ಕನಕಗಿರಿ: ತಾಲೂಕು ವ್ಯಾಪ್ತಿಯ ಕೆರೆಗಳನ್ನು ಭರ್ತಿ ಮಾಡಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕನಕಗಿರಿ ತಾಲೂಕು ಘಟಕ ಇಲ್ಲಿನ ತಹಸಿಲ್ ಕಚೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿತು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಗದ್ದಿ ಮಾತನಾಡಿ, ಕನಕಗಿರಿ ಪಟ್ಟಣದ ಲಕ್ಷ್ಮೀದೇವಿ ಕೆರೆ, ಕಾಟಾಪುರ ಕೆರೆ ಸಹಿತ ಇತರೇ ಕೆರೆಗಳಿಗೆ ನೀರು ತುಂಬಿಸಲು ಕೆರೆ ತುಂಬುವ ಯೋಜನೆ ತರಲಾಗಿದೆ. ಆದರೆ, ಕನಕಗಿರಿ, ಕಾಟಾಪುರ ಕೆರೆಗಳ ಹೊರೆತು ಯಾವುದೇ ಕೆರೆಗಳು ಭರ್ತಿಯಾಗಿಲ್ಲ. ಕೆರೆಗಳು ಭರ್ತಿಯಾದರೆ ಬೋರ್‌ವೆಲ್‌ಗಳಿಗೆ ಅಂತರ್ಜಲ ಹೆಚ್ಚಾಗಲಿದೆ. ಜನ ಜಾನುವಾರುಗಳಿಗೆ ನೀರು ದೊರೆಯುತ್ತದೆ. ಆದರೆ, ನೂರಾರು ಕೋಟಿ ರೂ. ವ್ಯಯ ಮಾಡಿರುವ ಯೋಜನೆಯಿಂದ ಈ ವರ್ಷ ಕೆರೆಗಳು ಸಂಪೂರ್ಣ ಭರ್ತಿಯಾಗದೇ ಬೇಸಿಗೆಯಲ್ಲಿ ನೀರಿನ ಅಭಾವಾಗುತ್ತಿದೆ. ಅಲ್ಲದೆ ರೈತರ ಬೆಳೆಗಳು ಒಣಗುತ್ತವೆ. ಆದರೂ ಕ್ಷೇತ್ರದ ಶಾಸಕರು, ಜಿಲ್ಲಾಡಳಿತ ಕ್ರಮ ವಹಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿಸುವವರೆಗೂ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಪಟ್ಟುಹಿಡಿದರು.
ಎಂಟು ದಿನಗಳಲ್ಲಿ ವಿದ್ಯುತ್ ಮತ್ತು ಮೋಟಾರ್ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಕನಕಗಿರಿಯ ಪ್ರತಿಯೊಂದು ಕೆರೆಗಳನ್ನು ತುಂಬಿಸುವ ಕಾರ್ಯವನ್ನು ಆರಂಭಿಸಲಾಗುವುದು ಎಂದು ಸಣ್ಣ ನೀರಾವರಿ ಎಇಇ ಸೆಲ್ವಕುಮಾರ್, ತಹಸೀಲ್ದಾರ್ ವಿಶ್ವನಾಥ ಮುರುಡಿ ಭರವಸೆ ನೀಡಿದ್ದರಿಂದ ಹೋರಾಟಗಾರರು ಉಪವಾಸ ಸತ್ಯಾಗ್ರಹವನ್ನು ಹಿಂಪಡೆದರು.
ಸಂಘದ ತಾಲೂಕು ಅಧ್ಯಕ್ಷ ಭೀಮನಗೌಡ ಜೀರಾಳ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬಡಿಗೇರ್, ಉಪಾಧ್ಯಕ್ಷ ನಿಂಗಪ್ಪ ಉಡೆಜಾಲಿ, ಪದಾಧಿಕಾರಿಗಳಾದ ಬಾಲಪ್ಪ ನಾಡಿಗೇರ್, ಶಿವಣ್ಣ ಅಂಗಡಿ ರೈತ ಮುಖಂಡರಾದ ಸೋಮನಾಥ ನಾಯಕ್, ಸಣ್ಣ ಶೇಖರಪ್ಪ ಗದ್ದಿ, ರಾಮಲಿಂಗಪ್ಪ ಗದ್ದಿ, ಸಣ್ಣ ಯಂಕಪ್ಪ ಗೊಲ್ಲರ , ಸಿದ್ದು ಕಾರಪುಡಿ, ಕನಕಪ್ಪ ಗುಡದೂರ, ಮಂಜುನಾಥ್ ಮುಸಲಾಪುರ ಇತರರಿದ್ದರು.