ಕನಕಗಿರಿ: ಅಂಗನವಾಡಿಗಳು ಕಾನ್ವೆಂಟ್‌ಗಿಂತ ಉತ್ತಮವಾಗಿದ್ದು, ಮಕ್ಕಳನ್ನು ಕಳುಹಿಸುವಂತೆ ಪಾಲಕರಿಗೆ ಪ್ರೇರೇಪಿಸುವ ಕೆಲಸ ಮೇಲ್ವಿಚಾರಕರು, ಕಾರ್ಯಕರ್ತರು ಮಾಡಬೇಕು ಎಂದು ಮಹಿಳಾ-ಮಕ್ಕಳ ಕಲ್ಯಾಣ ಇಲಾಖೆಯ ಡಿಡಿ ವೈ.ಪರಶುರಾಮ ಶೆಟ್ಟಪ್ಪನವರ ಹೇಳಿದರು.
ಜಿಲ್ಲೆಗೆ ಆಗಮಿಸಿದ ಬಳಿಕ ಮೊದಲ ಬಾರಿ ಇಲ್ಲಿನ ಸಿಡಿಪಿಒ ಕಚೇರಿಗೆ ಬುಧವಾರ ಭೇಟಿ ನೀಡಿ ಮೇಲ್ವಿಚಾರಕರ ಸಭೆ ನಡೆಸಿ ಮಾತನಾಡಿದರು.
ವಿರಾರೂ ರೂ. ಶಾಲೆ, ವಾಹನ ಶುಲ್ಕ ಭರಿಸಿ ಕಾನ್ವೆಂಟ್‌ನಲ್ಲಿ ಶಿಕ್ಷಣ ಪಡೆಯುವುದಕ್ಕಿಂತ ಅಂಗನವಾಡಿಯಲ್ಲಿ ಸರ್ಕಾರಿ ಸೌಲಭ್ಯಗಳೊಂದಿಗೆ ಉಚಿತವಾಗಿ ಪಡೆಯಬಹುದು. ಜತೆಗೆ ಪೌಷ್ಟಿಕ ಆಹಾರ, ಮಕ್ಕಳ ಆರೋಗ್ಯ ತಪಾಸಣೆಯೂ ದೊರೆಯಲಿದೆ. ಈ ಬಗ್ಗೆ ಪಾಲಕರಿಗೆ ತಿಳಿಸಬೇಕು. ಅಂಗನವಾಡಿ ಮಕ್ಕಳು ದೈಹಿಕ, ಮಾನಸಿಕವಾಗಿ ಸದೃಢವಾಗಿದ್ದು, ಕಾನ್ವೆಂಟ್ ಮಕ್ಕಳಲ್ಲಿ ಆ ಚೈತನ್ಯ ಕಾಣುವುದಿಲ್ಲ ಎಂದರು.
ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡುವ ಮೇಲ್ವಿಚಾರಕರು, ಮೊದಲು ದಾಸ್ತಾನು ಪರಿಶೀಲನೆ ಮಾಡಬೇಕು. ಕಟ್ಟಡ ಸುಸ್ಥಿತಿಯಲ್ಲಿದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ದುಸ್ಥಿತಿಯಲ್ಲಿದ್ದರೆ ಬೇರೆ ಕಡೆಗೆ ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಬೇಕು. ಮೇಲ್ವಿಚಾರಕರು ಫಲಾನುಭವಿಗಳ ಮನೆಗೆ ತೆರಳಿ ಸೌಲಭ್ಯ ತಲುಪುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಿಡಿಪಿಒ ವಿರೂಪಾಕ್ಷಿ, ಎಸಿಡಿಪಿಒ ಮೇಲ್ವಿಚಾರಕರಾದ ವಿಜಯಲಕ್ಷ್ಮೀ, ರತ್ನಮ್ಮ ತೋಳದ, ಶಾಹೀದಾಬೇಗಂ, ಸುಖನ್ಯಾ, ರುಕ್ಮಿಣಿ, ಉಮಾದೇವಿ, ಮೆಹಬೂಬಿ ಬೇಗಂ ಇತರರಿದ್ದರು.