ಕನಕಗಿರಿ: ಕುತೂಹಲ ಕೆರಳಿಸಿದ್ದ ತಾಲೂಕಿನ ಹಿರೇಖೇಡ ಗ್ರಾಪಂ ಅಧ್ಯಕ್ಷ ವಿರುದ್ಧದ ಅವಿಶ್ವಾಸದಲ್ಲಿ 14 ಸದಸ್ಯರು ಸಮ್ಮತಿ ಸೂಚಿಸಿದ್ದು, ಅಧ್ಯಕ್ಷ ಕರಿಯಪ್ಪ ಅವರು ಸ್ಥಾನ ಕಳೆದುಕೊಂಡಿದ್ದಾರೆ.
18 ಸದಸ್ಯ ಬಲದ ಗ್ರಾಪಂನಲ್ಲಿ ಉಪವಿಭಾಗಾಧಿಕಾರಿ ಕ್ಯಾ.ಮಹೇಶ ಮಾಲಗಿತ್ತಿ ನೇತೃತ್ವದಲ್ಲಿ ಬುಧವಾರ ಅವಿಶ್ವಾಸ ಮಂಡನೆಗಾಗಿ ಸಭೆ ಕರೆಯಲಾಗಿತ್ತು. ಅಧ್ಯಕ್ಷ ಕರಿಯಪ್ಪ, ಸದಸ್ಯರಾದ ಶರಣಪ್ಪ, ನರಿಯಪ್ಪ, ತುಳಜಾ ಭವಾನಿ ಅವರನ್ನು ಹೊರೆತುಪಡಿಸಿ ಉಳಿದ 14 ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದು ಎಲ್ಲರೂ ಅಧ್ಯಕ್ಷ ವಿರುದ್ಧ ಅವಿಶ್ವಾಸಕ್ಕೆ ಸಮ್ಮತಿ ಸೂಚಿಸಿದರು.
ಹಲವು ಆರೋಪಗಳನ್ನು ಹೊತ್ತಿದ್ದ ಕರಿಯಪ್ಪ ವಿರುದ್ಧ ಅ.28ರಂದು ಸದಸ್ಯರು ಎಸಿಗೆ ಅವಿಶ್ವಾಸಕ್ಕಾಗಿ ಮನವಿ ಸಲ್ಲಿಸಿದ್ದರು. ನಂತರ ಇನ್ನುಳಿದ 13 ತಿಂಗಳ ಅಧಿಕಾರಕ್ಕಾಗಿ ಅಧ್ಯಕ್ಷರ ಬದಲಾವಣೆ ಬೇಡ ಎನ್ನುವ ಮಾತುಗಳು ವ್ಯಕ್ತವಾಗಿದ್ದವು. ಆದರೆ, ಪಕ್ಷದ ವರಿಷ್ಠರ ಒತ್ತಾಯಕ್ಕೆ ಕೆಲ ಸದಸ್ಯರು ಬೆಂಬಲಿಸಿದ್ದಾರೆ. ಮುಂದಿನ ಅಧ್ಯಕ್ಷರ ಆಯ್ಕೆ ದಿನಾಂಕವನ್ನು ಜಿಲ್ಲಾಧಿಕಾರಿ ನಿಗದಿಗೊಳಿಸಲಿದ್ದಾರೆ ಎಂದು ಎಸಿ ಕ್ಯಾ.ಮಹೇಶ ಮಾಲಗಿತ್ತಿ ತಿಳಿಸಿದರು. ಪಿಐ ಎಂ.ಡಿ. ಫೈಜುಲ್ಲಾ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ತಹಸೀಲ್ದಾರ್ ವಿಶ್ವನಾಥ ಮುರುಡಿ, ಪಿಡಿಒ ಯು.ಮಲ್ಲಿಕಾರ್ಜುನ, ಗ್ರಾಪಂ ಸದಸ್ಯರಾದ ಭೀಮನಗೌಡ, ಬಸನಗೌಡ, ಲಕ್ಷ್ಮವ್ವ, ರೇಣುಕಮ್ಮ, ಮೀನಾಕ್ಷಿ, ಬಾರಿಮರದಪ್ಪ, ಶರಣಪ್ಪ, ಸಲೀಂಪಾಷಾ, ಮಹ್ಮದ್‌ಸಾಬ್ ಇತರರಿದ್ದರು.
ರೇಣುಕಮ್ಮಗೆ ಪಟ್ಟ ಸಾಧ್ಯತೆ?: ಎಸ್ಸಿ ಮೀಸಲಿರುವ ಅಧ್ಯಕ್ಷ ಸ್ಥಾನಕ್ಕೆ ಕರಿಯಪ್ಪನನ್ನು ಹೊರೆತುಪಡಿಸಿದರೆ ಆ ಮೀಸಲಾತಿಗೆ ಉಳಿದಿರುವುದು ಹಿರೇಖೇಡ ಗ್ರಾಪಂ ಸದಸ್ಯೆ ರೇಣುಕಮ್ಮ ಮಾತ್ರ. ಇದರಿಂದ ಅವರೇ ಅಧ್ಯಕ್ಷರಾಗುವುದು ಖಚಿತವಾಗಿದೆ.