ಕನಕಗಿರಿ: ಶಾಲಾ ಆರಂಭದ ಸಮಯವಾದರೂ ಸೋಮವಾರ ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಗೇಟ್ ತೆರೆಯದಿದ್ದರಿಂದ ವಿದ್ಯಾರ್ಥಿಗಳು, ಆಯಾ ಹಾಗೂ ಅತಿಥಿ ಶಿಕ್ಷಕರು ಗೇಟ್ ಬಳಿಯೇ ಕಾದು ನಿಂತಿದ್ದರು.
ಕನ್ನಡದಲ್ಲಿ ಒಂದರಿಂದ ಎಂಟನೇ ತರಗತಿ ಜತೆಗೆ ಆಂಗ್ಲ ಮಾಧ್ಯಮ ಶಾಲೆಯೂ ಆಗಿರುವ ಇಲ್ಲಿ, ಎಂದಿನಂತೆ 9.45ಕ್ಕೆ ಪ್ರಾರ್ಥನೆ ನಡೆಯಬೇಕು. ಆದರೆ, ಗಂಟೆ 9.46 ಆದರೂ ಒಬ್ಬ ಅತಿಥಿ ಶಿಕ್ಷಕಿ ಹಾಗೂ ಆಯಾ ಹೊರೆತು ಯಾವ ಕಾಯಂ ಶಿಕ್ಷಕರು ಶಾಲೆಗೆ ಬಂದಿರಲಿಲ್ಲ.
ಮುಖ್ಯ ಶಿಕ್ಷಕ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಡ್ಯೂಟಿಗೆ ನಿಯೋಜನೆ ಗೊಂಡಿದ್ದರಿಂದ ಸಹ ಶಿಕ್ಷಕರಿಗೆ ಪ್ರಭಾರ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಶುಕ್ರವಾರ ಪಟ್ಟಣದ ಜಾತ್ರೆ ನಡೆದಿದ್ದರಿಂದ ಸೋಮವಾರ ಮಕ್ಕಳು ಬಂದಿರುವುದಿಲ್ಲ ಎಂದು ಪ್ರಭಾರ ವಹಿಸಿಕೊಂಡವರು ಹಾಗೂ ಇತರ ಶಿಕ್ಷಕರು ಬೇಗನೆ ಬಂದು ಶಾಲಾ ಗೇಟ್ ಹಾಗೂ ತರಗತಿ ಕೊಠಡಿಗಳನ್ನು ತೆರೆಯಲು ಮುಂದಾಗಿಲ್ಲ. ಇದರಿಂದ 9.46 ರವರೆಗೆ ಮಕ್ಕಳು ಶಾಲೆಯ ಗೇಟ್ ಬಳಿ ಕಾಯುವಂತಾಗಿತ್ತು. 9.46ರ ಬಳಿಕ ಅತಿಥಿ ಶಿಕ್ಷಕ ಗೇಟ್ ಕೀಲಿ ತಂದು ತೆಗೆದರು. ಆ ನಂತರ ಒಬ್ಬೊಬ್ಬ ಶಿಕ್ಷಕರು ಶಾಲೆಯತ್ತ ಸುಳಿಯುವುದು ಕಂಡುಬಂತು.
ಸಿಆರ್‌ಪಿಯೂ ಆಗಿರುವ ಅಲ್ಲಿನ ಮುಖ್ಯ ಶಿಕ್ಷಕರನ್ನು ಮೊಬೈಲ್ ಸ್ಕ್ವೇಡ್ ಆಗಿ ನಿಯೋಜನೆ ಮಾಡಲಾಗಿದೆ. ಶಿಕ್ಷಕರು ಸರಿಯಾದ ಸಮಯಕ್ಕೆ ಶಾಲೆ ಬೀಗ ತೆರೆಯಬೇಕಿತ್ತು. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳಲಾಗುವುದು.
ನಟೇಶ ಬಿಇಒ, ಗಂಗಾವತಿ