ಕಾನ್​ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲು ಕಂಗನಾ 10 ದಿನದಲ್ಲಿ 5 ಕೆ.ಜಿ. ತೂಕ ಇಳಿಸಿಕೊಂಡಿದ್ದು ಹೇಗೆ ಗೊತ್ತಾ?

ಮುಂಬೈ: ಫ್ರಾನ್ಸ್​ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾನ್ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲೆಂದೇ ಬಾಲಿವುಡ್​ ನಟಿ ಕಂಗನಾ ರಣಾವತ್​ ಅವರು ಕೇವಲ 10 ದಿನಗಳಲ್ಲಿ 5 ಕೆ.ಜಿ. ತೂಕ ಇಳಿಸಿಕೊಂಡಿದ್ದಾರೆ.

ಕಾನ್ ಚಿತ್ರೋತ್ಸವದಲ್ಲಿ ಸೆಲೆಬ್ರಿಟಿಗಳ ರೆಡ್ ಕಾರ್ಪೆಟ್ ನಡಿಗೆ ಕೂಡ ಕೇಂದ್ರ ಬಿಂದು ಆಗಿರುತ್ತದೆ. ಹಲವು ದೇಶಗಳಿಂದ ಬಂದ ನಟ-ನಟಿಯರು ಪ್ರತಿ ದಿನ ಕೆಂಪು ಹಾಸಿನ ಮೇಲೆ ಹೆಜ್ಜೆ ಹಾಕಿ, ಮಾಧ್ಯಮದ ಕ್ಯಾಮರಾಗಳಿಗೆ ಪೋಸ್ ನೀಡುವುದು ವಾಡಿಕೆ. ಯಾರು, ಯಾವ ರೀತಿಯ ಕಾಸ್ಟ್ಯೂಮ್​ನಲ್ಲಿ ಕಂಗೊಳಿಸುತ್ತಾರೆ ಎಂಬ ಕೌತುಕ ಪ್ರತಿ ಬಾರಿಯೂ ಮನೆ ಮಾಡಿರುತ್ತದೆ. ಹಾಗಾಗಿ ಈ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುವ ಸಲುವಾಗಿಯೇ ನಟ-ನಟಿಯರು ವಿಶೇಷವಾಗಿ ಸಿದ್ಧತೆ ನಡೆಸುತ್ತಾರೆ. ಅದರಂತೆಯೇ ಕಂಗನಾ ರಣಾವತ್​ ಸಹ ತೂಕ ಇಳಿಸಿಕೊಂಡು ರೆಡ್​ ಕಾರ್ಪೆಟ್​ ಮೇಲೆ ಹೆಜ್ಜೆಹಾಕಲು ಸಿದ್ಧವಾಗಿದ್ದಾರೆ.

ಕಂಗನಾ ರಣಾವತ್​ ಕಬಡ್ಡಿ ಆಟಗಾರ್ತಿ ಅಶ್ವಿನಿ ಅಯ್ಯರ್​ ಜೀವನಾಧಾರಿತ ಪಂಗಾ ಚಿತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ದರು. ಆದರೆ, ಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲು ಅವರು 5 ಕೆ.ಜಿ. ತೂಕ ಇಳಿಸಿಕೊಂಡಿದ್ದಾರೆ ಎಂದು ಅವರ ಟ್ರೈನರ್​ ಯೋಗೇಶ್​ ಭತೀಜಾ ತಿಳಿಸಿದ್ದಾರೆ.

ಕಂಗನಾ ರಣಾವತ್​ ಅವರು ಪಂಗಾ ಚಿತ್ರದ ಚಿತ್ರೀಕರಣಕ್ಕಾಗಿ 10-11 ಗಂಟೆ ಮೀಸಲಿರಿಸಿದ್ದರು. ಅದರ ನಡುವೆಯೂ ಅವರು ಪ್ರತಿ ದಿನ 2 ಬಾರಿ ಕಟ್ಟುನಿಟ್ಟಿನ ವ್ಯಾಯಾಮ ಮಾಡುತ್ತಿದ್ದರು. ಅದರ ಜತೆಯಲ್ಲೇ ಕ್ಯಾಲೊರಿ ಕಡಿಮೆ ಇರುವ ಆಹಾರ ತೆಗೆದುಕೊಳ್ಳುತ್ತಿದ್ದರು. ಅವರು ಕಟ್ಟುನಿಟ್ಟಾಗಿ ಡಯಟ್​ ಮತ್ತು ವ್ಯಾಯಾಮ ಮಾಡಿದ್ದರಿಂದ ಕೇವಲ 10 ದಿನಗಳಲ್ಲಿ 5 ಕೆ.ಜಿ. ತೂಕ ಇಳಿಸಲು ಸಾಧ್ಯವಾಯಿತು ಎಂದು ಭತೀಜಾ ತಿಳಿಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *