More

    ಕನಕಗಿರಿಯಲ್ಲಿ ಕಣ್ಣೀರ ರಾಜಕಾರಣ, ಜನತೆಯ ಸಂಕಷ್ಟಕ್ಕೆ ಕೊರಗಲಿಲ್ಲ

    ಪಂಪಾರಡ್ಡಿ ಅರಳಹಳ್ಳಿ, ಕಾರಟಗಿ
    ಅಧಿಕಾರ ಇದ್ದಾಗ ಅರಿತು ನಡೆದರೆ ಆರು ಪಟ, ಮರೆತು ನಡೆದರೆ ಮೂರು ಪಟ ಎನ್ನುವ ಗಾದೆ ಮಾತನ್ನು ಕನಕಗಿರಿ ಕ್ಷೇತ್ರದ ಜನತೆ ಅಕ್ಷರಶಃ ಸತ್ಯವಾಗಿಸಿದ್ದಾರೆ!

    ಇತ್ತೀಚೆಗೆ ಶಾಸಕ ಶಿವರಾಜ ತಂಗಡಗಿ ಹಾಗೂ ಮಾಜಿ ಶಾಸಕ ಬಸವರಾಜ ದಢೇಸುಗೂರು ಕಣ್ಣೀರು ಹಾಕಿದ್ದಾರೆ. ರಾಜಕಾರಣಿಗಳು ಸುಖಾಸುಮ್ಮನೆ ಕಣ್ಣೀರು ಹಾಕುವವರಲ್ಲ. ಅವರ ರಾಜಕೀಯ ಅಸ್ತಿತ್ವಕ್ಕೆ ಧಕ್ಕೆ ಬಂದಾಗ ಮಾತ್ರ ಮೊಸಳೆ ಕಣ್ಣೀರು ಸುರಿಸುತ್ತಾರೆನ್ನುವುದು ಕ್ಷೇತ್ರದಲ್ಲಿ ತೀವ್ರ ಚರ್ಚೆಯಾಗುತ್ತಿದೆ.

    ಇದನ್ನೂ ಓದಿ: ಮೊದಲ ಬಾರಿಯ ಫೋಟೋಶೂಟ್​​​ನಲ್ಲಿ ಕಣ್ಣೀರಿಟ್ಟಿದ್ದ ನಟಿ ಕೃತಿ ಸನೋನ್!

    ಇತ್ತೀಚೆಗೆ ನಡೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕನಕಗಿರಿ ಕ್ಷೇತ್ರ ಇಂಥದ್ದೊಂದು ಮೊಸಳೆ ಕಣ್ಣೀರ ರಾಜಕಾರಣಕ್ಕೆ ಸಾಕ್ಷಿಯಾಗಿದೆ. ಶಾಸಕ ಶಿವರಾಜ ತಂಗಡಗಿ ಚುನಾವಣೆ ಪೂರ್ವದಲ್ಲಿ ಮೇ 5ರಂದು ಪಟ್ಟಣದ ಶ್ರೀಅಮ್ಮಾ ಮಹೇಶ್ವರಿ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಬೆಂಬಲಿತ ಹಾಲುಮತ ಸಮಾಜ ಬಾಂಧವರು ಏರ್ಪಡಿಸಿದ್ದ ಚಿಂತನ-ಮಂಥನ ಸಭೆಯಲ್ಲಿ, 2018ರ ಚುನಾವಣೆಯಲ್ಲಿ ನನ್ನ ವಿರುದ್ಧ ಅಪಪ್ರಚಾರ ಮಾಡಿ ಸೋಲಿಸಲಾಯಿತು.

    ನಾನು ಯಾರಿಗೂ ಅನ್ಯಾಯ ಮಾಡಿಲ್ಲ, ನನ್ನನ್ನು ಕೈ ಬಿಡಬೇಡಿ ಎಂದು ಭಾವುಕರಾಗಿ ಕಣ್ಣೀರು ಹಾಕುವ ಮೂಲಕ ಮತಯಾಚಿಸಿದ್ದರು.

