ಕಂಡ್ಲೂರು ಶಾಲೆಗೆ ಕಾಯಕಲ್ಪ

ಶ್ರೀಪತಿ ಹೆಗಡೆ ಹಕ್ಲಾಡಿ ಕಂಡ್ಲೂರು

ನಮ್ಮ ಊರು… ನಾವು ಕಲಿತ ಶಾಲೆ ಎಂಬ ಅಭಿಮಾನ ಇದ್ದರೆ ಮುಚ್ಚುವ ಹಂತಕ್ಕೆ ಬಂದ ಸರ್ಕಾರಿ ಶಾಲೆ ಉಳಿಸಿಕೊಳ್ಳಬಹುದು. ಮಹಿಳೆ ಮನಸ್ಸು ಮಾಡಿದರೆ ಶಾಲೆಗೂ ಕಾಯಕಲ್ಪ ನೀಡಲು ಸಾಧ್ಯ ಎಂಬುದಕ್ಕೆ ಶತಮಾನ ಪೂರೈಸಿದ ಕಂಡ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಕ್ಷಿ.

135 ವರ್ಷ ಇತಿಹಾಸವಿರುವ ಶಾಲೆಯಲ್ಲಿ 14 ಮಕ್ಕಳಿದ್ದರು. ಅಲ್ಲಿನ ಹಳೇ ವಿದ್ಯಾರ್ಥಿಗಳು, ಮಹಿಳಾ ಸಂಘಟನೆ ಸದಸ್ಯರು, ಶಾಲಾ ಅಭ್ಯುದಯ ಸಂಘ ಪ್ರಯತ್ನದಿಂದ ಶಾಲೆಯಲ್ಲೀಗ 60 ವಿದ್ಯಾರ್ಥಿಗಳ ಕಲರವ. ಎಲ್‌ಕೆಜಿ ಯುಕೆಜಿಯಲ್ಲೂ ಇಂಗ್ಲಿಷ್ ಬೋಧನೆ… ಸಿಸಿಟಿವಿ ಕ್ಯಾಮರಾ… 12 ಲಕ್ಷ ರೂ. ಖರ್ಚು ಮಾಡಿ ಉತ್ತಮ ವ್ಯವಸ್ಥೆ ಒದಗಿಸಲಾಗಿದೆ. ಶಾಲೆ ಉಳಿಸುವ ನಿಟ್ಟಿನಲ್ಲಿ ಸ್ಥಳೀಯ ಶ್ರೀರಾಮ ಯುವ ಸಂಘಟನೆ 50 ಸಾವಿರ ರೂ. ನಗದು, ಸಿಸಿಟಿವಿ ಕ್ಯಾಮರಾ, ಶಾಲೆ ಬೇಕಾದ ಪರಿಕರ ನೀಡಿದೆ. ಬೇಸಿಗೆ ರಜೆಯಲ್ಲಿ ಮಹಿಳೆಯರು, ಪುರುಷರು, ಹಳೇ ವಿದ್ಯಾರ್ಥಿಗಳು ಮನೆಮನೆಗೆ ಭೇಟಿ ನೀಡಿ ಶಾಲೆಗೆ ಸೇರುವಂತೆ ಪಾಲಕರ ಮನ ಒಲಿಸಿದ್ದಾರೆ. ಸ್ಥಳೀಯ ಮಕ್ಕಳನ್ನು ಶಾಲೆಗೆ ಕರೆತರಲು ಯಶಸ್ವಿಯಾಗಿದ್ದಾರೆ.

1884ರಲ್ಲಿ ಆರಂಭಗೊಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಂಡ್ಲೂರು (ಕನ್ನಡ) 1994ರಲ್ಲಿ ಶತಮಾನೋತ್ಸವ ಆಚರಿಸಿತು. ಹಿಂದೆ 800ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದರು. ಕಳೆದ ಶೈಕ್ಷಣಿಕ ಸಾಲಿನಲ್ಲಿ ನಾಲ್ವರು ಶಿಕ್ಷಕರು, 1ರಿಂದ 7ನೇ ತರಗತಿಯವರೆಗೆ 22 ಮಕ್ಕಳಿದ್ದು, 7ನೇ ತರಗತಿ ವಾರ್ಷಿಕ ಪರೀಕ್ಷೆ ಅನಂತರ ಮಕ್ಕಳ ಸಂಖ್ಯೆ 14ಕ್ಕೆ ಕುಸಿಯಿತು. ಈ ಶೈಕ್ಷಣಿಕ ವರ್ಷದಲ್ಲಿ 5ನೇ ತರಗತಿಗೆ 19 ಮಕ್ಕಳು ದಾಖಲಾಗಿದ್ದಾರೆ. ನಲಿಕಲಿ ಶಾಲೆಗೆ 32 ಮಕ್ಕಳು ದಾಖಲಾಗಿದ್ದು, ಮತ್ತಿಬ್ಬರು ಮಕ್ಕಳ ದಾಖಲಾತಿಗೆ ಸಿದ್ಧತೆ ನಡೆದಿದೆ.

