ನಾಸಾ ಸಂಶೋಧನೆಗೆ ಕನ್ನಡ ಮಾಧ್ಯಮ ವಿದ್ಯಾರ್ಥಿ

ಬದಿಯಡ್ಕ: ಕನ್ನಡ ಮಾಧ್ಯಮದಲ್ಲಿ ಪ್ರೌಢಶಾಲೆಯವರೆಗೆ ಓದಿದ ಕಾಸರಗೋಡು ಜಿಲ್ಲೆ ಬದಿಯಡ್ಕ ಮೂಲದ ಸಂಶೋಧನಾ ವಿದ್ಯಾರ್ಥಿ ಇಬ್ರಾಹಿಂ ಖಲೀಲ್‌ಗೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದಲ್ಲಿ ಉನ್ನತ ವೈಜ್ಞಾನಿಕ ಸಂಶೋಧನೆ ಮತ್ತು ಬಾಹ್ಯಾಕಾಶ ಕ್ಷೇತ್ರದ ಸಾಮರ್ಥ್ಯ ವೃದ್ಧಿ ಸಂಶೋಧನಾ ಕಾರ್ಯದಲ್ಲಿ ಪಾಲ್ಗೊಳ್ಳುವ ಅವಕಾಶ ಲಭಿಸಿದೆ.

ಮೇರಿ ಕ್ಯೂರಿ ಸಂಸ್ಥೆ ಸಂಶೋಧನೆಗೆ ಆರ್ಥಿಕ ನೆರವು ನೀಡಿದ್ದು, ಫುಲ್‌ಕಾಂಪ್ ಯೋಜನೆಯಡಿ ಬಾಹ್ಯಾಕಾಶ ರಾಕೆಟ್ ಉಡಾವಣೆಗೆ ಅತ್ಯವಶ್ಯಕವಾದ ಉಡ್ಡಯನ ವಾಹಕದ ತಾಂತ್ರಿಕ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ ಸಂಶೋಧನೆ ನಡೆಯಲಿದೆ. ನೂತನ ತಂತ್ರಜ್ಞಾನ ಅಭಿವೃದ್ಧಿ ಪ್ರಾಥಮಿಕ ಹಂತದಲ್ಲಿದ್ದು, ಸಂಶೋಧನೆಯಲ್ಲಿ ಇಬ್ರಾಹಿಂ ಮುಖ್ಯ ಭೂಮಿಕೆ ವಹಿಸಲಿದ್ದಾರೆ.

ಒಟ್ಟು 1,600 ಸಂಶೋಧನಾ ಅರ್ಜಿಗಳಲ್ಲಿ ಕೇವಲ 12 ಮಂದಿಗೆ ಸಂಶೋಧನೆ ಅವಕಾಶ ಸಿಕ್ಕಿದ್ದು, ಅವರಲ್ಲಿ ಇಬ್ರಾಹಿಂ ಓರ್ವರಾಗಿದ್ದಾರೆ. ಪ್ರಸ್ತುತ ಅಮೆರಿಕದ ಒಹಿಯೋ ಪ್ರಾಂತ್ಯದ ನಾಸಾದ ಗ್ಲೆನ್ ಸಂಶೋಧನಾ ಕೇಂದ್ರದಲ್ಲಿರುವ ಇಬ್ರಾಹಿಂ, ಎರಡು ವಾರ ತನಕ ಪ್ರತಿಷ್ಠಿತ ಸಂಶೋಧಕರೊಂದಿಗೆ ಚರ್ಚೆ ನಡೆಸಿ ಸಂಶೋಧನಾ ವಿಚಾರಗಳನ್ನು ಮಂಡಿಸಲಿದ್ದಾರೆ.

ಪ್ರತಿಭಾನ್ವಿತ ಹುಡುಗ: ಬದಿಯಡ್ಕದ ವ್ಯಾಪಾರಿ ಮಜೀದ್ ಪೈಕಾ -ಜುಬೈದಾ ಗೋಳಿಯಾಡಿ ದಂಪತಿ ಪುತ್ರ ಇಬ್ರಾಹಿಂ ಕೆಳ ಮಧ್ಯಮ ವರ್ಗದವರಾಗಿದ್ದು, ಪೆರಡಾಲದಲ್ಲಿರುವ ನವಜೀವನ ಹೈಸ್ಕೂಲ್‌ನಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ್ದರು. ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಪ್ಲಸ್ ಟು ಮುಗಿಸಿ, ಮಣಿಪಾಲ ತಾಂತ್ರಿಕ ಶಿಕ್ಷಣ ಸಂಸ್ಥೆಯಿಂದ ಏರೋನಾಟಿಕಲ್ ಇಂಜಿನಿಯರಿಂಗ್ ಪದವಿ ಹಾಗೂ ಜರ್ಮನಿಯ ಬೋಕಂನ ರುರ್ ಕಂಪ್ಯೂಟೇಶನಲ್ ವಿವಿಯಿಂದ ಉನ್ನತ ಪದವಿ ಶಿಕ್ಷಣ ಪಡೆದಿದ್ದರು.

1.30 ಕೋಟಿ ರೂ. ವಿದ್ಯಾರ್ಥಿ ವೇತನ: ಪಿ.ಎಚ್‌ಡಿ ಸಂಶೋಧನಾ ವಿದ್ಯಾರ್ಥಿ ಇಬ್ರಾಹಿಂ ಪ್ರೊ.ಇರಾಸ್ಮೋ ಕರೇರಾ ಮತ್ತು ಇವಾನ್ ಪಿನೆಡಾ ಮಾರ್ಗದರ್ಶನದಲ್ಲಿ ತಂತ್ರಜ್ಞಾನದ ಬೆಳವಣಿಗೆಯಲ್ಲಿ ತೊಡಗಿಸಿಕೊಂಡಿದ್ದು, 1.30 ಕೋಟಿ ರೂ. ವಿದ್ಯಾರ್ಥಿ ವೇತನ ಪಡೆಯಲಿದ್ದಾರೆ.