    ಫಲಿತಾಂಶದ ಬಳಿಕ 42,277 ಭಾರಿ ಮತಗಳ ಅಂತರದಿಂದ ಪರಾಭವಗೊಂಡ ಮಾಜಿ ಶಾಸಕ ಬಸವರಾಜ ದಢೇಸುಗೂರು ನಾಗನಕಲ್ ಗ್ರಾಮದ ಎಲ್‌ವಿಟಿ ತಪೋವನದಲ್ಲಿ ಮೇ 15ರಂದು ಏರ್ಪಡಿಸಿದ್ದ ಪಕ್ಷದ ಆತ್ಮಾವಲೋಕನ ಸಭೆಯಲ್ಲಿ 2009ರಿಂದ ಇಲ್ಲಿಯವರೆಗೆ ಎಂಪಿ, ಜಿಪಂ, ತಾಪಂ, ಗ್ರಾಪಂ, ಎಪಿಎಂಸಿ, ಪುರಸಭೆ ಸೇರಿ ಅನೇಕ ಚುನಾವಣೆಗಳನ್ನು ನಡೆಸಿಕೊಂಡು ಬಂದಿದ್ದೇನೆ.

    ಕೈಲಾದಷ್ಟು ದಾನ-ಧರ್ಮ ಕೂಡ ಮಾಡಿದ್ದೇನೆ. ಕ್ಷೇತ್ರಕ್ಕೆ ಸಾವಿರ ಕೋಟಿಗೂ ಅಧಿಕ ಅನುದಾನ ತಂದು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಆದರೆ, ಕಾರ್ಯಕರ್ತರು ಕ್ಷೇತ್ರಕ್ಕೆ ಏನು ಮಾಡಿದ್ದೇನೆ ಎನ್ನುವುದನ್ನು ನೋಡದೆ, ತಮಗೇನು ಮಾಡಿದ್ದೇನೆಂದು ನನ್ನನ್ನು ಕೇಳಿದರು. ಹೀಗಾಗಿ ನಾನು ಸೋಲು ಅನುಭವಿಸಬೇಕಾಯಿತು ಎಂದು ಕಣ್ಣೀರು ಸುರಿಸಿದ್ದಾರೆ.

    ಇಬ್ಬರು ನಾಯಕರ ಕಣ್ಣೀರ ರಾಜಕಾರಣದ ವಿಡಿಯೋಗಳು ಕೆಲದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಕ್ಷೇತ್ರಾದ್ಯಂತ ಹರಿದಾಡುತ್ತಿದ್ದು, ವ್ಯಾಪಕ ಚರ್ಚೆಗೆ ಕಾರಣವಾಯಿತು.

    ಕರೊನಾ ವೇಳೆ ಇಡೀ ಕ್ಷೇತ್ರದ ಜನತೆ ಚಿಕಿತ್ಸೆಗಾಗಿ ಅಲೆದಾಡಿದರು. ಆಗ ಉದ್ಯೋಗವೂ ಇಲ್ಲದೆ ಒಂದೊತ್ತಿನ ಊಟಕ್ಕಾಗಿ ಪರದಾಡಿದರು. ಕೆಲವರು ಸೂಕ್ತ ಚಿಕಿತ್ಸೆ ದೊರೆಯದೇ ಪ್ರಾಣ ತೆತ್ತರು. ಇತ್ತ ರೈತಾಪಿ ವರ್ಗ ರಸಗೊಬ್ಬರ, ಕೀಟನಾಶಕಗಳ ಬೆಲೆ ಏರಿಕೆಯಿಂದ ಕಂಗೆಟ್ಟಿತ್ತು.

