More

    ಕಾಲಿವುಡ್​ನಲ್ಲಿ ಹರ್ಷಿಕಾ ಝುಲಕ್: ಚೊಚ್ಚಲ ಸಿನಿಮಾ ಫೆ. 28ಕ್ಕೆ ಬಿಡುಗಡೆ

    ಬೆಂಗಳೂರು: ಸ್ಯಾಂಡಲ್​ವುಡ್​ನ ನಟಿ ಹರ್ಷಿಕಾ ಪೂಣಚ್ಚ ತಮಿಳು ಚಿತ್ರರಂಗಕ್ಕೂ ಪ್ರವೇಶಿಸಿದ್ದು, ಅವರ ಅಭಿನಯದ ಮೊದಲ ತಮಿಳು ಸಿನಿಮಾ ‘ಉನ್ ಕಾದಲ್ ಇರುಂದಾಳ್’ ಫೆ. 28ಕ್ಕೆ ಬಿಡುಗಡೆ ಆಗಲಿದೆ. ಈ ಮೂಲಕ ಚತುರ್ಭಾಷಾ ತಾರೆಯಾದ ಹರುಷದಲ್ಲಿದ್ದಾರೆ ಹರ್ಷಿಕಾ.

    ‘ಜೆಮಿನಿ’ ಸಂಸ್ಥೆ ಮೂಲಕ ‘ಮರಿಕರ್ ಆರ್ಟ್ಸ್’ ಬ್ಯಾನರ್​ನಲ್ಲಿ ನಿರ್ದೇಶಕ ಹಾಶಿಮ್ ಮರಿಕರ್ ಆಕ್ಷನ್-ಕಟ್ ಹೇಳಿರುವ ‘ಉನ್ ಕಾದಲ್ ಇರುಂದಾಳ್’ ಚಿತ್ರದಲ್ಲಿ ಖ್ಯಾತ ನಟ ದುಲ್ಖರ್ ಸಲ್ಮಾನ್ ಸಹೋದರ ಮಖ್​ಬೂಲ್ ಸಲ್ಮಾನ್​ಗೆ ನಾಯಕಿ ಆಗಿ ಹರ್ಷಿಕಾ ಅಭಿನಯಿಸಿದ್ದಾರೆ.

    ‘ಈ ಸಿನಿಮಾದಲ್ಲಿ ನಾನು ಕಾಲೇಜು ವಿದ್ಯಾರ್ಥಿನಿಯಾಗಿ ಅಭಿನಯಿಸಿದ್ದೇನೆ. ತುಂಬ ಚೂಟಿಯಾದ ಪಾತ್ರ ನನ್ನದು. ಕಾಲೇಜ್​ಗೆ ಬೈಕ್​ನಲ್ಲೇ ಬರುತ್ತೇನೆ, ಲಂಗ ದಾವಣಿ ಕೂಡ ಧರಿಸುತ್ತೇನೆ’ ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಳ್ಳುತ್ತಾರೆ ಹರ್ಷಿಕಾ.

    ‘ಇದು ಬಹುತಾರಾಗಣದ ಸಿನಿಮಾ. ಮತ್ತೊಂದು ಜೋಡಿಯಾಗಿ ಶ್ರೀಕಾಂತ್ ಹಾಗೂ ಚಂದ್ರಿಕಾ ರವಿ ನಟಿಸಿದ್ದಾರೆ. ಶ್ರೀಕಾಂತ್ ಹಾಗೂ ಚಂದ್ರಿಕಾ ಈ ಸಿನಿಮಾದೊಳಗಿನ ಸಿನಿಮಾದಲ್ಲಿ ನಿರ್ದೇಶಕ ಹಾಗೂ ಹೀರೋಯಿನ್ ಆಗಿ ಕಾಣಿಸಿಕೊಳ್ಳುತ್ತಾರೆ. ಆ ಸಿನಿಮಾದಿಂದ ನಮ್ಮೆಲ್ಲರ ಮೇಲೆ ಏನು ಪರಿಣಾಮ ಆಗುತ್ತದೆ ಎಂಬುದೇ ಈ ಸಿನಿಮಾದ ಕಥಾಹಂದರ’ ಎಂದು ಹರ್ಷಿಕಾ ಸಿನಿಮಾ ಕುರಿತು ಮಾಹಿತಿ ನೀಡಿದರು.

    ಇನ್ನು ಇದೇ ಮೊದಲ ಸಲ ನಾಯಕಿಯಾಗಿ ತಮಿಳು ಚಿತ್ರರಂಗದಿಂದಲೂ ಹೊರಹೊಮ್ಮುತ್ತಿರುವ ಬಗ್ಗೆ ಅವರಿಗೆ ಖುಷಿ ಹಾಗೂ ಬೇಸರ ಒಟ್ಟೊಟ್ಟಿಗೇ ಆಗುತ್ತಿದೆಯಂತೆ. ‘ನಾನು ಈ ಸಿನಿಮಾದ ಶೂಟಿಂಗ್​ಗೆ ಹೋಗುವಾಗೆಲ್ಲ ತಂದೆ ಜತೆಗೇ ಬರುತ್ತಿದ್ದರು. ನನ್ನ ಅಭಿನಯ ನೋಡಿ, ನಿನಗೆ ತಮಿಳು ಚಿತ್ರರಂಗದಲ್ಲಿ ಒಳ್ಳೆಯ ಭವಿಷ್ಯವಿದೆ ಎಂದು ಮೆಚ್ಚುಗೆಯನ್ನೂ ಸೂಚಿಸಿದ್ದರು. ಆದರೆ ಚಿತ್ರದ ಬಿಡುಗಡೆ ಸಮಯದಲ್ಲಿ ಅವರಿಲ್ಲ ಎಂಬ ನೋವು ಕಾಡುತ್ತಿದೆ. ಮೂರು ತಿಂಗಳ ಹಿಂದೆ ಅವರು ನಮ್ಮನ್ನೆಲ್ಲ ಅಗಲಿದರು’ ಎಂದು ಸಂತಸದ ನಡುವೆ ಬೇಸರವನ್ನೂ ವ್ಯಕ್ತಪಡಿಸಿದರು.

    ಸ್ಯಾಂಡಲ್​ವುಡ್​ನಲ್ಲೂ ಸದ್ಯಕ್ಕೆ ಬಿಜಿಯಾಗಿರುವ ಹರ್ಷಿಕಾ ಮೂರು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅರವಿಂದ್ ನಿರ್ದೇಶನದ ‘ರೆಡಿ’ ಸಿನಿಮಾದ ಶೂಟಿಂಗ್ ಬಹುತೇಕ ಮುಗಿದಿದ್ದು, ಹಾಡಿನ ಚಿತ್ರೀಕರಣ ಆಗಬೇಕಿದೆ. ಜತೆಗೆ ಶರಣ್ ನಿರ್ದೇಶನದ ‘ಓಂ ಪ್ರೇಮ’, ಜಯಸಿಂಹ ನಿರ್ದೇಶನದ ‘ಮಾರ್ಗರೇಟ್: ಲವರ್ ಆಫ್ ರಾಮಾಚಾರಿ’ ಚಿತ್ರಗಳಿಗೂ ಹರ್ಷಿಕಾ ನಾಯಕಿಯಾಗಿ ಆಯ್ಕೆ ಆಗಿದ್ದು, ಇನ್ನಷ್ಟೇ ಶೂಟಿಂಗ್ ಶುರುವಾಗಬೇಕಿದೆ.

    ನಾನು ಕನ್ನಡದ ಜತೆಗೆ ಈಗಾಗಲೇ ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಇದೀಗ ನನ್ನ ಅಭಿನಯದ ಪ್ರಥಮ ತಮಿಳು ಸಿನಿಮಾ ಬಿಡುಗಡೆಗೆ ಸಜ್ಜಾಗುವ ಮೂಲಕ ಚತುರ್ಭಾಷಾ ತಾರೆ ಎನಿಸಿಕೊಂಡಿದ್ದೇನೆ.

    | ಹರ್ಷಿಕಾ ಪೂಣಚ್ಚ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts