇಜೋವಧೆ ಮಾಡುವ ಉದ್ದೇಶ ಈ ಅಭಿಯಾನದ್ದಲ್ಲ. ಈ ಅಭಿಯಾನ ದಾರಿ ತಪ್ಪದೆ ಸೂಕ್ತ ರೀತಿಯಲ್ಲಿ ಉಪಯೋಗವಾಗಬೇಕು ಎಂದ ಅವರು, ಅರ್ಜುನ್ ಸರ್ಜಾ ಪ್ರಕರಣ ಸದ್ಯ ನ್ಯಾಯಾಲಯ ಮೆಟ್ಟಿಲೇರಿರುವ ಕಾರಣ ಆ ಬಗ್ಗೆ ತಾನು ಪ್ರತಿಕ್ರಿಯಿಸಲ್ಲ ಎಂದರು.
ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಕೆ.ಸೂರ್ಯನಾರಾಯಣ ಉಪಾಧ್ಯಾಯ ಉಮಾಶ್ರಿ ಅವರನ್ನು ಬರಮಾಡಿಕೊಂಡರು. ಕೋಟ ಪಂಚವರ್ಣ ಯುವಕ ಮಂಡಲ ಸಲಹೆಗಾರ ದಿನೇಶ ಗಾಣಿಗ, ಕ್ರೀಡಾ ಕಾರ್ಯದರ್ಶಿ ಸುರೇಶ ಗಿಳಿಯಾರ್ ಮೊದಲಾದವರು ಇದ್ದರು.

ವ್ಯಕ್ತಿಗತ ನಿಂದನೆ ಸಲ್ಲ: ಯಾವುದೇ ಪಕ್ಷದಲ್ಲಿದ್ದರೂ ಯಾರನ್ನೂ ವ್ಯಕ್ತಿಗತವಾಗಿ ನಿಂದಿಸಬಾರದು. ಅವರ ಸ್ಥಾನಕ್ಕೆ ನಾವು ಗೌರವ ಕೊಡಬೇಕಿದೆ. ರಮ್ಯಾ ಯಾವ ಉದ್ದೇಶದಿಂದ ಹೇಳಿದ್ದಾರೋ ಗೊತ್ತಿಲ್ಲ, ಅದಕ್ಕೆ ಅವರೇ ಉತ್ತರ ನೀಡಬೇಕಿದೆ ಎಂದು ಪ್ರಧಾನಿಯನ್ನು ಟೀಕಿಸಿ ರಮ್ಯಾ ಟ್ವೀಟ್ ಮಾಡಿರುವುದಕ್ಕೆ ಉಮಾಶ್ರೀ ಪ್ರತಿಕ್ರಿಯಿಸಿದರು. ಉಪಚುನಾವಣೆ ಐದೂ ಕ್ಷೇತ್ರಗಳಲ್ಲೂ ಮೈತ್ರಿಕೂಟಕ್ಕೆ ಜಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.