ಕನಕಗಿರಿ: ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಯಾದಗಿರಿ ಜಿಲ್ಲೆಯ ಪಿಎಸ್‌ಐ ಪರಶುರಾಮ್ ಛಲವಾದಿ ಸಾವಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಆಗ್ರಹಿಸಿ ತಾಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟ ಶನಿವಾರ ಗ್ರೇಡ್ 2 ತಹಸೀಲ್ದಾರ್ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿತು.
ಮುಖಂಡ ಪಾಮಣ್ಣ ಅರಳಿಗನೂರು ಮಾತನಾಡಿ, ಯಾದಗಿರಿ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಪರಶುರಾಮ ಛಲವಾದಿ ಆ.1ರಂದು ನಗರ ಠಾಣೆಯಿಂದ ಸೈಬರ್ ಠಾಣೆಗೆ ವರ್ಗಾವಣೆಗೊಂಡಿದ್ದರು. ವರ್ಗಾವಣೆಯಾದ ಹಿನ್ನೆಲೆಯಲ್ಲಿ ಬೀಳ್ಕೊಡುಗೆ ಸಮಾರಂಭ ಮುಗಿಸಿಕೊಂಡು ಪೊಲೀಸ್ ವಸತಿ ಗೃಹಕ್ಕೆ ತೆರಳಿದ್ದು, ಅದೇ ಕಟ್ಟಡದಲ್ಲಿ ಸಾವನ್ನಪ್ಪಿರುವುದು ಅನುಮಾನ ಮೂಡಿಸಿದೆ.
ಯಾದಗಿರಿ ಶಾಸಕ ಚನ್ನಾರೆಡ್ಡಿ ಹಾಗೂ ಅವರ ಪುತ್ರ ಲಕ್ಷಾಂತರ ರೂ. ಲಂಚಕ್ಕೆ ಬೇಡಿಕೆ ಇಟ್ಟಿರುವುದಾಗಿ ಮೃತ ಪಿಎಸ್‌ಐ ಪತ್ನಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಹೇಳಿಕೆ ನೀಡಿದ್ದಾರೆ. ಈ ಪ್ರಕರಣವನ್ನು ಗೃಹ ಸಚಿವರು ಸಮಗ್ರ ತನಿಖೆಗೆ ಆದೇಶಿಸಿ ಸಾವಿಗೀಡಾದ ಅಧಿಕಾರಿಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ಗ್ರೇಡ್ 2 ತಹಸೀಲ್ದಾರ್ ವಿ.ಎಚ್. ಹೊರಪೇಟಿಗೆ ಮನವಿ ಸಲ್ಲಿಸಿದರು.
ಮಾತಂಗ ಮಹಾಸಭಾ ಅಧ್ಯಕ್ಷ ಲಿಂಗಪ್ಪ ಪೂಜಾರ, ಪ್ರಗತಿಪರ ಸಂಘಟನೆಯ ನೀಲಕಂಠ ಬಡಿಗೇರ, ವೆಂಕಟೇಶ ನಿರ್ಲೂಟಿ, ಮಂಜುನಾಥ ಯಾದವ, ಪಂಪಾಪತಿ, ಶೇಖಪ್ಪ ಪೂಜಾರ, ತಿಮ್ಮಣ್ಣ ಛಲವಾದಿ, ಸಣ್ಣ ದುರುಗಪ್ಪ ಇದ್ದರು.