ಹಳೇ ವಿದ್ಯಾರ್ಥಿಗಳ ಪ್ರಯತ್ನ: ವಿದ್ಯಾರ್ಥಿಗಳ ಕೊರತೆಯಿಂದ ಶಾಲೆಗೆ ಬೀಗ ಹಾಕಲು ಕ್ಷಣಗಣನೆ ಶುರುವಾಗಿದ್ದರಿಂದ ಎಚ್ಚೆತ್ತುಕೊಂಡ ಹಳೇ ವಿದ್ಯಾರ್ಥಿಗಳು ಸಭೆ ನಡೆಸಿ ಕನ್ನಡ ಶಾಲಾ ಅಭ್ಯುದಯ ಎಂಬ ಸಮಿತಿ ರಚಿಸಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಆಕರ್ಷಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳ ಅನುಷ್ಠಾನಕ್ಕೆ ತಯಾರಿ ನಡೆಸಿದರು. ಕೆಲವರು ಆರ್ಥಿಕ ಸಹಾಯಕ್ಕೆ ಮುಂದಾಗಿದ್ದು, ಸಮಿತಿ ಕೂಡ ಶಾಲೆಯ ಭೌತಿಕ ಹಾಗೂ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಹಲವು ಯೋಜನೆಗಳ ಜಾರಿಗೆ ತರಲು ತಯಾರಿ ನಡೆಸಿದೆ.

ಶಾಲೆಯ ಹೊಸ ಯೋಜನೆಗಳ ಅನುಷ್ಠಾನಕ್ಕೆ ಹಣ ಹೊಂದಿಸುವ ಜತೆಗೆ ಅಭ್ಯುದಯ ಸಮಿತಿ ಮನೆಮನೆಗೆ ತೆರಳಿ ಶಾಲೆಯಲ್ಲಿ ಸಿಗುವ ವಿಶೇಷ ಸೌಲಭ್ಯಗಳ ಬಗ್ಗೆ ಪಾಲಕರಿಗೆ ಮನದಟ್ಟು ಮಾಡಿ ಮಕ್ಕಳನ್ನು ಶಾಲೆಗೆ ದಾಖಲಾತಿ ಮಾಡಲಾಗಿದೆ. ಮೂರು ಲಕ್ಷ ರೂ. ವೆಚ್ಚದಲ್ಲಿ ಶಾಲೆಗೆ ಬಣ್ಣ ಮಾಡಿಸಿದ್ದು, ದಾನಿಗಳ ಸಹಕಾರದಲ್ಲಿ ಕಂಪ್ಯೂಟರ್ ಕೂಡ ಅಳವಡಿಸಿದ್ದೇವೆ. ಈ ಬಾರಿ 46 ಮಕ್ಕಳು ಸೇರಿದ್ದಾರೆ. ಸಮಿತಿಯೇ ಶಾಲೆಗೆ ಪದವೀಧರ ಶಿಕ್ಷಕರನ್ನು ನೇಮಕ ಮಾಡಿಕೊಂಡು ಅವರಿಗೆ ಸಂಬಳ ಕೂಡ ಸಮಿತಿಯೇ ನೀಡುತ್ತದೆ. ಎಲ್‌ಕೆಜಿ, ಯುಕೆಜಿ ಹಾಗೂ 4ನೇ ತರಗತಿಯಿಂದ ಇಂಗ್ಲಿಷ್ ಶಿಕ್ಷಣ ನೀಡಲಾಗುತ್ತದೆ. ಸಮಿತಿ ಇಡೀ ಶಾಲೆ ಪರಿಸರವನ್ನೇ ಶೈಕ್ಷಣಿಕ ಪರಿಸರವಾಗಿ ಬದಲಾಯಿಸಿದೆ.
– ಗೌರಿ ಆರ್.ಶ್ರೀಯಾನ್, ಕಾವ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ

ನಮ್ಮ ಯೋಜನೆಯಂತೆ ಕೆಲಸ ಮಾಡಲು ಆರ್ಥಿಕ ಅಡಚಣೆ ಎದುರಾದರೂ ಶಿಕ್ಷಣ ಪ್ರೇಮಿಗಳು ಸಾಕಷ್ಟು ಸಹಕಾರ ನೀಡಿದ್ದರಿಂದ ಶಾಲೆಗೊಂದು ಹೊಸ ರೂಪ ಕೊಡುವ ಜತೆ ಮಕ್ಕಳ ಸಂಖ್ಯೆ ಏರಿಸಿಕೊಳ್ಳಲು ಸಹಕಾರಿ ಆಯಿತು. ಶಾಲೆಯಲ್ಲಿ ಸಿಗುವ ಸೌಲಭ್ಯಗಳ ಪಟ್ಟಿ ತಯಾರಿಸಿ ಪೋಷಕರಿಗೆ ತಲುಪಿಸುವ ಕೆಲಸ ಮಾಡಿದ್ದರಿಂದ ಶೈಕ್ಷಣಿಕ ವರ್ಷಕ್ಕೆ ಮಕ್ಕಳ ಸಂಖ್ಯೆ ಹೆಚ್ಚಾಗಲು ಕಾರಣ. ಶಾಲೆಗೆ ಮುಖ್ಯ ಶಿಕ್ಷಕರ ಕೊರತೆಯಿದ್ದು, ಸರ್ಕಾರ ಕಂಡ್ಲೂರು ಶಾಲೆ ಶಿಕ್ಷಕರ ಕೊರತೆ ನೀಗಿಸಬೇಕು. ಮಕ್ಕಳ ಕರೆತಂದು ಬಿಡಲು ವಾಹನ ವ್ಯವಸ್ಥೆ ಕೂಡ ಮಾಡಿಕೊಂಡಿದ್ದು, ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತದೆ.
-ಉದಯ್ ಶೆಟ್ಟಿ, ಕೋಟ ಪಡುಕೆರೆ, ಗೌರವ ಸಲಹೆಗಾರರು ಕನ್ನಡ ಶಾಲಾ ಅಭ್ಯುದಯ ಸಮಿತಿ

Leave a Reply

Your email address will not be published. Required fields are marked *