ಕನಕಗಿರಿ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ಸಿನ ವ್ಯವಸ್ಥೆ, ವಸತಿ ನಿಲಯದ ಆಯ್ಕೆ ಪಟ್ಟಿ ಬಿಡುಗಡೆ, ಶಾಲಾ-ಕಾಲೇಜುಗಳಿಗೆ ಮೂಲಭೂತ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ರಸ್ತೆ ಸಂಚಾರ ತಡೆದು ಗುರುವಾರ ಪ್ರತಿಭಟಿಸಿದರು.
ಸಂಘಟನೆಯ ತಾಲೂಕು ಕಾರ್ಯದರ್ಶಿ ಶಿವಕುಮಾರ ಈಚನಾಳ ಮಾತನಾಡಿ, ರಾಜ್ಯದಲ್ಲಿ ಶಾಲಾ ಕಾಲೇಜು ಆರಂಭವಾಗಿ 2 ತಿಂಗಳು ಕಳೆದಿದೆ. ಪಿಯು, ಪ್ರೌಢ ಶಾಲೆ ವಿದ್ಯಾರ್ಥಿಗಳು ವಸತಿ ನಿಲಯಗಳಿಗೆ ಅರ್ಜಿ ಹಾಕಿದರೂ ಇದುವರೆಗೂ ಆಯ್ಕೆ ಪಟ್ಟಿ ಪ್ರಕಟಿಸದಿದ್ದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಗ್ರಾಮೀಣ ಭಾಗದಿಂದ ಕನಕಗಿರಿಗೆ ಬರುವ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ಸಿನ ವ್ಯವಸ್ಥೆ ಇಲ್ಲದೆ ತರಗತಿಗಳಿಂದ ದೂರ ಉಳಿಯುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಸರಿಯಾಗಿ ಬಸ್ ಸೌಲಭ್ಯ ಒದಗಿಸುವಲ್ಲಿ ಸರ್ಕಾರ ಹಾಗೂ ಡಿಪೋ ಮ್ಯಾನೇಜರ್ ವಿಫಲರಾಗಿದ್ದಾರೆ ಎಂದು ದೂರಿದರು.
ಶಾಲಾ ಕಾಲೇಜುಗಳಲ್ಲಿ ಶೌಚಗೃಹಗಳಿಲ್ಲದೆ ವಿದ್ಯಾರ್ಥಿನಿಯರು ಮುಜುಗರಕ್ಕೀಡಾಗುತ್ತಿದ್ದಾರೆ. ಪಟ್ಟಣಕ್ಕೆ ಬಿಸಿ ಇಲಾಖೆಯ ವಸತಿ ನಿಲಯಗಳನ್ನು ಆರಂಭಿಸಿ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಗಂಗಾವತಿ ತಾಲೂಕು ಅಧ್ಯಕ್ಷ ಗ್ಯಾನೇಶ್ ಕಡಗದ, ಹನುಮೇಶ್, ನಾಗರಾಜ್, ಬಾಲಾಜಿ ಶಂಕರ್, ಶರೀಫ್, ಮೌನೇಶ್, ದರ್ಶನ್, ಲಕ್ಷ್ಮಣ, ಮಾರುತಿ, ಶಂಕರ್ ಇತರರಿದ್ದರು.