    ಮಳೆಯ ಆರ್ಭಟಕ್ಕೆ ಕೈಗೆ ಬಂದ ಬೆಳೆ ಬಾಯಿಗೆ ಬರದಂತಾಯಿತು. ಆಗ ರೈತರು ಅಳಿದುಳಿದ ಬೆಳೆಯನ್ನು ರಸ್ತೆಗೆ ಸುರಿದು ಪ್ರತಿಭಟಿಸಿ ತಮ್ಮ ಆಕ್ರೋಶ ಹೊರಹಾಕಿದರು. ಇನ್ನಿಲ್ಲದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನರಳಾಡಿದರು. ಮಳೆಯಿಂದಾಗಿ ಅನೇಕ ಕುಟುಂಬಗಳು ಮನೆ ಕಳೆದುಕೊಂಡು ನಿರಾಶ್ರಿತರಾದರು. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ನಾಯಕರ ಕಣ್ಣಲ್ಲಿ ಬಾರದ ನೀರು, ಚುನಾವಣಾ ವೇಳೆ ಧಾರಾಕಾರವಾಗಿ ಹರಿದಿದ್ದು, ವಿಪರ್ಯಾಸವೇ ಸರಿ.

    ಚುನಾವಣೆ ವೆಚ್ಚಕ್ಕಾಗಿ ದೇಣಿಗೆ

    2018ರ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು, ಜನಸಾಮಾನ್ಯರು ಸಹ ಬಸವರಾಜ ದಢೇಸುಗೂರು ಅವರಿಗೆ ಚುನಾವಣೆ ವೆಚ್ಚಕ್ಕಾಗಿ ಹಣ, ಬೆಳೆದ ಭತ್ತ, ಕುರಿ, ಕೋಳಿ ಸೇರಿ ವಿವಿಧ ವಸ್ತುಗಳನ್ನು ದೇಣಿಗೆ ನೀಡಿದ್ದರು. ಜತೆಗೆ ಎರಡು ಅವಧಿಯಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಶಿವರಾಜ ತಂಗಡಗಿ ವಿರುದ್ಧ ಜನತೆ ಬಸವರಾಜ ದಢೇಸುಗೂರು ಅವರನ್ನು ಗೆಲ್ಲಿಸಿದ್ದರು.

    ಆದರೆ, ಬಸವರಾಜ ದಢೇಸುಗೂರು ಅಧಿಕಾರ ದೊರೆಯುತ್ತಿದ್ದಂತೆ ಅನೇಕ ವಿಷಯಗಳಲ್ಲಿ ರಾಜ್ಯಾವ್ಯಾಪಿ ಸುದ್ದಿಯಾಗುವ ಮೂಲಕ ಪಕ್ಷಕ್ಕೆ ಮುಜುಗರವುಂಟು ಮಾಡಿದ್ದರು. ಆಡಳಿತ ವೈಫಲ್ಯ, ಪಕ್ಷ ಹಾಗೂ ಕಾರ್ಯಕರ್ತರ ನಡುವೆ ಸಮನ್ವಯತೆ ಕಾಪಾಡಿಕೊಳ್ಳುವಲ್ಲಿ ವಿಫಲರಾಗಿದ್ದರಿಂದ 2023ರ ಚುನಾವಣೆಯಲ್ಲಿ ಅದರ ಬೆಲೆ ತೆತ್ತಬೇಕಾಯಿತು.

    ಭಾರಿ ಮತಗಳ ಅಂತರದಿಂದ ಗೆಲುವು

    ಪ್ರಸ್ತುತ ಚುನಾವಣೆಯಲ್ಲಿ ಶಿವರಾಜ ತಂಗಡಗಿ ಅವರಿಗೂ ಅವರ ಪಕ್ಷದ ಕೆಲ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಚುನಾವಣೆ ವೆಚ್ಚಕ್ಕೆ ದೇಣಿಗೆ ನೀಡಿದ್ದಾರೆ. ಇದೀಗ ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸಿರುವ ಶಿವರಾಜ ತಂಗಡಗಿ ಕ್ಷೇತ್ರದ ಅಭಿವೃದ್ಧಿಗೆ ಹಾಗೂ ಗೆಲ್ಲಲು ಹಗಲಿರುಳು ಶ್ರಮಿಸಿದ ಅಪಾರ ಕಾರ್ಯಕರ್ತರನ್ನು ಅದ್ಹೇಗೆ? ನಡೆಸಿಕೊಂಡು ಹೋಗುತ್ತಾರೆಂಬುದನ್ನು ಕಾದು ನೋಡಬೇಕಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts