ಕನಕಗಿರಿ: ಭರವಸೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ತಾಲೂಕಿನ ಸುಳೇಕಲ್ ಗ್ರಾಪಂ ವ್ಯಾಪ್ತಿಯಲ್ಲಿ ಬುಧವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಅಧಿಕಾರಕ್ಕಾಗಿ ಜನರಿಗೆ ಸುಳ್ಳು ಹೇಳಿ ಮತ ಪಡೆದಿಲ್ಲ. ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇನೆ. ಕ್ಷೇತ್ರ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ತಾಲೂಕಿನ ಕೆ.ಕಾಟಾಪೂರ ಗ್ರಾಮದ ಪರಿಶಿಷ್ಟ ಪಂಗಡ ಹಾಗೂ ಸುಳೇಕಲ್ ಗ್ರಾಮದ ಪರಿಶಿಷ್ಟ ಜಾತಿ ಕಾಲನಿ ಸಿಸಿ ರಸ್ತೆ ಕಾಮಗಾರಿಗೆ ತಲಾ 40 ಲಕ್ಷ ರೂ, ಸುಳೇಕಲ್ ಗ್ರಾಮದ ಅಲ್ಪಸಂಖ್ಯಾತರ ಕಾಲನಿ ಸಿಸಿ ರಸ್ತೆ ನಿರ್ಮಾಣಕ್ಕೆ 10 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿರುವುದಾಗಿ ಸಚಿವರು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಮಕ್ಕಳಂತೆ ನನ್ನ ಕ್ಷೇತ್ರದ ಮಕ್ಕಳು ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಫಲಿತಾಂಶ ಪಡೆಯಲಿ ಎನ್ನುವ ಕಾರಣಕ್ಕೆ ಜಿಲ್ಲಾಡಳಿತ ಉತ್ತಮವಾಗಿ ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ 10ನೇ ತರಗತಿ ಮಕ್ಕಳಿಗೆ ಪರೀಕ್ಷೆಗೆ ಯಾವ ರೀತಿ ಮಾಡಬೇಕೆನ್ನುವ ಕಾರ್ಯ ನಡೆಯುತ್ತಿದೆ. ಈ ಬಾರಿ ಜಿಲ್ಲೆಗೆ ಉತ್ತಮ ಫಲಿತಾಂಶ ಬರುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ ಕೆ. ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ನಾಯಕ, ಜಿಪಂ ಮಾಜಿ ಸದಸ್ಯ ವೀರೇಶ ಸಮಗಂಡಿ, ಪ್ರಮುಖರಾದ ಸಿದ್ದಪ್ಪ ನಿರ್ಲೂಟಿ ಇತರರಿದ್ದರು.
ಕೋಟ್
ಕನಕಗಿರಿ ಉತ್ಸವ ಆಚರಿಸುವ ಸಂಬಂಧವಾಗಿ ಫೆ.10 ಇಲ್ಲವೇ 11ಕ್ಕೆ ಪೂರ್ವಭಾವಿ ಸಭೆ ಆಯೋಜಿಸಲಾಗುವುದು. ಸಭೆಯಲ್ಲಿ ನಿರ್ಣಯವಾದಂತೆ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು. ಜಾತ್ರೆ ಮತ್ತು ಉತ್ಸವ ಒಂದೆ ದಿನ ಮಾಡುವ ಉದ್ದೇಶವಿದೆ. ನನ್ನ ಅಭಿಪ್ರಾಯವೇ ಅಂತಿಮವಲ್ಲ. ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಿ ಉತ್ಸವದ ದಿನ ಅಂತಿಮಗೊಳಿಸಲಾಗುವುದು.
ಶಿವರಾಜ ತಂಗಡಗಿ
ಜಿಲ್ಲಾ ಉಸ್ತುವಾರಿ ಸಚಿವಅವಸರದಲ್ಲಿ ಕಾಗುಣಿತ ತಪ್ಪಾಗಿರಬಹುದು
ಕನ್ನಡ ಸ್ಪಷ್ಟವಾಗಿ ಓದಲು, ಬರೆಯಲು ಬರುವುದರಿಂದಲೇ ಸಿಎಂ ಸಿದ್ದರಾಮಯ್ಯ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆಯನ್ನು ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಶುಭವಾಗಲಿ ಕಾಗುಣಿತ ದೋಷಕ್ಕೆ ಸ್ಪಷ್ಟನೆ ನೀಡಿದರು. ಕಾರಟಗಿಯ ಅಂಗನವಾಡಿ ಕೇಂದ್ರ ಉದ್ಘಾಟನೆಯಲ್ಲಿ ಶುಭವಾಗಲಿ ಬರೆಯುವಾಗ ಕಾಗುಣಿತ ಬರಹ ಕುರಿತು ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾದ ಹಿನ್ನಲೆಯಲ್ಲಿ ಕಾರ್ಯಕ್ರಮದ ಗಲಿಬಿಲಿ ಮತ್ತು ಅವಸರದಲ್ಲಿ ಕಾಗುಣಿತ ದೋಷವಾಗಿರಬಹುದು. ಇದನ್ನೆ ಕೆಲವರು ನನ್ನ ಬಗ್ಗೆ ಅಪಪ್ರಚಾರ ಮಾಡಿದ್ದಾರೆಂದು ಎಂದು ಆಕ್ರೋಶ ವ್ಯಕ್ತಪಡಿಸಿದರು. 12 ವರ್ಷಗಳಲ್ಲಿ ವಿವಿಧ ಖಾತೆಗಳ ಸಚಿವನಾಗಿ ಕೆಲಸ ಮಾಡಿರುವೆ. ಎಲ್ಲಿಯೂ ಕನ್ನಡದ ಬಗ್ಗೆ ತಪ್ಪಾಗಿ ಬರೆಯುವುದಾಗಿ, ಮಾತನಾಡುವುದಾಗಲಿ ಮಾಡಿಲ್ಲ. ನಾನು ಹೇಗೆ ಎಂಬುದು ಕ್ಷೇತ್ರದ ಜನರಿಗೆ ಗೊತ್ತಿದೆ. ವಿರೋಧಿಗಳ ಅಪಪ್ರಚಾರಕ್ಕೆ ನಾನು ಹೆದರುವುದಿಲ್ಲ ಎಂದರು.