ಸೋನಮ್​ ವಿರುದ್ಧ ಕಂಗನಾ ಕಿಡಿ ಕಾರಿದ್ದೇಕೆ?

ನವದೆಹಲಿ: ಇತ್ತೀಚೆಗೆ ಕ್ವೀನ್​ ಚಿತ್ರದ ನಿರ್ದೇಶಕ ವಿಕಾಸ್​ ಬಾಲ್​ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದ ಬಾಲಿವುಡ್​ ನಟಿ ಕಂಗನಾ ರಣಾವತ್​ ಸದ್ಯ ನಟಿ ಸೋನಮ್​ ಕಪೂರ್​ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಹೌದು, ಕಳೆದ ವಾರವಷ್ಟೆ ಬೆಂಗಳೂರಿನಲ್ಲಿ ನಡೆದ ವೋಗ್​ ಕಾರ್ಯಕ್ರಮದಲ್ಲಿ ಸೋನಮ್​, “ಕಂಗನಾರನ್ನು ನಂಬುವುದು ತುಸು ಕಷ್ಟ” ಎಂದಿದ್ದರು. ಸೋನಮ್​ ಮಾತಿಗೆ ಕೋಪಗೊಂಡಿರುವ 31 ವರ್ಷದ ನಟಿ ಆಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

“ಕಂಗನಾಳನ್ನು ನಂಬಲು ಕಷ್ಟ ಎಂದು ಹೇಳಿರುವುದರಲ್ಲಿರುವ ಅರ್ಥವೇನು? ನಾನು ನನ್ನ ‘ಮಿಟೂ’ (#MeToo) ಕತೆಯನ್ನು ಹೇಳಿಕೊಂಡಿದ್ದೇನೆ. ಅದನ್ನು ಜಡ್ಜ್​ ಮಾಡಲು ಸೋನಮ್​ಗೆ ಹಕ್ಕು ನೀಡಿದ್ದು ಯಾರು? ಸೋನಮ್ ಕಪೂರ್ ಕೆಲವು ಮಹಿಳೆಯರನ್ನು ಮಾತ್ರ ನಂಬುವ ಪರವಾನಗಿಯನ್ನು ಹೊಂದಿದ್ದಾರೆ. ಕೆಲವರನ್ನು ನಂಬುವುದಿಲ್ಲ” ಎಂದಿದ್ದಾರೆ.

“ನನ್ನ ತಂದೆ ಹೆಸರಿನಿಂದ ನಾನು ಖ್ಯಾತಿ ಗಳಿಸಿಲ್ಲ. ದಶಕಗಳ ಕಾಲ ಶ್ರಮಪಟ್ಟು ಈ ಸ್ಥಾನಕ್ಕೇರಿದ್ದೇನೆ. ಅನೇಕ ಸಮಾವೇಶಗಳಲ್ಲಿ ನನ್ನ ದೇಶವನ್ನು ಪ್ರತಿನಿಧಿಸಿದ್ದೇನೆ. ನಾನು ಚಿಂತಕಿ ಮತ್ತು ಯುವಜನರ ಮೇಲೆ ಪ್ರಭಾವ ಬೀರುತ್ತೇನೆ ಎಂಬ ಕಾರಣಕ್ಕೆ ನನ್ನನ್ನು ಈ ಸಮಾವೇಶಗಳಿಗೆ ಆಹ್ವಾನಿಸಿದ್ದಾರೆ” ಎಂದು ರಾಷ್ಟ್ರ ಪ್ರಶಸ್ತಿ ವಿಜೇತೆ ಹೇಳಿಕೊಂಡಿದ್ದಾರೆ.

ಸೋನಮ್ ಕಪೂರ್​ ಉತ್ತಮ ನಟಿ ಎಂದು ಹೆಸರು ಮಾಡಿಲ್ಲ. ಹಾಗೇ ಉತ್ತಮ ಸ್ಪೀಕರ್​ ಎಂದೂ ಗುರುತಿಸಿಕೊಂಡಿಲ್ಲ. ಇಂಥ ಸಿನಿಮಾ ಜನರು ನನ್ನ ಬಗ್ಗೆ ಕೆದಕುವುದಕ್ಕೆ ಯಾವ ಹಕ್ಕಿದೆ ಎಂದು ಪ್ರಶ್ನಿಸಿದ್ದಾರೆ. (ಏಜೆನ್ಸೀಸ್​)