ನನ್ನನ್ನು ಬ್ಯಾನ್ ಮಾಡಿ!

ಒಂದಿಲ್ಲೊಂದು ಕಾರಣಕ್ಕೆ ವಿವಾದಕ್ಕೆ ಗುರಿಯಾಗುತ್ತಲೇ ಇರುತ್ತಾರೆ ನಟಿ ಕಂಗನಾ ರಣಾವತ್. ಶೀಘ್ರದಲ್ಲೇ ಬಿಡುಗಡೆ ಆಗಲಿರುವ ‘ಜಜ್​ವೆುಂಟಲ್ ಹೈ ಕ್ಯಾ’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಕೆಲವು ಪತ್ರಕರ್ತರ ಜತೆ ಕಂಗನಾ ಕಿರಿಕ್ ಮಾಡಿಕೊಂಡರು. ಸ್ವಾತಂತ್ರ್ಯ ಹೋರಾಟಗಾರ್ತಿ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಜೀವನಾಧಾರಿತ ‘ಮಣಿಕರ್ಣಿಕಾ’ ಚಿತ್ರ ಬಿಡುಗಡೆಯಾದಾಗ ಕಂಗನಾ ವಿರುದ್ಧ ಕೆಲವು ಪತ್ರಕರ್ತರು ಅಪಪ್ರಚಾರ ನಡೆಸಿದ್ದರಂತೆ. ಈ ವಿಚಾರವಾಗಿಯೇ ‘ಜಡ್ಜ್​ಮೆಂಟಲ್ ಹೈ ಕ್ಯಾ’ ಸುದ್ದಿಗೋಷ್ಠಿಯಲ್ಲಿ ಮಾತಿಗೆ ಮಾತು ಬೆಳೆಯಿತು. ಅದನ್ನು ಖಂಡಿಸಿದ ಕೆಲವು ಪತ್ರಕರ್ತರು, ‘ಕಂಗನಾ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಅವರನ್ನು ಬ್ಯಾನ್ ಮಾಡುತ್ತೇವೆ’ ಎಂಬುದಾಗಿ ಬೆದರಿಕೆ ಒಡ್ಡಿದರು. ಆದರೆ ಅದಕ್ಕೆಲ್ಲ ಬಗ್ಗದ ಕಂಗನಾ, ‘ನಾನು ಕ್ಷಮೆ ಕೇಳುವುದಿಲ್ಲ. ದಯವಿಟ್ಟು ನನ್ನನ್ನು ಬ್ಯಾನ್ ಮಾಡಿ. ನನ್ನಿಂದ ನಿಮ್ಮ ಮನೆಯ ಊಟಕ್ಕೆ ತೊಂದರೆಯಾಗುವುದು ನನಗೆ ಇಷ್ಟವಿಲ್ಲ’ ಎಂದು ಖಡಕ್ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಒಂದು ವಿಡಿಯೋ ಮೂಲಕ ವಿವರವಾಗಿ ಮಾತನಾಡಿರುವ ಅವರು ನಡೆದ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ‘ನನ್ನ ಬೆಳವಣಿಗೆಯಲ್ಲಿ ಮಾಧ್ಯಮದ ಪಾತ್ರ ದೊಡ್ಡದಿದೆ. ಆದರೆ ಮಾಧ್ಯಮದಲ್ಲಿ ಒಳ್ಳೆಯವರ ರೀತಿ ಕೆಟ್ಟವರೂ ಇದ್ದಾರೆ. ದೇಶದ ಏಕತೆ, ಗೌರವಕ್ಕೆ ಧಕ್ಕೆ ತರುವ ಕೆಲಸವನ್ನೇ ಮಾಡಿಕೊಂಡು ಕೆಲವು ನಕಲಿ ಪತ್ರಕರ್ತರು ಬದುಕುತ್ತಿದ್ದಾರೆ. ಪ್ಲಾಸ್ಟಿಕ್ ಬಳಕೆ ಹಾಗೂ ಗೋಹತ್ಯೆ ವಿರುದ್ಧ ನಾನು ಮಾಡಿದ ಆಂದೋಲನವನ್ನು ಅಪಹಾಸ್ಯ ಮಾಡುವವರು ಇದ್ದಾರೆ. ಅಂಥ ದೇಶವಿರೋಧಿಗಳನ್ನು ನಾನು ಕಿಂಚಿತ್ತೂ ಸಹಿಸುವುದಿಲ್ಲ. ನಿಮ್ಮಂಥವರು ನನ್ನನ್ನು ಏನೂ ಮಾಡಿಕೊಳ್ಳಲು ಸಾಧ್ಯವಿಲ್ಲ’ ಎಂದು ಕಟುವಾಗಿಯೇ ನುಡಿದಿದ್ದಾರೆ ಕಂಗನಾ. ಅಲ್ಲದೆ, ತಮ್ಮ ವಿರುದ್ಧ ಬ್ಯಾನ್ ಬೆದರಿಕೆ ಹಾಕಿರುವ ‘ಮನರಂಜನಾ ಪತ್ರಕರ್ತರ ಒಕ್ಕೂಟ’ಕ್ಕೆ ಮಾನ್ಯತೆಯೇ ಇಲ್ಲ ಎಂದಿದ್ದಾರೆ. -ಏಜೆನ್ಸೀಸ್

Leave a Reply

Your email address will not be published. Required fields are marked *